ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆಗೆ ಪ್ರತಿಭಟನೆ: ಡಿಎಚ್‌ಒಗೆ ದೂರು

Update: 2017-09-08 18:29 GMT

ಹೆಬ್ರಿ, ಸೆ.8: ಹೆಬ್ರಿಯಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸಮುದಾಯ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ, ಚಿಕಿತ್ಸೆಗೆಂದು ಬರುವ ಬಡಜನರು ವೈದ್ಯರು ಹಾಗೂ ಸಿಬ್ಬಂದಿಗಲ ಸೇವೆ ಲಭ್ಯವಿಲ್ಲದೇ ತೊಂದರೆ ಅನುಭವಿಸಬೇಕಾಗಿದೆ ಎಂದು ಹೆಬ್ರಿಯ ಪ್ರಗತಿಪರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಿತಿಯ ವತಿಯಿಂದ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಎದುರು ಗುರುವಾರ ಆಯೋಜಿಸಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡುತಿದ್ದರು. ಹೊಸ ಬೃಹತ್ ಕಟ್ಟಡ ಹೊರಗಿನಿಂದ ಸುಸಜ್ಜಿತವಾಗಿ ಕಂಡರೂ ಕನಿಷ್ಠ ಮೂಲಭೂತ ಸೌಲಭ್ಯವಿಲ್ಲದೆ, ಚಿಕಿತ್ಸೆಗೆಂದು ಬರುವ ಬಡ ಜನರು ಸೂಕ್ತ ಚಿಕಿತ್ಸೆ ದೊರಕದೇ ಹಿಂದಿರುಗಬೇಕಾಗಿದೆ. ಇಲ್ಲಿ ರೋಗಿಗಳಿಗೆ ಸರಿಯಾದ ಹಾಸಿಗೆ ವ್ಯವಸ್ಥೆ, ಸ್ಕ್ಯಾನಿಂಗ್, ಔಷಧಿ, ಎಕ್ಸ್-ರೇ ಮುಂತಾದ ಮೂಲಭೂತ ವ್ಯವಸ್ಥೆಯಿಲ್ಲದೆ ರೋಗಿಗಳು ಪರದಾಡುವಂತಾಗಿದೆ ಎಂದವರು ಹೇಳಿದರು.

ಹೆಬ್ರಿ, ನಾಡ್ಪಾಲು, ಬೇಳಂಜೆ-ಕುಚ್ಚೂರು, ಚಾರ, ಮುದ್ರಾಡಿ, ಶಿವಪುರ, ಕಡ್ತಲ, ಬೈರಂಪಳ್ಳಿ-ಪೆರ್ಡೂರು ಹೋಬಳಿ, ವರಂಗ, ಕಳ್ತೂರು, ಮಡಾಮಕ್ಕಿ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಭಾಗದ ಜನರು, ನಕ್ಸಲ್ ಬಾಧಿತ ಕಬ್ಬಿನಾಲೆ, ಕೂಡ್ಲು, ಮೇಗದ್ದೆ ಪ್ರದೇಶಗಳ ಜನರು, ಹೆಬ್ರಿ ಆಸುಪಾಸಿನ ವಿವಿಧ ಶಾಲೆಗಳ ಸಾವಿರಾರು ಹಾಸ್ಟೆಲ್ ವಿದ್ಯಾರ್ಥಿಗಳು ಚಿಕಿತ್ಸೆಗೆ ಹೆಬ್ರಿ ಆಸ್ಪತ್ರೆಯನ್ನೇ ಅವಲಂಬಿ ಸಬೇಕಾಗಿದೆ ಎಂದು ಸಂಜೀವ ಶೆಟ್ಟಿ ವಿವರಿಸಿದರು.

ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇವಲ ಒಬ್ಬಿಬ್ಬರು ವೈದ್ಯರು ಮತ್ತು ಶುಶ್ರೂಷಕಿಯರಿದ್ದು, ತಜ್ಞ ವೈದ್ಯರೇ ಇಲ್ಲ. ಇರುವ ವೈದ್ಯಾಧಿಕಾರಿಗಳು ವಿವಿದೆಡೆ ಮೀಟಿಂಗ್, ಇತರ ಕರ್ತವ್ಯ ನಿರ್ವಸಲು ತೆರಳುವುದರಿಂದ, ಇಡೀ ಆಸ್ಪತ್ರೆಯಲ್ಲಿ ಒಬ್ಬಿಬ್ಬರು ಶುಶ್ರೂಷಕಿಯರೇ ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ಇದೆ. ರಾತ್ರಿ ಪಾಳಿಗೆ ನೇಮಕಗೊಂಡಿರುವ ಒಬ್ಬರೇ ಶುಶ್ರೂಷಕಿಗೆ ಯಾವುದೇ ಭದ್ರತೆ ಇಲ್ಲ, ರಾತ್ರಿಯಲ್ಲಿ ಬರುವ ರೋಗಿಗಳನ್ನು ಕೇಳುವವರೇ ಇಲ್ಲ. ಆಕಸ್ಮಿಕವಾಗಿ ಮರಣ ಹೊಂದಿದಾಗ ಶವ ಪರೀಕ್ಷೆ ನಡೆಸಲು, ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಯಾರೊಬ್ಬ ವೈದ್ಯರು ಸರಿಯಾದ ಸಮಯದಲ್ಲಿ ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೋಹಿಣಿ ಅವರಿಗೆ ಅರ್ಪಿಸಿದ ಮನವಿಯಲ್ಲಿ ವಿವರಿಸಲಾಗಿದೆ.

ಚಿಕಿತ್ಸೆಗೆ ಬೇಕಾದ ಅಗತ್ಯ ಸಲಕರಣೆ ಸೌಲಭ್ಯವಿಲ್ಲ. ಸ್ತ್ರೀರೋಗ ತಜ್ಞ, ಮಕ್ಕಳ ತಜ್ಞರು, ಪ್ರಸೂತಿ ತಜ್ಞರು, ಇಎನ್‌ಟಿ ತಜ್ಞರು ಸೇರಿದಂತೆ ಯಾವುದೇ ತಜ್ಞ ವೈದ್ಯರನ್ನು ನೇಮಿಸಲಾಗಿಲ್ಲ. ಭಾನುವಾರ ರೋಗಿಗಳನ್ನು ಕೇಳುವವರೇ ಇಲ್ಲ ಎಂದು ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಅಣ್ಣಪ್ಪ ಕುಲಾಲ್, ಕಳ್ತೂರು ವಿಜಯ ಹೆಗ್ಡೆ ಮೊದಲಾದವರು ಮನವಿ ಸ್ವೀಕರಿಸಿದ ಡಿಎಚ್‌ಓ ಡಾ. ರೋಹಿಣಿ ಅವರಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಿದರು.

ಆಸ್ಪತ್ರೆಯಲ್ಲಿ 23 ಹುದ್ದೆಗಳು ಖಾಲಿ ಇದ್ದು, ತಜ್ಞ ವೈದ್ಯರ ಹುದ್ದೆಗಳ ನೇಮಕಾತಿಗೆ ಸರಕಾರ ಮಂಜೂರಾತಿ ನೀಡಿದ್ದರೂ, ಗ್ರಾಮೀಣ ಭಾಗದಲ್ಲಿ ಸೇವೆಗೆ ಬರಲು ಯಾರೂ ಒಪ್ಪುತ್ತಿಲ್ಲ. ಬೆಳಗ್ಗೆ 9:00ರಿಂದ ಸಂಜೆ 4:00ರವರೆಗೆ ಆಡಳಿತ ವೈದ್ಯಾಧಿಕಾರಿ ಸೇರಿದಂತೆ 3 ವೈದ್ಯರು ಲಭ್ಯರಿದ್ದು, ಸಂಜೆ ನಂತರ ತುರ್ತು ಕರೆ ಮೇರೆಗೆ ಲಭ್ಯರಿರುತ್ತಾರೆ. ಗ್ರೂಪ್ ಡಿ, ಪ್ರಯೋಗಾಲಯ ತಂತ್ರಜ್ಞ, ಫಾರ್ಮಾಸಿಸ್ಟ್ ಹುದ್ದೆಗಳಿಗೆ ಸರಕಾರದ ನೇಮಕಾತಿ ನಡೆದಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳು ಬರಲು ಒಪ್ಪುತ್ತಿಲ್ಲ ಎಂದರು.

ಕಾರ್ಕಳ ತಾಲೂಕು ಪ್ರಗತಿಪರ ನಾಗರಿಕ ಸೇವಾ ಸಮಿತಿ, ಜಯಕರ್ನಾಟಕ ಸಂಘಟನೆ ವತಿಯಿಂದ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಎದುರು ನಡೆದ ಪ್ರತಿಭಟನೆಯಲ್ಲಿ ಆಸ್ಪತ್ರೆಯ ಸಮಸ್ಯೆಗಳ ಕುರಿತು ಡಾ.ರೋಹಿಣಿ ಅವರಿಗೆ ಮನವಿ ಸಲ್ಲಿಸಿ 15 ದಿನದೊಳಗೆ ವೈದ್ಯರು, ಸಿಬ್ಬಂದಿಗಳ ನೇಮಕ ಸೇರಿದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಲಾಯಿತು.

ನಿಗದಿತ ಸಮಯದೊಳಗೆ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದರೆ ಆಸ್ಪತ್ರೆಗೆ ಬೀಗ ಜಡಿದು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಮಿಥುನ್ ಶೆಟ್ಟಿ, ಉದಯ ಹೆಗ್ಡೆ, ಪ್ರವೀಣ್ ಸೂಡ, ರಾಘವೇಂದ್ರ ಡಿ.ಜಿ., ಚಾರಾ ಮಹಿಷಮರ್ದಿನಿ ದೇವಸ್ಥಾನದ ಧರ್ಮದರ್ಶಿ ಸಿ. ರತ್ನಾಕರ ಶೆಟ್ಟಿ, ಇಂದಿರಾ ನಾಯ್ಕಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News