ಮುಂದಿನ ವಾರದಿಂದ ಬ್ಲೂವೇಲ್ ಗೇಮ್ ಬಗ್ಗೆ ಶಾಲೆಗಳಲ್ಲಿ ಪ್ರಕಟನೆ

Update: 2017-09-09 13:11 GMT

ಉಡುಪಿ, ಸೆ.9: ಅಪಾಯಕಾರಿಯಾದ ಬ್ಲೂವೇಲ್ ಆನ್‌ಲೈನ್ ಆಟದ ಬಗ್ಗೆ ಪೋಷಕರು, ಶಿಕ್ಷಕರು ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಿನ ವಾರದಿಂದ ಜಿಲ್ಲೆಯ ಎಲ್ಲ ಶಾಲೆಗಳ ನೋಟೀಸ್ ಬೋರ್ಡ್‌ಗಳಲ್ಲಿ ಪ್ರಕಟಣೆ ಹಾಕಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಎಸ್ಪಿ ಕಚೇರಿಯಲ್ಲಿಂದು ನಡೆದ ನಾಲ್ಕನೆ ವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ಪೋಷಕರೊಬ್ಬರ ಕರೆಗೆ ಅವರು ಪ್ರತಿಕ್ರಿಯೆ ನೀಡಿದರು. ಈ ಪ್ರಕಟಣೆಯನ್ನು ಶಿಕ್ಷಕರು ಶಾಲಾ ಸಮಯದಲ್ಲಿ ಮಕ್ಕಳಿಗೆ ಓದಿ ಹೇಳಲಿದ್ದಾರೆ. ಇಂದು ಆಟವನ್ನು ಪ್ಲೇಸ್ಟೋರ್‌ನಿಂದ ಕುತೂಹಲಕ್ಕಾಗಿ ಡೌನ್ ಲೋಡ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ಫಿಲ್ಟರ್ ಅಳವಡಿಸಿದರೆ ಈ ಆ್ಯಪ್‌ನ್ನು ಸುಲಭದಲ್ಲಿ ಡೌನ್‌ಲೋಡ್ ಮಾಡಲು ಆಗುವುದಿಲ್ಲ. ಖಿನ್ನತೆ ಹಾಗೂ ಓದಿನಲ್ಲಿ ಹಿಂದಿರುವ ಮಕ್ಕಳ ಬಗ್ಗೆ ಶಿಕ್ಷಕರು ಹೆಚ್ಚಿನ ಗಮನ ಕೊಡಬೇಕು ಎಂದರು.

ಫೋನ್ ಇನ್ ಕಾರ್ಯಕ್ರಮದಿಂದಾಗಿ ಕಳೆದ ವಾರ 14 ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿ 14 ಮಂದಿ, ಮೂರು ಜೂಜಾಟ ಪ್ರಕರಣದಲ್ಲಿ 18 ಮಂದಿ ಹಾಗೂ ಒಂದು ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಒಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಗಣಿಗಾರಿಕೆ ಸ್ಥಳ ಪರಿಶೀಲನೆ:ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ 74ನೆ ಉಳ್ಳೂರಿನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಬಂಡೆ ಒಡೆಯು ತ್ತಿರುವುದರಿಂದ ಮನೆಗಳಿಗೆ ಹಾನಿ ಮತ್ತು ಶಂಕರನಾರಾಯಣದ ಇನ್ನೊಂದು ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದರಿಂದ ರಸ್ತೆ ಕೆಟ್ಟು ಹೋಗಿರುವ ಬಗ್ಗೆ ಸಾರ್ವಜನಿಕರು ಕರೆ ಮಾಡಿ ಎಸ್ಪಿಗೆ ದೂರಿದರು.

ಈ ಸಂಬಂಧ ಆಗಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗೆ ಕರೆ ಮಾಡಿದ ಎಸ್ಪಿ, ಜಿಲ್ಲೆಯ ಎಲ್ಲ ಗಣಿಗಾರಿಕೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಮತ್ತು ಸೋಮವಾರ ದೂರು ಬಂದ ಪ್ರದೇಶಗಳಲ್ಲಿ ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಜಂಟಿ ತಂಡ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.

ಗಂಗೊಳ್ಳಿ ಆಲೂರು ಗ್ರಾಪಂ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಂತರ ಹೊಂಡಕ್ಕೆ ಯಾವುದೇ ರೀತಿಯ ತಡೆಗೋಡೆ ನಿರ್ಮಿಸಿಲ್ಲ, ಸೂಚನಾ ಫಲಕ ಅಳವಡಿಸಿಲ್ಲ. ಮಳೆಗಾಲದಲ್ಲಿ ನೀರು ತುಂಬಿರುವ ಈ ಹೊಂಡ ಅಪಾಯಕಾರಿಯಾಗಿದೆಂದು ಸಾರ್ವಜನಿಕರೊಬ್ಬರು ದೂರಿದರು. ಕೊಲ್ಲೂರು ಜನ್ನಾಲು ಶಾಲೆ ಬಳಿಯ ಕಲ್ಲುಕೋರೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಎಸ್ಪಿ ಗಮನಕ್ಕೆ ತರಲಾಯಿತು.

ಅಕ್ರಮ ಮರಳುಗಾರಿಕೆ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾರ್ವಜನಿಕರೊಬ್ಬರು ಕರೆ ಮಾಡಿದರು. ಫೋನ್ ಇನ್ ಕಾರ್ಯಕ್ರಮ ದಿಂದಾಗಿ ಹೆಚ್ಚಿನ ಮಾಹಿತಿಗಳನ್ನು ನೀಡಲು ಸಾಧ್ಯವಾಗುತ್ತಿವೆ ಎಂಬ ಸಾರ್ವ ಜನಿಕರ ಕರೆಗೆ ಪ್ರತಿಕ್ರಿಯಿಸಿದ ಎಸ್ಪಿ, ಎಲ್ಲ ಕರೆಗಳಿಗೆ ನಾನು ಸ್ಪಂದಿಸಲು ಆಗು ವುದಿಲ್ಲ. ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿಗಳನ್ನು ನೀಡಿ. ಅವರು ಕೆಲಸ ಮಾಡದಿದ್ದರೆ ನನಗೆ ತಿಳಿಸಿ, ಸೂಕ್ತ ಕ್ರಮ ಜರಗಿಸುತ್ತೇನೆ. ಕೆಳಗಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಮಾತ್ರ ನಾವು ಕೆಲಸ ಮಾಡಲು ಆಗುತ್ತದೆ ಎಂದರು.

ಸಂಚಾರದ ಬಗ್ಗೆ ಹೆಚ್ಚಿನ ಕರೆ:ಬ್ರಹ್ಮಾವರ ಆಕಾಶವಾಣಿ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರಕ್ಕೆ ತೊಂದರೆ ಹಾಗೂ ಬ್ರಹ್ಮಾವರ ರಥ ಬೀದಿಯಲ್ಲಿ ಎರಡೂ ಕಡೆ ವಾಹನ ಪಾರ್ಕಿಂಕ್ ಮಾಡುತ್ತಿರುವುದು, ಉಡುಪಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಾವರ ಗುಡ್ಡೆಯಂಗಡಿ ಬಲಾ ಯಿಪಾದೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುವ ಕುರಿತು, ಹಳೆ ತಾಲೂಕು ಕಚೇರಿಯ ಸಚಿವರ ಕಾರ್ಯಾಲಯ ಎದುರು ವಾಹನಗಳ ಅಡ್ಡಾ ದಿಡ್ಡಿ ಪಾರ್ಕಿಂಗ್ ಮಾಡುವ ಬಗ್ಗೆ ದೂರುಗಳು ಬಂದವು.

ಅಂಬಲಪಾಡಿ ಸರ್ವಿಸ್ ರಸ್ತೆಯಲ್ಲಿ, ಕೆ.ಎಂ.ರಸ್ತೆಯ ಸಿಂಡಿಕೇಟ್ ಬ್ಯಾಂಕ್ ಕ್ಯಾಥೋಲಿಕ್ ಸೆಂಟರ್-ಟೀಚರ್ಸ್ ಟ್ರೈನಿಂಗ್ ಶಾಲೆ ರಸ್ತೆ ಬದಿಗಳಲ್ಲಿ ವಾಹನ ಪಾರ್ಕಿಂಗ್ ಮಾಡುವ ಕುರಿತು, ಸಂತೆಕಟ್ಟೆ ಆಶೀರ್ವಾದ್-ಮಲ್ಪೆ ರಸ್ತೆಯಲ್ಲಿ ಟ್ರಾನ್ಸ್‌ಫೋರ್ಟ್ ಏಜೆನ್ಸಿಯಿಂದ ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುವ ಬಗ್ಗೆ ಮತ್ತು ಮಣಿಪಾಲ ಆರ್‌ಎಸ್‌ಬಿ ಸಭಾಭವನ ಬಳಿ ಟ್ರಾಫಿಕ್ ಜಂಕ್ಷನ್ ನಿರ್ಮಾಣ, ಕೊಲ್ಲೂರು ಇಡೂರು-ಕುಂಜಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಪಾಯಕಾರಿ ತಿರುವು, ಕೋಟ ಸಾಸ್ತಾನದಲ್ಲಿ ಮರಳನ್ನು ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಿಸಿ ಸಾಗಿಸುವ ಕುರಿತು ದೂರುಗಳು ಬಂದವು.

 ಶಿರ್ವ ಕುಂಜಾರುಗಿರಿ ಬಸ್ ಸಂಚಾರ ಹೆಚ್ಚಿಸುವ ಬಗ್ಗೆ, ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಬಗ್ಗೆ, ಕೊಕ್ಕರ್ಣೆ ಬೆಳಗಿನ ಅವಧಿಯಲ್ಲಿ ಬಸ್ ಸಂಚಾರ ಹೆಚ್ಚಿ ಸುವ ಬಗ್ಗೆ, ಮದ್ದೂರು ಕೂರಾಡಿಗೆ ಬಸ್ ಪರವಾನಿಗೆ ಇದ್ದರೂ ಓಡಿಸದ ಬಗ್ಗೆ ವಿದ್ಯಾರ್ಥಿಗಳು, ಮಹಿಳೆಯರು ದೂರಿ ಕರೆ ಮಾಡಿದರು. ಈ ಎಲ್ಲ ಕರೆಗಳಿಗೆ ಸ್ಪಂದಿಸಿದ ಎಸ್ಪಿ ಸೂಕ್ತ ಕ್ರು ಜರಗಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಮೊದಲಾದವರು ಹಾಜರಿದ್ದರು.

26 ದೂರಿನ ಕರೆಗಳು

ಇಂದು ನಡೆದ ಎಸ್ಪಿ ಅವರ ನಾಲ್ಕನೆ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 26 ಕರೆಗಳು ಬಂದವು. ಶಂಕರನಾರಾಯಣ ಹಳ್ಳಿ ಹೊಳೆ ಮತ್ತು ಕೊಲ್ಲೂರಿನಲ್ಲಿ ಅಕ್ರಮ ಮದ್ಯ ಮಾರಾಟ, ಕೋಟ, ಗಂಗೊಳ್ಳಿ, ಉಡುಪಿ ನಗರಗಳಲ್ಲಿ ಮಟ್ಕಾ ಬಗ್ಗೆ, ಬ್ರಹ್ಮಾವರ ಮತ್ತು ಉಡುಪಿ ನಗರದಲ್ಲಿ ಅಕ್ರಮ ಮರಳುಗಾರಿಕೆ, ಬೈಂದೂರು ಗಾಂಜಾ ಮಾರಾಟ, ಕೊಲ್ಲೂರು ಸೋಲಾರ್‌ಬ್ಯಾಟರಿ ಕಳ್ಳತನ ಬಗ್ಗೆ ಸಾರ್ಜನಿಕರು ಮಾಹಿತಿಯನ್ನು ನೀಡಿದರು.

ವಂಚನೆ ಕರೆಗಳ ಬಗ್ಗೆ ಎಚ್ಚರ

ಎಟಿಎಂ ಕಾರ್ಡ್ ನವೀಕರಣ ಮಾಡುವ ಕುರಿತ ವಂಚನೆ ಕರೆಗಳ ಬಗ್ಗೆ ಸಾರ್ವಜನಿಕರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಈ ಸಂಬಂಧ ಬ್ಯಾಂಕ್ ಗಳಿಂದ ಯಾವುದೇ ದೂರವಾಣಿ ಕರೆಗಳು ಬರುವುದಿಲ್ಲ. ಈ ರೀತಿ ಹೇಳಿ ಕೊಂಡು ಬರುವ ಕರೆಗಳನ್ನು ಕೂಡಲೇ ಕಟ್ ಮಾಡಿ, ಆ ನಂಬರ್‌ಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ನಾವು ಪ್ರಯತ್ನಿಸುತ್ತೇನೆ. ಇಲ್ಲದಿದ್ದರೆ ನೀವು ಹಣ ಕಳೆದುಕೊಂಡು ವಂಚನೆಗೆ ಒಳ ಗಾಗುತ್ತೀರಿ ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ಸಾರ್ವಜನಿಕರಿಗೆ ಎಚ್ಚರಿಕೆ ಹಾಗೂ ಮನವಿ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News