ರಮ್ಲಾನ್ಸ್ ಟ್ರಸ್ಟ್‌ನಿಂದ ಸರಕಾರಿ ಶಾಲೆಯಲ್ಲಿ ವಿಶ್ರಾಂತಿ ನಿಲಯ

Update: 2017-09-09 13:50 GMT

ಮಂಗಳೂರು, ಸೆ.9: ಹೆಣ್ಣು ಮಕ್ಕಳು ಮಾಸಿಕ ಋತುಚಕ್ರದ ಸಂದರ್ಭ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಮಂಗಳೂರು ತಾಲೂಕಿನ ಪಾವೂರಿನ ಸರಕಾರಿ ಶಾಲೆಯಲ್ಲಿ ವಿಶ್ರಾಂತಿ ನಿಲಯವೊಂದನ್ನು ಆರಂಭಿಸಲಾಗಿದೆ.

ರಮ್ಲಾನ್ಸ್ ಟ್ರಸ್ಟ್ ವತಿಯಿಂದ ಈ ಕೊಡುಗೆಯನ್ನು ನೀಡಲಾಗಿದ್ದು, ಶಾಲೆಯಲ್ಲಿ 113 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಈ ಶಾಲೆಯಲ್ಲಿ ಪ್ರತಿ ವರ್ಷ ಸುಮಾರು 10 ಮಕ್ಕಳು ಶಾಲೆಯನ್ನು ಅರ್ಧದಲ್ಲೇ ತೊರೆಯುತ್ತಿದ್ದಾರೆ ಮತ್ತು ಪ್ರತಿ ತಿಂಗಳು ಶೇ. 20ರಷ್ಟು ಮಕ್ಕಳು ತರಗತಿಗಳಿಗೆ ಗೈರುಹಾಜರಾಗುತ್ತಿದ್ದಾರೆ. ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತವಾದ ಶೌಚಾಲಯದ ಕೊರತೆ ಹಾಗೂ ಸೂಕ್ತ ವಿಶ್ರಾಂತಿ ತಾಣವಿಲ್ಲದಿರುವುದೇ ಈ ಗೈರುಹಾಜರು ಹಾಗೂ ಅರ್ಧದಲ್ಲೇ ಶಾಲೆ ಬಿಡುವುದಕ್ಕೆ ಕಾರಣವೆಂಬುದು ತಿಳಿದು ಬಂದಿದೆ. ಹೆಣ್ಣು ಮಕ್ಕಳು ಬಹುತೇಕವಾಗಿ ಮಾಸಿಕ ಋತುಚಕ್ರದ ಸಂದರ್ಭ ಶಿಕ್ಷಕರ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುವುದು ಅಥವಾ ಶಾಲೆಗೆ ಗೈರುಹಾಜರಾಗುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಪಡೆಯಲು ‘ಭಾವಿಕ’ ಎಂಬ ಹೆಸರಿನ ಕೊಠಡಿಯನ್ನು ಶಾಲೆಯಲ್ಲಿ ತೆರೆಯಲಾಗಿದೆ.

‘ಭಾವಿಕ’ದಲ್ಲಿ ಏನೇನಿದೆ?

ವಿದ್ಯಾರ್ಥಿನಿಯರಿಗಾಗಿಯೇ ರಚಿಸಲಾದ ಈ ಕೊಠಡಿಯು ಹಾಸಿಗೆಗಳು, ಪ್ರತ್ಯೇಕ ಶೌಚಾಲಯಗಳು, ಕಿರಿದಾದ ಗ್ರಂಥಾಲಯ, ನೀರು ಶುದ್ದೀಕರಣ ಕಿಟ್ ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯವನ್ನು ಹೊಂದಿದೆ. ಅದಲ್ಲದೆ ವಿದ್ಯಾರ್ಥಿನಿಯರು ಒತ್ತಡ ರಹಿತ ಮತ್ತು ಉಲ್ಲಸಿತವಾಗಿರುವಂತೆ ಕೊಠಡಿಯ ಗೋಡೆಗಳ ಮೇಲೆ ಪ್ರೇರಣದಾಯಕ ಬರಹಗಳನ್ನು ಬರೆಯಲಾಗಿದೆ.

‘ಭಾವಿಕ’ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ರಮ್ಲಾನ್ಸ್ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಝೀಶನ್ ರಮ್ಲಾನ್ ಮಾತನಾಡಿ, ಋತಸ್ರಾವದ ಸಂದರ್ಭ ವಿದ್ಯಾರ್ಥಿನಿಯರು ಅನುಭವಿಸುವ ತೊಂದರೆಗಳಿಗೆ ಪೂರಕವಾಗಿ ವಿಶ್ರಾಂತಿಯನ್ನು ಒದಗಿಸುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಗಳು ಶಾಲೆಗಳಲ್ಲಿ ಇಲ್ಲದಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಈ ಸಂದರ್ಭ ಟ್ರಸ್ಟ್ ವತಿಯಿಂದ 250ಕ್ಕೂ ಅಧಿಕ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಝೀಶನ್‌ರವರು ಬರೆದಿರುವ ‘ಡೆಕಲಾಗ್’ ಎಂಬ ಪುಸ್ತಕವು ಮಕ್ಕಳಿಗೆ ಜೀವನ ಪಾಠವನ್ನು ಒಳಗೊಂಡಿದೆ.

ಟ್ರಸ್ಟ್‌ನ ಸ್ಥಾಪಕರಾದ ಬಿ. ಶಮೀಮ್ ರಮ್ಲಾನ್, ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮಲಾರ್, ಮುಖ್ಯೋಪಾಧ್ಯಾಯರಾದ ಡಾ. ಪ್ರಶಾಂತ್ ಕುಮಾರ್, ನಿವೃತ್ತ ಮುಖ್ಯೋಪಾಧ್ಯಾಯ ಎಚ್‌ಎಂ ಮುಹಮ್ಮದ್ ಮೊದಲಾವದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News