ಪೊಲಿಸರಿಂದ ವೃತ್ತ ತೆರವು ವಿರೋಧಿಸಿ ನಾಳೆ ಪ್ರತಿಭಟನೆ

Update: 2017-09-09 14:49 GMT

ಪುತ್ತೂರು,ಸೆ.9: ತಾಲೂಕಿನ ಭಕ್ರಕೋಡಿ ಬಳಿಯಲ್ಲಿ ವೃತ್ತ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಸಂಘಟನೆಯ ಕಾರ್ಯಕರ್ತರನ್ನು ಹಿಂದಕ್ಕೆ ಕಳುಹಿಸಿ, ವೃತ್ತವನ್ನು ಜೆಸಿಬಿಯಲ್ಲಿ ತೆರವುಗೊಳಿಸಲಾಗಿದ್ದು, ಪೊಲೀಸರ ಈ ಕ್ರಮವನ್ನು ವಿರೋಧಿಸಿ ಸೆ.10ರಂದು ಬೆಳಿಗ್ಗೆ ಅದೇ ಸ್ಥಳದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ. 

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಪ್ರಿಲ್ 2016ರಲ್ಲಿ ಇಲ್ಲಿ ವೃತ್ತ ನಿರ್ಮಿಸಲಾಗಿತ್ತು. ಈ ವೃತ್ತಕ್ಕೆ ಸಾರಣೆ ಮಾಡುವ ಕೆಲಸವನ್ನು ಶುಕ್ರವಾರ ರಾತ್ರಿ ಸಂಘಟನೆಯ ಕಾರ್ಯಕರ್ತರು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮುಂಡೂರು ಗ್ರಾ.ಪಂ. ಅಧ್ಯಕ್ಷ ಎಸ್.ಡಿ ವಸಂತ್, ಪಿಡಿಒ ಸುಜಾತ ಸ್ಥಳಕ್ಕೆ ಆಗಮಿಸಿ ಅನುಮತಿ ಸರಿಯಿಲ್ಲದ ಕಾರಣ ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಆದರೆ ಬಳಿಕ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಡಿವೈಎಸ್‍ಪಿ ನೇತೃತ್ವದಲ್ಲಿ ಸುಮಾರು 50 ಮಂದಿ ಪೊಲೀಸರು ಸ್ಥಳಕ್ಕೆ ಆಗಮಿಸಿ ವೃತ್ತವನ್ನು ಜೆಸಿಬಿಯಲ್ಲಿ ತೆರವುಗೊಳಿಸಿದ್ದಾರೆ. 

ಈ ವೃತ್ತವನ್ನು ಪುನರ್‍ನಿರ್ಮಾನ ಮಾಡುವಂತೆ ಆಗ್ರಹಿಸಿ ಹಾಗೂ ನಷ್ಟವನ್ನು ಭರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಸಾರ್ವಜನಿಕರ ಹಿತದೃಷ್ಟಿಯಿಂದ ವೃತ್ತ ನಿರ್ಮಾಣ ಮಾಡಲಾಗಿದ್ದು ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆಯಲಾಗಿದೆ. ಕಾನೂನಿನ ತೊಡಕಾಗದಂತೆ ಕಾಮಗಾರಿ ನಡೆಸಲಾಗಿದೆ. ಅದಾಗ್ಯೂ ವೃಥಾ ತೊಂದರೆ ಕೊಡುವ ನಿಟ್ಟಿನಲ್ಲಿ ಯಾರದೋ ಷಡ್ಯಂತ್ರದಿಮದ ಪೊಲೀಸರು ಇಂತಹ ಕೆಲಸ ಮಾಡಿದ್ದಾರೆ. ಶನಿವಾರ ಸಂಜೆ ಒಳಗಾಗಿ ನಮಗೆ ಸಮರ್ಪಕ ಉತ್ತರ ಸಿಗಬೇಕು ಎಂದು ಅವರು ಆಗ್ರಹಿಸಿದರು. 
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ಧನ ಬೆಟ್ಟ, ತಾಲೂಕು ಅಧ್ಯಕ್ಷ ಸಚಿನ್ ಪಾಪೆಮಜಲು, ಭಕ್ತಕೋಡಿ ಘಟಕದ ಅಧ್ಯಕ್ಷ ದಿನೇಶ್ ಕೆ. ಭಜರಂಗದಳದ ಭಕ್ತಕೋಡಿ ಘಟಕ ಸಂಚಾಲಕ ಕೇಶವ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News