ಸಾಮೂಹಿಕ ದೌರ್ಜನ್ಯದ ಸಂದರ್ಭದಲ್ಲಿ ಸಾಮೂಹಿಕ ಮೌನವೂ ಅಪಾಯಕಾರಿ :ಹರ್ಷ ಮಂದರ್‌

Update: 2017-09-09 15:40 GMT

ಮಂಗಳೂರು.ಸೆ,9:ಸಮಾಜದಲ್ಲಿ ಸಾಮೂಹಿಕ ದೌರ್ಜನ್ಯದ (ಥಳಿತ)ಸಂದರ್ಭದಲ್ಲಿ ಸಾಮೂಹಿಕ ಮೌನವೂ ಅಪಾಯಕಾರಿ ಎಂದು ಮಾನವ ಹಕ್ಕುಗಳ ಹೋರಾಟಗಾರ,ಬರಹಗಾರ ಹರ್ಷ ಮಂದರ್ ತಿಳಿಸಿದ್ದಾರೆ.ನಗರದ ರೋಶನಿ ನಿಲಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸಮರಸ ಮಂಗಳೂರು ವತಿಯಿಂದ ‘ಬಾಂದವ್ಯದೆಡೆಗೆ ಪ್ರೀತಿಯ ಹೆಜ್ಜೆ ’(ಕಾರವಾನ್ ಇ ಮೊಹಬತ್ )ಎಂಬ ಆಂದೋಲದ ಅಂಗವಾಗಿ ‘ಸಾಮೂಹಿಕ ಥಳಿತ ಮತ್ತು ಸಾಮೂಹಿಕ ಮೌನ ’ಎಂಬ ವಿಚಾರಗೋಷ್ಠಿಯನ್ನುದ್ದೇಶಿಸಿ ಅವರು ಇಂದು ಮಾತನಾಡುತ್ತಿದ್ದರು.

ಸ್ವಾತಂತ್ರನಂತರ ದೇಶದಲ್ಲಿ ವಿವಿಧ ಕಡೆಗಳಲ್ಲಿ ಸಾಕಷ್ಟು ಸಾಮೂಹಿಕ ದೌರ್ಜನ್ಯದ ಘಟನೆಗಳು ನಡೆದಿವೆ.ಹಲವಾರು ಕೋಮುದ್ವೇಷದ ಘಟನೆಗಳು ನಡೆದಿವೆ.ಈ ಘಟನೆಗಳಲ್ಲಿ ಮುಸ್ಲಿಂ,ಕ್ರಿಶ್ಚಿಯನ್ ,ದಲಿತರ ಮೇಲೆ ಮಾತ್ರ ದೌರ್ಜನ್ಯ ನಡೆದಿರುವುದಲ್ಲದೆ ಸಮಾಜದಲ್ಲಿ ಸಂವಿಧಾನದ ವೌಲ್ಯಗಳಾದ ಸ್ವಾತಂತ್ರ,ಸಮಾನತೆ ,ನ್ಯಾಯಕ್ಕಾಗಿ ಹೋರಾಡುವ, ಸಮಾಜದಲ್ಲಿ ಬಂಧುತ್ವದ ಮೌಲ್ಯವನ್ನು ಪ್ರತಿಪಾದಿಸುವ ವರ್ಗದ ಮೇಲೂ ದೌರ್ಜನ್ಯ ನಡೆಯುತ್ತಿರುವುದು ಕಂಡು ಬಂದಿದೆ.ಒಬ್ಬ ವ್ಯಕ್ತಿಯನ್ನು ಥಳಿಸಿ ಆತನ ಕೊಲೆಯಾಗುತ್ತಿರುವ ಸಂದರ್ಭದಲ್ಲಿ ಸಮಾಜದ ,ಪ್ರಜ್ಞಾವಂತ ನಾಗರೀಕರು ಮೌನ ವಹಿಸಿದರೆ ಅದು ಅಪಾಯಕಾರಿ.ಇದರಿಂದ ಸಮಾಜದಲ್ಲಿ ನ್ಯಾಯ.ಸತ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಹೋರಾಟಕ್ಕೆ ಹಿನ್ನಡೆಯಾಗುತ್ತದೆ.

ಸಂವಿಧಾನದ ಮೌಲ್ಯಗಳಿಗೂ ಧಕ್ಕೆಯಾಗುತ್ತದೆ ಎಂದು ಹರ್ಷ ಮಂದರ್ ತಿಳಿಸಿದ್ದಾರೆ.ಸಮಾಜದಲ್ಲಿ ದ್ವೇಷ ಭಾವನೆ ಹೊಂದಿರುವ ಮತ್ತು ಭೀತಿಯ ಭಾವನೆಯನ್ನು ಹುಟ್ಟಿಸುವ ವ್ಯಕ್ತಿಗಳಿಂದ ಮತ್ತು ಸಂಘಟನೆಗಳಿಂದ ಭೀತಿ ಹುಟ್ಟಿಸುವ ನಿಟ್ಟಿನಲ್ಲಿ ಈ ರೀತಿಯ ಸಾಮೂಹಿಕ ದೌರ್ಜನ್ಯ ಕೃತ್ಯಗಳು ನಡೆಯುತ್ತವೆ.ಈ ಸಂದರ್ಭದಲ್ಲಿ ಸಮಾಜದ ಬಹುತೇಕರು ನಮಗೆ ಸಂಬಂಧಿಸಿದ ವಿಚಾರವಲ್ಲ ಎಂದು ಅದನ್ನು ನಿರ್ಲಕ್ಷಿಸುತ್ತಿರುವುದು ಈ ರೀತಿಯ ಘಟನೆಗಳು ಮರುಕಳಿಸಲು ಒಂದು ಪ್ರಮುಖ ಕಾರಣವಾಗಿದೆ ಎಂದು ಹರ್ಷ ಮಂದರ್ ತಿಳಿಸಿದ್ದಾರೆ.

ಸಾಮೂಹಿಕ ದೌರ್ಜನ್ಯಕ್ಕೆ ಸರಕಾರದ ಧೋರಣೆಯೂ ಪ್ರಮುಖ ಕಾರಣ:- ಸಾಮೂಹಿಕ ದೌರ್ಜನ್ಯಕ್ಕೆ ಪ್ರಭುತ್ವದ ಸಹಕಾರ ಮುಖ್ಯವಾಗಿ ಸರಕಾರದ ಧೋರಣೆ,ಕೆಲವು ಮಾಧ್ಯಮಗಳ ಕುಮ್ಮಕ್ಕು,ನಾಗರಿಕ ಸಮಾಜದ ವೌನವೂ ಕಾರಣವಾಗಿದೆ ಎಂದು ಚಿಂತಕ,ಬರಹಗಾರ ಜಿ.ರಾಜಶೇಖರ್ ತಿಳಿಸಿದ್ದಾರೆ. ಉದಾಹರಣೆಗೆ ದೇಶದಲ್ಲಿ ಇರುವ ಒಂದು ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಆ ಸಮುದಾಯದ ಅಸ್ತಿತ್ವನ್ನೇ ನಿರಾಕರಿಸಿ ದೇಶವನ್ನು ಆಡಳಿತ ನಡೆಸುವುದು ಫಾಸಿಸ್ಟ್ ಮನೋಭಾವವಾಗಿದೆ.ಇತ್ತೀಚೆಗೆ ನಡೆದ ಮಂಗಳೂರು ಚಲೋದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋಮು ದೌರ್ಜನ್ಯದಿಂದ ಸತ್ತವರ ಹೆಸರನ್ನು ಹೇಳುವ ದೇಶದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ನಾಯಕರು ಎಲ್ಲಿಯೂ ಈ ಗಲಭೆಗಳಿಂದ ಸತ್ತ ಮುಸಲ್ಮಾನರ ಹೆಸರು ಹೇಳದೆ ಇರುವುದು.

ದೇಶದ ಆಡಳಿತದ ಹಂತದಲ್ಲೂ ಆಡಳಿತದಲ್ಲಿರುವ ಪಕ್ಷ ಈ ರೀತಿಯಾಗಿ ನಡೆದುಕೊಳ್ಳುತ್ತಿರುವುದು ಇವುಗಳಿಗೆ ಕೆಲವು ಉದಾಹರಣೆ.ಆದಿ ಉಡುಪಿಯಲ್ಲಿ ದನ ಸಾಗಾಟದ ಸಂದರ್ಭದಲ್ಲಿ ಇಬ್ಬರು ವರ್ತಕರನ್ನು ಥಳಿಸಿ ದೌರ್ಜನ್ಯ ನಡೆಸಿದ ಬಳಿಕ ವಿಚಾರ ನಡೆದ ಬಳಿಕ ಉಡುಪಿಯ ಪರಿಸರದ ಈ ರೀತಿಯ ಘಟನೆ ನಡೆಯಲು ಸಾಧ್ಯವಿಲ್ಲ ಎನ್ನು ತೀರ್ಪು ಹೊರಬಂದು ಆರೋಪಿಗಳು ಖುಲಾಸೆಗೊಳ್ಳಲು ಕಾರಣವಾದ ಘಟನೆಗಳು ನಡೆದಿವೆ.ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಾಮೂಹಿಕ ದೌರ್ಜನ್ಯಕ್ಕೆ ನ್ಯಾಯಾಲಯ,ಪ್ರಭುತ್ವ,ಮಾಧ್ಯಮಗಳು ಹಾಗೂ ನಾಗರಿಕ ಸಮಾಜವೂ ಈ ರೀತಿಯ ಹಿಂಸೆ ನಡೆದಾಗ ಬೆಚ್ಚಿಬೇಳದೆ ಸಹಜವಾಗಿ ಸ್ವೀಕರಿಸುತ್ತಿರುವುದು ಪ್ರಮುಖ ಕಾರಣವಾಗಿದೆ ಎಂದು ರಾಜಶೇಖರ್ ತಿಳಿಸಿದ್ದಾರೆ.ಸಮಾರಂಭದಲ್ಲಿ ಸಮರಸ ಮಂಗಳೂರು ತಂಡದ ವಿದ್ಯಾದಿನಕರ್ ಹಾಗೂ ಇತರ ಸದಸ್ಯರು ಸಾಮೂಹಿಕ ಥಳಿತಕ್ಕೆ ಒಳಗಾದ ಸಂತ್ರಸ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News