ನಾಳೆ 25ನೇ ವರ್ಷ ಓಣಂ ಆಚರಣೆ

Update: 2017-09-09 15:52 GMT

ಉಡುಪಿ, ಸೆ.9: ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್‌ನ ವತಿಯಿಂದ 25ನೇ ವರ್ಷದ ಓಣಂ ಸಂಭ್ರಮಾಚರಣೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಾಳೆ ಬೆಳಗ್ಗೆ 8:30ರಿಂದ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರವಿರಾಜನ್ ಟಿ.ಎ.ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುರಾಣದ ಕಥೆಯಂತೆ ಕೇರಳ ರಾಜ್ಯವನ್ನು ಆಳಿದ ಮಹಾಬಲಿ ಚಕ್ರವರ್ತಿ ನೆನಪಿಗಾಗಿ ಆಚರಿಸುವ ಓಣಂ ಹಬ್ಬವನ್ನು ಜಾತಿ-ಮತ ಬೇಧವಿಲ್ಲದೇ ಕೇರಳೀಯರು ವಿಶ್ವದಾದ್ಯಂತ ಆಚರಿಸುವ ಏಕೈಕ ಹಬ್ಬವಾಗಿದೆ ಎಂದರು.

ಸೆ.10ರಂದು ಬೆಳಗ್ಗೆ ಪೂಕ್ಕಳಂ ಸ್ಪರ್ಧೆ ನಡೆಯಲಿದೆ. ಮಕ್ಕಳಿಗಾಗಿ ನೃತ್ಯ ಮತ್ತು ಸಂಗೀತ ಸ್ಪರ್ಧೆ ನಡೆಯಲಿದೆ. 11:00ಗಂಟೆಗೆ ರಜತ ಮಹೋತ್ಸವ ಹಾಗೂ ಓಣಂ ಹಬ್ಬದ ಆಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮಾಜಿ ಶಾಸಕ ರಘುಪತಿ ಭಟ್, ಸಿಂಡಿಕೇಟ್ ಬ್ಯಾಂಕಿನ ಜಿಎಂ ಮಧು ಪಿ., ಮಂಗಳೂರಿನ ಕೇರಳ ಸಮಾಜಂನ ಅಧ್ಯಕ್ಷ ಟಿ.ಕೆ.ರಾಜನ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸಂಘದ ಸ್ಥಾಪಕರಾಗಿರುವ ಡಾ.ಟಿ.ಎನ್.ಶ್ರೀಧರ್ ಕುರುಪ್‌ರನ್ನು ಸನ್ಮಾನಿಸಲಾಗುವುದು. ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿ ಸಂಘದ ಸದಸ್ಯರುಗಳನ್ನು ನಗದು ಬಹುಮಾನದೊಂದಿಗೆ ಸನ್ಮಾನಿ ಸಲಾಗುವುದು. ಬಳಿಕ ಕೇರಳ ಶೈಲಿಯ ಸಸ್ಯಾಹಾರಿ ಭೋಜನ ‘ಓಣಸದ್ಯ’ದ ವ್ಯವಸ್ಥೆ ಇದೆ ಎಂದರು.

ಭೋಜನದ ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಕೇರಳ ಶೈಲಿಯ ನೃತ್ಯ ವೈವಿಧ್ಯತೆಗಳೊಂದಿಗೆ ಕಲಾಭವನ ರಾಕೇಶ್ ತಂಡದಿಂದ ‘ಉಲ್ಲಾಸ ತಿರಮಾಲ’ ಕಾರ್ಯಕ್ರಮವಿದೆ. ಎಂದವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಪಿ.ಎ.ಮೋಹನದಾಸ್, ಸುಗುಣ ಕುಮಾರ್, ಎಂ.ಕೃಷ್ಣನ್, ಇಬ್ರಾಹಿಂ, ಸಜಿ ಎಂ.ಪಿಳ್ಲೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News