ಸರಕಾರ ತಕ್ಷಣ ಎಫ್‌ಐಆರ್‌ ರದ್ದುಪಡಿಸಲು ಕ್ರಮ ಕೈಗೊಳ್ಳಲಿ: ಎ.ಕೆ. ಸುಬ್ಬಯ್ಯ

Update: 2017-09-10 16:01 GMT

ಮಂಗಳೂರು, ಸೆ.10: ಪೊಲೀಸರು ತಮ್ಮ ತಪ್ಪನ್ನು ಮುಚ್ಚಿ ಹಾಕಲು 'ವಾರ್ತಾಭಾರತಿ' ಪತ್ರಿಕೆಯ ಬಂಟ್ವಾಳ ವರದಿಗಾರ ಮತ್ತು ಪತ್ರಿಕೆಯ ಮುಖ್ಯಸ್ಥರ ವಿರುದ್ಧ ಮಾಡಿರುವ ಎಫ್‌ಐಆರ್‌ನ್ನು ರದ್ದು ಪಡಿಸಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಲಿ ಎಂದು ಹೈಕೋರ್ಟ್ ನ ಹಿರಿಯ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಎ.ಕೆ.ಸುಬ್ಬಯ್ಯ ತಿಳಿಸಿದ್ದಾರೆ.

ಆರೋಪಿಯೊಬ್ಬನ ಮನೆಯನ್ನು ಶೋಧ ಮಾಡುವ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಆರೋಪಗಳು ಬಂದಿದ್ದರೆ ಈ ಬಗ್ಗೆ ಆರೋಪ ಮಾಡುತ್ತಿರುವ ಮನೆಯವರ ದೂರನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸಬೇಕಾಗಿತ್ತು. ಶೋಧ ನಡೆದ ಸಂದರ್ಭದಲ್ಲಿ ಮನೆಯವರ ಧಾರ್ಮಿಕ ಭಾವನೆಗೆ ತೊಂದರೆಯಾಗುವ ಘಟನೆ ನಡೆದಿದೆಯೇ?, ಪೊಲೀಸರಿಂದ ದೌರ್ಜನ್ಯ ನಡೆದಿದೆಯೇ?, ಇಲ್ಲವೇ ? ಎಂದು ಸಮರ್ಪಕ ತನಿಖೆ ನಡೆಯಬೇಕಾಗಿತ್ತು. ಆದರೆ ಬಂಟ್ವಾಳದ ಘಟನೆಯಲ್ಲಿ ವರದಿಗಾರನ ವರದಿಯ ಬಳಿಕ ಎಸ್ಪಿಯಿಂದ ಅಥವಾ ಉನ್ನತ ಪೊಲೀಸ್ ಅಧಿಕಾರಿಯಿಂದ ಈ ರೀತಿಯ ತನಿಖೆ ನಡೆದಂತೆ ಕಂಡು ಬರುವುದಿಲ್ಲ. ಶೋಧ ನಡೆಸಿದ ಪೊಲೀಸರ ವಿಡಿಯೋವೊಂದರ ಆಧಾರದಲ್ಲಿ ನೇರವಾಗಿ ಎಸ್ಪಿ ಹೇಳಿಕೆ ನೀಡಿದಂತೆ ಕಂಡು ಬರುತ್ತದೆ. ಈ ಪ್ರಕರಣದಲ್ಲಿ ಶೋಧದ ಸಂದರ್ಭ ಪೊಲೀಸರ ವಿರುದ್ಧ ಮನೆಯವರು ಮಾಡುತ್ತಿರುವ ಆರೋಪವನ್ನು ಪೊಲೀಸ್‌ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಮತ್ತು 'ಒಂದು ಪತ್ರಿಕೆ'ಯ 'ಒಬ್ಬ ವರದಿಗಾರನ' ವಿರುದ್ಧ ಮಾತ್ರ ಪ್ರಕರಣವನ್ನು ದಾಖಲಿಸಿ ವರದಿಗಾರನ ಬಗ್ಗೆ ಪೊಲೀಸರು ಪ್ರತೀಕಾರದ ಕ್ರಮ ಕೈಗೊಂಡಂತೆ, ಅವಕಾಶವನ್ನು ಬಳಸಿಕೊಂಡಂತೆ ಕಂಡು ಬರುತ್ತಿದೆ ಎಂದು ಎ.ಕೆ. ಸುಬ್ಬಯ್ಯ ತಿಳಿಸಿದ್ದಾರೆ.

"ಪೊಲೀಸರು ಶೋಧದ ಸಂದರ್ಭ ಆ ರೀತಿಯಾಗಿ ನಡೆದುಕೊಂಡಿಲ್ಲ" ಎಂದು ಎಸ್ಪಿ ಹೇಳಿಕೆಯನ್ನು 'ವಾರ್ತಾಭಾರತಿ' ಪತ್ರಿಕೆ ಪ್ರಕಟಿಸಿದೆ. ಆರೋಪ ಸುಳ್ಳಾಗಿದ್ದರೆ ಮನೆಯವರ ಆರೋಪ ಸುಳ್ಳು ಎಂದು ತನಿಖೆ ನಡೆಸಿ ಎಸ್ಪಿ ಪತ್ರಿಕೆಗೆ ಹೇಳಿಕೆ ನೀಡಬಹುದಿತ್ತು. ಪತ್ರಿಕೆಗೂ ಸಮಯಾವಕಾಶ ನೀಡಿ ವಿವರಣೆ ಕೇಳಿ ಪಡೆಯಬಹುದಿತ್ತು. ಬದಲಾಗಿ ಪೊಲೀಸರು ತಮ್ಮ ತಪ್ಪು ಬೆಳಕಿಗೆ ಬಂದಾಗ ಅದನ್ನು ಮುಚ್ಚಿಹಾಕಲು ಪತ್ರಿಕೆಯ ಮುಖ್ಯಸ್ಥರ ಮತ್ತು ವರದಿಗಾರನ ಮೇಲೆ ಎಫ್‌ಐಆರ್‌ನ್ನು ದಾಖಲಿಸಿರುವುದು ಸಮಂಜಸವಲ್ಲ. ಪೊಲೀಸರು ಅಲ್ಪ ಸಂಖ್ಯಾತ ಸಮುದಾಯದ ವರದಿಗಾರನೊಬ್ಬನ ಮೇಲೆ ಸೆಕ್ಷನ್‌ಗಳನ್ನು ಹಾಕಿ ಬಂಧಿಸಿರುವುದು ಪೊಲೀಸರ ಕೋಮುವಾದಿ ಭಾವನೆಯನ್ನು ತೋರ್ಪಡಿಸುತ್ತದೆ. ಅವರು ಕೋಮುವಾದಿಗಳ ಕೈ ಗೊಂಬೆಗಳ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ" ಎಂದವರು ಹೇಳಿದ್ದಾರೆ.

"ರಾಜ್ಯದ ಪ್ರಮುಖ ಪತ್ರಿಕೆಯೊಂದರ ವರದಿಗಾರನ ಮೇಲೆ ಪೊಲೀಸರು ಈ ರೀತಿಯ ಸೆಕ್ಷನ್‌ಗಳನ್ನು ಹಾಕಿ ಬಂಧನಕ್ಕೊಳಪಡಿಸುವಾಗ ಮೌನವಹಿಸುವುದು, ಕ್ರಮಕೈಗೊಳ್ಳದೆ ಇರುವುದು ಸರಿಯಲ್ಲ. ಪತ್ರಿಕೆಗಳಿಗೆ, ಪತ್ರಿಕೆಯ ವರದಿಗಾರರಿಗೆ ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ನಿಷ್ಪಕ್ಷಪಾತವಾಗಿ ವರದಿ ಮಾಡಲು ಸರಕಾರ ಪೊಲೀಸರ ಮೂಲಕ ರಕ್ಷಣೆ ನೀಡಬೇಕು. ಅದು ಸರಕಾರದ ಹೊಣೆಗಾರಿಕೆ. ವರದಿಗಾರನ ವರದಿ ಸರಕಾರದ ಅಥವಾ ಪೊಲೀಸರ ವಿರುದ್ಧವಾಗಿದ್ದರೂ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹಕ್ಕುಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರಕಾರದ್ದಾಗಿದೆ. ಆದುದರಿಂದ ಸರಕಾರ ಈ ರೀತಿಯ ಎಫ್‌ಐಆರ್‌ನ್ನು ರದ್ದು ಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಬೇಕಿತ್ತು ಎಂದು ಎ.ಕೆ.ಸುಬ್ಬಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News