ಸಬ್ ಇನ್ಸ್‌ಪೆಕ್ಟರ್ ರಕ್ಷಿತ್ ಗೌಡರನ್ನು ಅಮಾನತುಗೊಳಿಸಿ ಪ್ರಕರಣದ ವಿಚಾರಣೆ ನಡೆಸಲು ಪಿಯುಸಿಎಲ್ ಆಗ್ರಹ

Update: 2017-09-11 16:35 GMT

ಮಂಗಳೂರು, ಸೆ.11: ವಾರ್ತಾಭಾರತಿ ವರದಿಗಾರನನ್ನು ವಿಚಾರಣೆಯ ನೆಪದಲ್ಲಿ ಕರೆಸಿ, ಮುಂಚಿತವಾಗಿ ಯಾವುದೇ ನೋಟಿಸ್ ನೀಡದೆ ಬಂಧಿಸಿ ಕಾನೂನು ಬಾಹಿರ ಕ್ರಮಕೈಗೊಂಡ ಬಂಟ್ವಾಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎ.ಕೆ. ರಕ್ಷಿತ್ ಗೌಡರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ದ.ಕ. ಜಿಲ್ಲಾ ಪಿಯುಸಿಎಲ್ ಘಟಕ ಅಧ್ಯಕ್ಷ ಮುಹಮ್ಮದ್ ಕಬೀರ್, ಪಿಯುಸಿಎಲ್ ರಾಷ್ಟ್ರೀಯ ಮುಖಂಡ ಪಿ.ಬಿ.ಡೇಸಾ ಹಾಗೂ ಅಲಿಹಸನ್ ಸೇರಿದಂತೆ ಇತರ ಸದಸ್ಯರು ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿಯ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಸೆ. 2ರಂದು ಮುಸ್ಲಿಂ ಕುಟುಂಬಗಳ ಮನೆಗೆ ಪ್ರವೇಶಿಸಿ ಮನೆಯವರ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ರೀತಿ ವರ್ತಿಸಿದ್ದಾರೆ. ಅಲ್ಲದೆ ಈ ವರದಿಯನ್ನು ಪ್ರಕಟಿಸಿದ ವಾರ್ತಾಭಾರತಿಯ ಪತ್ರಕರ್ತನ ವಿರುದ್ಧ ಎಫ್‌ಐಆರ್ ದಾಖಲಿಸಿ ಯಾವೂದೇ ಸೂಚನೆ ನೀಡದೆ ಬಂಧಿಸಲು ಕಾರಣರಾದ ಸಬ್ ಇನ್ಸ್‌ಪೆಕ್ಟರ್ ರಕ್ಷಿತ್ ಗೌಡರನ್ನು ತಕ್ಷಣ ಅಮಾನತುಗೊಳಿಸಿ ಪೊಲೀಸರಿಂದ ಮುಸಲ್ಮಾನರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವ ಪ್ರಕರಣದ ವಿಚಾರಣೆ ನಡೆಸಬೇಕು. ಇಲ್ಲದೆ ಹೋದರೆ ಸಾಕ್ಷಿ ನಾಶ ಮಾಡುವ ಕೃತ್ಯ ಪೊಲೀಸ್ ಅಧಿಕಾರಿ ರಕ್ಷಿತ್‌ ರಿಂದ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ: ದಸಂಸ ಖಂಡನೆ

ವಾರ್ತಾಭಾರತಿಯ ಬಂಟ್ವಾಳ ವರದಿಗಾರನ ಬಂಧನ ಪತ್ರಿಕಾ ಮಾಧ್ಯಮದ ಮೇಲಿನ ದಾಳಿಯಾಗಿದ್ದು, ಸಮಾಜದ ಅನ್ಯಾಯದ ವಿರುದ್ಧ ಧ್ವನಿ ಎತ್ತಬಾರದು, ನೈಜ ವಿಚಾರವನ್ನು ತಿಳಿಸಲು ನಿರ್ಬಂಧ ಹೇರುವ ಲಕ್ಷಣ ಮೂಡುತ್ತಿದೆ. ಪತ್ರಿಕೆಯವರು ಪೊಲೀಸ್ ವರಿಷ್ಠಾಧಿಕಾರಿಯ ಸ್ಪಷ್ಟನೆ ಪ್ರಕಟಿಸಿದ್ದರೂ ಪೊಲೀಸರು ಏಕಾಏಕಿ ಪತ್ರಕರ್ತನನ್ನು ಬಂಧಿಸಿರುವ ಕ್ರಮ ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ)ಯ ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಪಿ. ಆನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News