ಅನಾರೋಗ್ಯ ಪೀಡಿತ ಮಕ್ಕಳ ಸಹಾಯಕ್ಕೆ ಶ್ರೀಕೃಷ್ಣಜನ್ಮಾಷ್ಟಮಿ ವೇಷ

Update: 2017-09-11 17:21 GMT

ಉಡುಪಿ, ಸೆ.11: ಕಳೆದ ಮೂರು ವರ್ಷಗಳಿಂದ ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷಧರಿಸಿ ಸಂಗ್ರಹಿಸಿದ ಹಣವನ್ನು ಅನಾರೋಗ್ಯ ಪೀಡಿತ ಬಡ ಮಕ್ಕಳ ಚಿಕಿತ್ಸೆಗೆ ನೀಡುತ್ತಿರುವ ರವಿ ಕಟಪಾಡಿ ಮತ್ತು ತಂಡ ಈ ಬಾರಿಯು ವಿಶಿಷ್ಟ ರೀತಿಯ ವೇಷ ಧರಿಸಿ ನಾಲ್ಕು ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸಲಿದೆ.

ಮೊದಲನೆ ವರ್ಷ 1,04,810 ರೂ., ಎರಡನೆ ವರ್ಷ 3.20 ಲಕ್ಷ ರೂ., ಮೂರನೆ ವರ್ಷ 4.65 ಲಕ್ಷ ರೂ. ಹಣವನ್ನು ಸಂಗ್ರಹಿಸಿ ಒಟ್ಟು 9 ಮಕ್ಕಳ ಚಿಕಿತ್ಸೆಗೆ ನೆರವು ನೀಡಲಾಗಿದೆ.

ಈ ಬಾರಿಯ ಗ್ರಾಂಪಸ್ ಎಂಬ ವಿಶಿಷ್ಟ ವೇಷ ವನ್ನು ಹಾಕಲಿದ್ದು, ಇದಕ್ಕೆ 35 ಸಾವಿರ ರೂ. ಖರ್ಚಾಗಲಿದೆ. ಇದಕ್ಕೆ ವಾರದ ಸಂಬಳದಲ್ಲಿ ಕೂಡಿಟ್ಟ ಹಣವನ್ನು ವಿನಿಯೋಗಿಸುತ್ತೇನೆಯೇ ಹೊರತು ಸಾರ್ವ ಜನಿಕರಿಂದ ಸಂಗ್ರಹವಾದ ಯಾವುದೇ ಹಣ ಬಳಸುವುದಿಲ್ಲ ಎಂದು ಸೆಂಟ್ರಿಂಗ್ ಕೆಲಸ ಮಾಡುವ ರವಿ ಕಟಪಾಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಸೆ.13 ಮತ್ತು 14ರಂದು ವೇಷಧರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮೂಡುಬಿದಿರೆ ದರೆಗುಡ್ಡೆ ಗ್ರಾಪಂ ವ್ಯಾಪ್ತಿಯ ಪಣಪಿಲ ಪುನಿಕೆಬೆಟ್ಟುವಿನಲ್ಲಿ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಒಂದೂವರೆ ವರ್ಷದ ಲಾವಣ್ಯ, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಶಿವಮೊಗ್ಗದ ಮೆಹಕ್, ದೆಂದೂರು ಕಟ್ಟೆಯ ಒಂದೂವರೆ ತಿಂಗಳ ಮಗು ಮತ್ತು ಬನ್ನಂಜೆಯ ಮಗುವಿನ ಚಿಕಿತ್ಸೆಗೆ ನೆರವು ನೀಡಲಾಗುವುದು. ನನಗೆ ವೇಷವನ್ನು ಕಲಾವಿದ ಸಂತೋಷ್ ಪಿತ್ರೋಡಿ ಹಾಕಲಿದ್ದಾರೆ ಎಂದರು.

ಸಂಗ್ರಹಿಸಿದ ಹಣವನ್ನು ಸೆ.19ರಂದು ಸಂಜೆ 4ಗಂಟೆಗೆ ಕಟಪಾಡಿ ವಿಜಯ ಬ್ಯಾಂಕಿನ ಬಳಿ ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಡಾ.ಸಂಜೀವ ಪಾಟೀಲ್ ಸಮ್ಮುಖದಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು. ಧನ ಸಹಾಯ ಮಾಡಲಿಚ್ಛಿಸುವವರು ಪಾಂಗಾಳ ವಿಜಯ ಬ್ಯಾಂಕಿನ ಎಸ್.ಬಿ. ಖಾತೆ ಸಂಖ್ಯೆ 1172063310000 13ಗೆ(ಐಎಫ್‌ಎಸ್‌ಸಿಕೋಡ್-ವಿಐಜೆಬಿ0001172)ಜಮಾ ಮಾಡಬಹುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರವಿ ಮತ್ತು ಫ್ರೆಂಡ್ಸ್ ತಂಡದ ಚರಣ್‌ರಾಜ್, ಸುಧೀಶ್, ಪ್ರೊ.ದಯಾನಂದ, ಅರುಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News