ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರ ಶೀಘ್ರದಲ್ಲೇ ರಚನೆ: ಸಚಿವ ಸೀತಾರಾಂ

Update: 2017-09-12 11:18 GMT

ಮಂಗಳೂರು, ಸೆ.12: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮವನ್ನು ಪ್ರಮುಖ ಆಕರ್ಷಣೆ ಹಾಗೂ ಪ್ರವಾಸೋದ್ಯಮ ತಾಣವನ್ನಾಗಿಸುವ ನಿಟ್ಟಿನಲ್ಲಿ ಪಿಲಿಕುಳ ನಿಸರ್ಗಧಾಮ ಅಭಿವೃದ್ಧಿ ಪ್ರಾಧಿಕಾರವನ್ನು ಶೀಘ್ರದಲ್ಲೇ ರಚನೆ ಮಾಡಲಾಗುವುದು ಎಂದು ಯೋಜನೆ, ಸಾಂಖ್ಯಿಕ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಾದ ಎಂ.ಆರ್. ಸೀತಾರಾಂ ತಿಳಿಸಿದ್ದಾರೆ.

ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿ ಅಲ್ಲಿ ನಿರ್ಮಾಣವಾಗುತ್ತಿರುವ 3ಡಿ ಪ್ಲಾನಿಟೋರಿಯಂನ ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಾಧಿಕಾರ ರಚನೆಗೆ ಸಂಬಂಧಿಸಿ ಸಚಿವ ಸಂಪುಟದಿಂದ ಒಪ್ಪಿಗೆ ಪಡೆದು ಅಸೆಂಬ್ಲಿಯಲ್ಲಿ ಮಂಡಿಸಲಾಗುವುದು. ಪ್ರಾಧಿಕಾರ ರಚನೆಯ ಮೂಲಕ ಇದು ಸರಕಾರದ ಸಂಸ್ಥೆಯಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಪಿಲಿಕುಳ ಅಂತಾರಾಷ್ಟ್ರೀಯ ತಾಣವಾಗಿ ಗುರುತಿಸಲ್ಪಡಲಿದೆ. ಪಿಲಿಕುಳ ನಿಸರ್ಗಧಾಮಕ್ಕೆ ವೀಕ್ಷಣೆಗೆ ಬರುವವರು ಸಂಪೂರ್ಣ ಪಿಲಿಕುಳವನ್ನು ವಾಹನ ವ್ಯವಸ್ಥೆ ಮೂಲಕ ವೀಕ್ಷಿಸುವ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದು ಅವರು ಅವರು ಹೇಳಿದರು.

ವೇಗ ಪಡೆದ 3ಡಿ ತಾರಾಲಯ ಕಾಮಗಾರಿ: ಡಿಸೆಂಬರ್ ನಲ್ಲಿ ಲೋಕಾರ್ಪಣೆ

ಪಿಲಿಕುಳದ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಒಂದು ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ 3ಡಿ ತಾರಾಲಯದ ಕಾಮಗಾರಿ ವೇಗವನ್ನು ಪಡೆದಿದೆ. ತಾರಾಲಯದ ಗುಮ್ಮಟ ಮತ್ತು ಪ್ರೊಜೆಕ್ಷನ್ ಸಿಸ್ಟಂಗಳ ಸರಬರಾಜು ಹಾಗೂ ಅಳವಡಿಕೆಗೆ ಅಂತಾರಾಷ್ಟ್ರೀಯ ಟೆಂಡರ್ ಕರೆದು ಅಮೆರಿಕದ ಮೆ. ಇವಾನ್ಸ್ ಆ್ಯಂಡ್ ಸದರ್‌ಲ್ಯಾಂಡ್ ಕಂಪನಿಯ ಟೆಂಡರನ್ನು ಅಂತಿಮಗೊಳಿಸಲಾಗಿದೆ. ಸರಬರಾಜಿಗೆ ಆದೇಶವನ್ನೂ ನೀಡಲಾಗಿದೆ. ಕಂಪನಿಯವರು ಗುಮ್ಮಟ ಕಳುಹಿಸಿದ್ದು, ಅದು ಶೀಘ್ರದಲ್ಲೇ ಪಿಲಿಕುಳವನು ತಲುಪಲಿದೆ. ಅದೇ ವೇಳೆ ಜಪಾನ್‌ನಿಂದ ಇತರ ತಾಂತ್ರಿಕ ಉಪಕರಣಗಳೂ ಶೀಘ್ರದಲ್ಲೇ ಪಿಲಿಕುಳಕ್ಕೆ ತಲುಪಲಿವೆ. ಅಕ್ಟೋಬರ್ ಅಂತ್ಯಕ್ಕೆ ಉಪಕರಣಗಳ ಅಳವಡಿಕೆ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ತಿಂಗಳಲ್ಲಿ ಲೋಕಾರ್ಪಣೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಚಿವ ಸೀತಾರಾಂ ಹೇಳಿದರು.

ಪ್ರಪಂಚದಲ್ಲಿ ಇದು 21ನೆ 3ಡಿ ತಾರಾಲಯವಾಗಿ ಗುರುತಿಸಲ್ಪಡಲಿದ್ದರೆ, ಭಾರತದ ಪ್ರಥಮ 3 ಡಿ ತಾರಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಒಟ್ಟು 35.69 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ತಾರಾಲಯದಲ್ಲಿ 180 ಮಂದಿ ಏಕಕಾಲದಲ್ಲಿ ವೀಕ್ಷಿಸಬಹುದಾದ 3ಡಿ ಥಿಯೇಟರ್ ವ್ಯವಸ್ಥೆಗೊಳಿಸಲಾಗಿದೆ. ಇದರಲ್ಲಿ ಖಗೋಳ ಶಾಸ್ತ್ರ, ವ್ಯೋಮ ಶಾಸ್ತ್ರ ಇತ್ಯಾದಿಗಳಿಗೆ ಫಿಲ್ಮ್ ಶೋ ಹಾಗೂ ಪೂರಕ ಚಟುವಟಿಕೆಗಳನ್ನು ಏರ್ಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಶಾಸಕ ಜೆ.ಆರ್. ಲೋಬೋ ಮಾತನಾಡಿ, ಪಿಲಿಕುಳ ನಿಸರ್ಗಧಾಮದಲ್ಲಿ ಮೀನುಗಾರಿಕೆ ಇಲಾಖೆಯಿಂದ 15 ಕೋಟಿ ರೂ. ವೆಚ್ಚದಲ್ಲಿ ಮತ್ಸಾಲಯ ನಿರ್ಮಾಣವಾಗಲಿದೆ. ಪರಿಸಲ ಮಾಲಿನ್ಯ ನಿಯಂತ್ರಣ ಇಲಾಖೆಯು ಅರ್ಬನ್ ಇಕೋ ಪಾರ್ಕ್ ನಿರ್ಮಾಣಕ್ಕೆ 18 ಕೋಟಿ ರೂ. ಮಂಜೂರು ಮಾಡಿದೆ. ಇದೇ ವೇಳೆ ಪಿಲಿಕುಳದ ಪಾರಂಪರಿಕ ಗ್ರಾಮ (ಹೆರಿಟೇಜ್ ವಿಲೆಜ್)ದ ಅಭಿವೃದ್ದಿಗೂ ಚಿಂತನೆ ನಡೆಸಲಾಗಿದೆ ಎಂದು ವಿವರ ನೀಡಿದರು.

ವಾಮಂಜೂರು ಜಂಕ್ಷನಿಂದ ಪಿಲಿಕುಳಕ್ಕೆ ಚತುಷ್ಪಥ ರಸ್ತೆ

ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸಿಗರು ಹಾಗೂ ವೀಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸಲಾಗುತ್ತಿದೆ.ಇದಕ್ಕಾಗಿ ವಾಮಂಜೂರು ಜಂಕ್ಷನ್‌ನಿಂದ ಪಿಲಿಕುಳದ ಪ್ರವೇಶ ದ್ವಾರದವರೆಗಿನ ರಸ್ತೆಯನ್ನು ಚತುಷ್ಪಥಗೊಳಿಸಲು 495 ಲಕ್ಷ ರೂ.ಗಳ ಅನುದಾನಕ್ಕೆ ಮಂಜೂರಾತಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರು ಒದಗಿಸಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೋ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್, ಟಿ.ಕೆ. ಸುಧೀರ್, ನಾಗೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News