ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್ ಅಳವಡಿಸದಿದ್ದರೆ ಕಮಿಷನ್‌ ಕಡಿತ: ಸಚಿವ ಖಾದರ್

Update: 2017-09-12 12:28 GMT

ಮಂಗಳೂರು, ಸೆ.12: ನ್ಯಾಯ ಬೆಲೆ ಅಂಗಡಿಗಳಲ್ಲಿ ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರಗಳನ್ನು ಅಳವಡಿಸುವ ಕಾರ್ಯವನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಂಗಡಿ ನಡೆಸುವವರಿಗೆ ಮಾಹಿತಿ ನೀಡಲಾಗಿದೆ. ಅಂತರ್ಜಾಲ ವ್ಯವಸ್ಥೆ ಸಮರ್ಪಕವಾಗಿದ್ದುಕೊಂಡು ಪಿಒಎಸ್ ಅಳವಡಿಸದಿದ್ದರೆ ಕಮಿಷನ್ ಕಡಿತಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಇಂಟರ್‌ನೆಟ್ ವ್ಯವಸ್ಥೆ ಸರಿಯಾಗಿದ್ದು ಕೂಡ ಪಿಒಎಸ್ ಯಂತ್ರ ಅಳವಡಿಸದೇ ಇದ್ದಲ್ಲಿ ಅವರು ಜನರಿಗೆ ಮೋಸ ಮಾಡುತ್ತಿದ್ದಾರೆ ಎನ್ನುವುದು ಖಾತ್ರಿಯಾಗುತ್ತದೆ. ಈ ಕಾರಣದಿಂದ ಕೇಂದ್ರದಿಂದ ಅಂಗೀಕೃತವಾದ ಸಂಸ್ಥೆಯೊಂದರ ಮೂಲಕ ಒಪ್ಪಂದ ಮಾಡಿಕೊಂಡು ಈ ಪ್ರದೇಶದಲ್ಲಿ ಅವರಿಂದ ಪಿಒಎಸ್ ಯಂತ್ರ ಅಳವಡಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್ ಯಂತ್ರಗಳನ್ನು ಅಳವಡಿಸುವ ವಿಚಾರದಲ್ಲಿ ದ.ಕ ಜಿಲ್ಲೆಯಲ್ಲಿ ಶೇ.96ರಷ್ಟು ಪ್ರಗತಿ ಕಂಡಿದೆ. ದ.ಕ.ದಲ್ಲಿ 491 ನ್ಯಾಯಬೆಲೆ ಅಂಗಡಿಗಳಲ್ಲಿ 473 ಅಂಗಡಿಗಳಲ್ಲಿ ಈಗಾಗಲೇ ಪಿಒಎಸ್ ಯಂತ್ರ ಆಳವಡಿಸಲಾಗಿದೆ ಎಂದು ಅವರು ಹೇಳಿದರು.

ಉಳಿದಂತೆ ರಾಜ್ಯದಲ್ಲಿ ಶೇ. 60ರಷ್ಟು ಪಿಒಎಸ್ ಅಳವಡಿಸುವ ಕಾರ್ಯ ಪೂರ್ತಿಯಾಗಿದೆ. ರಾಮನಗರದಲ್ಲಿ ಶೇ. 25 ಮಾತ್ರ ನಡೆಯುವ ಮೂಲಕ ಕೊನೆ ಸ್ಥಾನದಲ್ಲಿದೆ. ರಾಜ್ಯದ ಯಾದಗಿರಿಯಲ್ಲಿ ಶೇ.44, ಬಳ್ಳಾರಿಯಲ್ಲಿ ಶೇ.80 ಪಿಒಎಸ್ ಯಂತ್ರಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಈ ಕಾರ್ಯ ಪೂರ್ಣಗೊಳ್ಳಬೇಕು ಎಂದು ನ್ಯಾಯಬೆಲೆ ಅಂಗಡಿಗಳನ್ನು ನಡೆಸುವವರಿಗೆ ಮಾಹಿತಿ ನೀಡಲಾಗಿದೆ.

ಅನಿಲ ಭಾಗ್ಯದಡಿ ಬಿಪಿಎಲ್‌ನವರಿಗೆ 2 ಅಡುಗೆ ಅನಿಲ ಸಿಲಿಂಡರ್ ಉಚಿತ

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಲ್ಲಿ ಈಗಾಗಲೇ ಸಿಲಿಂಡರ್, ಸ್ಟವ್ ನೀಡುವ ಜತೆಯಲ್ಲಿ ಮತ್ತೊಂದು ರೀಫಿಲ್ಲಿಂಗ್ ಸಿಲಿಂಡರ್ ನೀಡುವ ಕಾರ್ಯದ ಕುರಿತು ಕ್ಯಾಬಿನೆಟ್‌ಗೆ ಕಡತವನ್ನು ಶೀಘ್ರದಲ್ಲಿ ಸಲ್ಲಿಸುವ ಯೋಜನೆಯಿದೆ. ಇದಕ್ಕೆ ಆಹಾರ ಇಲಾಖೆ, ಕಾರ್ಮಿಕ ಇಲಾಖೆ, ಅರಣ್ಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಕೂಡ ಜತೆಯಾಗಿ ಕೆಲಸ ಮಾಡಲಿದೆ ಎಂದು ಸಚಿವ ಖಾದರ್ ಹೇಳಿದರು.

ಸೆ.14ರಂದು ಕೊಟ್ಟ ಮಾತು ದಿಟ್ಟ ಸಾಧನೆ

ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕೂತವರಿಗೆ ಹಕ್ಕು ಪತ್ರ ನೀಡುವ ವಿಶೇಷ ಯೋಜನೆಯನ್ನು ರಾಜ್ಯ ಸರಕಾರ ಉತ್ತಮ ರೀತಿಯಲ್ಲಿ ಮಾಡುತ್ತಿದೆ. ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಈಗಾಗಲೇ 94ಸಿಯಲ್ಲಿ 3 ಸಾವಿರ ಹಾಗೂ 94ಸಿಸಿಯಲ್ಲಿ 6642 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ಸೆ.14ರಂದು ಬೆಳಗ್ಗೆ 10.30ಕ್ಕೆ ಮುಡಿಪುವಿನ ಸರಕಾರಿ ಕಾಲೇಜಿನ ಆವರಣದಲ್ಲಿ ಕೊಟ್ಟ ಮಾತು ದಿಟ್ಟ ಸಾಧನೆ ಎನ್ನುವ ಕಾರ್ಯಕ್ರಮ ನಡೆಯಲಿದೆ. ಕಂದಾಯ ಸಚಿವರು ಹಕ್ಕು ಪತ್ರ ನೀಡುವ ಜತೆಯಲ್ಲಿ ನಾನಾ ಫಲಾನುಭವಿಗಳಿಗೆ ಸವಲತ್ತು ವಿತರಣೆ ನಡೆಯಲಿದೆ ಎಂದರು.

ಸಿಆರ್ ಝೆಡ್ ಪ್ರದೇಶದಲ್ಲಿ 1991ರಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ಮಂದಿಗೂ ಹಕ್ಕು ಪತ್ರ ನೀಡಲಾಗುತ್ತದೆ. 94ಸಿ, 94ಸಿಸಿಗೆ ಅರ್ಜಿ ಸಲ್ಲಿಸಿದ ಮಂದಿ ಸರಕಾರ ನಿಗದಿ ಮಾಡಿದ ಶುಲ್ಕ ಕಟ್ಟಬೇಕು. ಆದರೆ ಕೆಲವು ಮಂದಿ ಇಂತಹ ಶುಲ್ಕ ಕಟ್ಟಬೇಡಿ ಎಂದು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಅರ್ಜಿ ಸಲ್ಲಿಸಿದ ಬಳಿಕ ಶುಲ್ಕ ಕಟ್ಟಿ ಹಕ್ಕು ಪತ್ರ ಪಡೆದುಕೊಳ್ಳಿ ಎಂದು ಸಚಿವರು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಮಮತಾ ಗಟ್ಟಿ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಕಾರ್ಪೊರೇಟರ್ ಅಪ್ಪಿ ಉಪಸ್ಥಿತರಿದ್ದರು.

ಎಂಡೋ ಪೀಡಿತರಿಗೆ ಮಾದರಿ ತರಬೇತಿ ಕೇಂದ್ರ

ಎಂಡೋ ಸಲ್ಫಾನ್ ಪೀಡಿತರಿಗೆ ಉಜಿರೆಯಲ್ಲಿ ಹಳೆಯ ಕಟ್ಟಡವೊಂದರಲ್ಲಿ ಮಾದರಿ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಕುರಿತು ತಾನು ಆರೋಗ್ಯ ಸಚಿವರಿದ್ದಾಗ ಯೋಜನೆ ಹಾಕಿಕೊಳ್ಳಲಾಗಿತ್ತು. ಇದೀಗ ವಿಶೇಷ ಮಕ್ಕಳಿಗೆ ಮಂಗಳೂರಿನ ಸಾನಿಧ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ಮಾದರಿ ತರಬೇತಿ ಕೇಂದ್ರ ಸ್ಥಾಪನೆಗೆ ಸೆ.13ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ಸಾನಿಧ್ಯ ಸಂಸ್ಥೆಯ ಮುಖ್ಯಸ್ಥರ ಜತೆಯಲ್ಲಿ ಒಪ್ಪಂದವೊಂದನ್ನು ಮಾಡಲಾಗುತ್ತದೆ. ಈ ಮೂಲಕ ಎಂಡೋ ಸಲ್ಫಾನ್ ಪೀಡಿತ ಮಕ್ಕಳಿಗೆ ಮಾದರಿ ಪುನರ್‌ವಸತಿ ತರಬೇತಿ ಕೇಂದ್ರ ಆರಂಭವಾಗಲಿದೆ.

ಈ ತರಬೇತಿ ಕೇಂದ್ರದಲ್ಲಿ ವಿಶೇಷ ಮಕ್ಕಳಿಗೆ ನೀಡಲಾಗುವ ಕೌಶಲ್ಯ ಅಭಿವೃದ್ದಿ ತರಬೇತಿಗಳನ್ನು ಈ ಕೇಂದ್ರದ ಮೂಲಕ ಎಂಡೋ ಪೀಡಿತರಿಗೆ ಒದಗಿಸಲಾಗುವುದು. ಅದಕ್ಕಾಗಿ ಎಂಡೋ ಪೀಡಿತರಿಗಾಗಿ ಟಿವಿ ವಾಹಿನಿಯೊಂದು ಸಂಗ್ರಹಿಸಿರುವ ಸುಮಾರು ಒಂದೂವರೆ ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಈ ಕೇಂದ್ರದಲ್ಲಿ ತರಬೇತಿ ನೀಡುವ ಶಿಕ್ಷಕರಿಗೆ ವೇತನವಾಗಿ ನೀಡಲು ಉಪಯೋಗಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News