ಹಿಂಜಾವೇ ಮುಖಂಡರ ವಿರುದ್ಧ ಮುಂಜಾಗ್ರತಾ ಪ್ರಕರಣ ದಾಖಲು

Update: 2017-09-12 16:46 GMT

ಕುಂದಾಪುರ, ಸೆ.12: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ತಂಡವು ವಿಹಾರಕ್ಕೆ ತೆರಳಿದ ವಿದ್ಯಾರ್ಥಿಗಳ ಕಾರನ್ನು ತಡೆದು ಹಲ್ಲೆ ಮಾಡಿರುವ ಘಟನೆ ಸೋಮವಾರ ಸಂಜೆ ಕೋಟೇಶ್ವರ ಬೈಪಾಸ್ ಬಳಿ ನಡೆದಿದೆ.

ಉಡುಪಿಯ ಕಾಲೇಜೊಂದರ ಐವರು ವಿದ್ಯಾರ್ಥಿಗಳು ವಿಹಾರಕ್ಕೆಂದು ಕಾರಿನಲ್ಲಿ ಸೋಮವಾರ ಬೆಳಗ್ಗೆ ತ್ರಾಸಿ ಹಾಗೂ ಮರವಂತೆ ಬೀಚ್‌ಗೆ ಹೋಗಿದ್ದರು. ಇವರಲ್ಲಿ ಇಬ್ಬರು ಮುಸ್ಲಿಮ್ ಸಹೋದರ ಸಹೋದರಿಯರು, ಒಬ್ಬಳು ಕ್ರಿಶ್ಚಿಯನ್ ಹಾಗೂ ಒಬ್ಬಳು ಹಿಂದೂ ಹುಡುಗಿ ಮತ್ತು ಓರ್ವ ಮುಸ್ಲಿಮ್ ಹುಡುಗ ಇದ್ದರು. ಹುಡುಗರು ಕಾರಿನ ಎದುರಿನ ಸೀಟಿನಲ್ಲಿ ಮತ್ತು ಮೂವರು ಹುಡುಗಿಯರು ಹಿಂಬದಿಯ ಸೀಟಿನಲ್ಲಿ ಕುಳಿತು ಸಂಜೆ 6ಗಂಟೆಗೆ ಉಡುಪಿಗೆ ಹೊರಟಿದ್ದರು.

ಈ ಮಧ್ಯೆ ವಿಷಯ ತಿಳಿದ ಹಿಂದೂ ಜಾಗರಣಾ ವೇದಿಕೆಯ ಸುಮಾರು 100 ಮಂದಿ ಕಾರ್ಯಕರ್ತರು ಕೋಟೇಶ್ವರ ಬೈಪಾಸ್‌ನಲ್ಲಿ ಕಾರನ್ನು ಅಡ್ಡಗಟ್ಟಿ ವಿದ್ಯಾರ್ಥಿಗಳನ್ನು ಬೆದರಿಸಿ ಹಲ್ಲೆ ನಡೆಸಿದ್ದರೆನ್ನಲಾಗಿದೆ. ವಿದ್ಯಾರ್ಥಿಗಳು ನಾವೆಲ್ಲ ಗೆಳೆಯರು ವಿಹಾರಕ್ಕಾಗಿ ಬಂದಿದ್ದೇವೆ ಎಂದು ಹೇಳಿದರೂ ಕೇಳದ ಯುವಕರ ಪಡೆ ಹಲ್ಲೆಗೆ ಮುಂದಾಗಿತ್ತು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.

ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂದಾಪುರ ಎಸ್ಸೈ ನಾಸೀರ್ ಹುಸೇನ್ ಹಾಗೂ ತಂಡ ವಿದ್ಯಾರ್ಥಿಗಳನ್ನು ಅಲ್ಲಿಂದ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿತು. ಈ ವೇಳೆ ಠಾಣೆಯಲ್ಲಿ ನೂರಾರು ಸಂಖ್ಯೆಯ ಹಿಂಜಾವೇ ಕಾರ್ಯಕರ್ತರು ಜಮಾಯಿಸಿದ್ದರು. ಪೊಲೀಸರು ಪೋಷಕರನ್ನು ಸಂಪರ್ಕಿಸಿದಾಗ ನಮ್ಮ ಮಕ್ಕಳು ನಮಗೆ ತಿಳಿಸಿಯೇ ತಿರುಗಾಡಲು ಹೋಗಿರುವು ದಾಗಿ ಹೇಳಿದರು.

ಈ ಹಿನ್ನೆಲೆಯಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಹಾಗೂ ಎಸ್ಸೈ ನಾಸೀರ್ ಹುಸೇನ್ ಠಾಣೆಯಲ್ಲಿ ಜಮಾಯಿಸಿದ ಹಿಂಜಾವೇ ಕಾರ್ಯ ಕರ್ತರಿಗೆ ಎಚ್ಚರಿಕೆ ನೀಡಿ, ಇನ್ನು ಮುಂದೆ ಈ ರೀತಿ ನಡೆದುಕೊಂಡರೆ ನಿಮ್ಮ ವಿರುದ್ಧವೇ ಕ್ರಮ ಜರಗಿಸಬೇಕಾಗುತ್ತದೆ. ಪೊಲೀಸರು ಮಾಡುವ ಕೆಲಸ ನೀವು ಮಾಡಬಾರದು. ಯಾವುದೇ ವಿಚಾರ ನಿಮ್ಮ ಗಮನಕ್ಕೆ ಬಂದರೆ ಕೂಡಲೇ ನಮಗೆ ತಿಳಿಸಿ, ನಾವು ಇದ್ದೇವೆ. ಅದು ಬಿಟ್ಟು ನಿಮಗೆ ಕಾನೂನು ಕೈಗೆತ್ತಿಕೊಳ್ಳಲು ಅಧಿಕಾರ ಇಲ್ಲ ಎಂದು ತಿಳಿಸಿದರು.

ಇದರಿಂದಾಗಿ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತ್ತೆನ್ನಲಾಗಿದೆ. ‘ಇನ್ನು ಮುಂದೆ ಯಾವುದೇ ಮಾಹಿತಿ ಪೊಲೀಸರಿಗೆ ತಿಳಿಸದೆ ನಾವೇ ನೋಡಿಕೊಳ್ಳುತ್ತೇವೆ’ ಎಂಬುದಾಗಿ ಹಿಂಜಾವೇ ಮುಖಂಡ, ಕೆಂಜೂರು ಪ್ರವೀಣ್ ಪೂಜಾರಿ ಹತ್ಯೆಯ ಆರೋಪಿ ಅರವಿಂದ ಕೋಟೇಶ್ವರ ಹಾಗೂ ಇತರರು ಪೊಲೀಸರಿಗೆ ಉಡಾಫೆ ಉತ್ತರ ನೀಡಿದರು. ಈ ರೀತಿ ಬೆದರಿಕೆಯೊಡ್ಡಿದ ಹಿಂಜಾವೇ ಮುಖಂಡರಾದ ಅರವಿಂದ ಕೋಟೇಶ್ವರ, ಅಶೋಕ್, ರಾಕೇಶ್, ರಂಜನ್, ಅನಿಲ್, ಸಂಪತ್, ಶಂಕರ್ ಕೋಟ ಅವರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಬಳಿಕ ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸ್ ಭದ್ರತೆ ಯಲ್ಲಿ ವಿದ್ಯಾರ್ಥಿಗಳನ್ನು ಉಡುಪಿಯಲ್ಲಿರುವ ಅವರ ಮನೆಗೆ ಬಿಟ್ಟು ಬರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News