ಕದ್ರಿ ದೇವಳದ ಅಂಗಣದಲ್ಲಿ ಕೃಷ್ಣ ಬಾಲ ಲೀಲೆ

Update: 2017-09-13 13:29 GMT

ಮಂಗಳೂರು, ಸೆ. 13: ಅಂಗಣದಲ್ಲೆಲ್ಲಾ ಕಂದಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣರ ಓಡಾಟ. ಇನ್ನಷ್ಟೇ ಹೆಜ್ಜೆ ಇರಿಸಲು ಕಲಿಯಬೇಕಿರುವ ಕಂದ ಕೃಷ್ಣನಿಂದ ಹಿಡಿದು ವಸುದೇವ ಕೃಷ್ಣರವರೆಗಿನ ಶ್ರೀಕೃಷ್ಣನ ಅವತಾರಗಳ ಸ್ಪರ್ಧೆಗಾಗಿ ಕದ್ರಿ ಮಂಜುನಾಥ ಕ್ಷೇತ್ರ ನಂದಗೋಕುಲವಾಗಿ ಮಾರ್ಪಟ್ಟಿತ್ತು.

ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ 32ನೆ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ-ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪುಟಾಣಿ ಮಕ್ಕಳು ಭಾಗವಹಿಸಿದ್ದರು. ಶ್ರೀಕೃಷ್ಣ ವೇಷ ಸ್ಪರ್ಧೆಯ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಶ್ರೀಕ್ಷೇತ್ರಕ್ಕೆ ಬರುವವರ ಸಂಖ್ಯೆ ಹೆಚ್ಚಿತ್ತು. ಪೋಷಕರು ತಮ್ಮ ಮಕ್ಕಳಿಗೆ ವಿವಿಧ ಭಂಗಿ, ಶೈಲಿಯ ಕೃಷ್ಣನ ವೇಷಗಳನ್ನು ಹಾಕಿಸಿ ಖುಷಿ ಪಡುತ್ತಿದ್ದರೆ, ಕೃಷ್ಣನ ವಿಭಿನ್ನ ಅವತಾರಗಳನ್ನು ಸ್ಪರ್ಧಿಗಳ ರೂಪದಲ್ಲಿ ನೋಡುತ್ತಾ ದೇವಳಕ್ಕೆ ಬಂದಿದ್ದ ಭಕ್ತರು, ವೀಕ್ಷಕರೂ ಸಂಭ್ರಮಿಸಿದರು.

ಕದ್ರಿ ಕ್ಷೇತ್ರದ ಅಂಗಣದ ಸುತ್ತಮುತ್ತಲು 30 ವಿಭಾಗಗಳಲ್ಲಿ ಕೃಷ್ಣ ವೇಷ ಸ್ಪರ್ಧೆಗಳು ನಡೆಯಿತು. ಕಂದಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ಯಕ್ಷಕೃಷ್ಣ, ರಾಧಾಕೃಷ್ಣ, ಯಶೋಧಕೃಷ್ಣ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.
ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ದೀಪಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಲ್ಕೂರ ಪ್ರತಿಷ್ಠಾನ ಪ್ರತಿವರ್ಷ ಮಕ್ಕಳ ಉತ್ಸವ ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುತ್ತಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಅವರು ಶುಭ ಹಾರೈಸಿದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ 32 ವರ್ಷಗಳಿಂದ ಶ್ರೀಕೃಷ್ಣವೇಷ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಕೂಡ ನಿರೀಕ್ಷೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ಕರ್ಣಾಟಕ ಬ್ಯಾಂಕಿನ ಪಿ.ಜಯರಾಮ ಭಟ್, ಎ.ಜೆ.ಸಂಸ್ಥೆಯ ಅಧ್ಯಕ್ಷ ಎ.ಜೆ.ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಪುನರೂರು, ಹರಿನಾಥ್, ಶಶಿಧರ ಹೆಗ್ಡೆ, ಲೀಲಾಕ್ಷ ಕರ್ಕೇರಾ, ಕದ್ರಿ ನವನೀತ ಶೆಟ್ಟಿ, ದಿನೇಶ್ ದೇವಾಡಿಗ, ವಿಜಯಲಕ್ಷ್ಮೀ ಶೆಟ್ಟಿ,ಕೆ.ಎಸ್.ಕಲ್ಲೂರಾಯ, ರತ್ನಾಕರ ಜೈನ್, ಸುಧಾಕರ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ, ಜಿ.ಕೆ.ಭಟ್ ಸೆರಾಜೆ, ಜನಾರ್ದನ ಹಂದೆ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News