​ಸೆ.24: ಸಾಹಿತ್ಯ ಸಮ್ಮೇಳನ ದತ್ತಿನಿಧಿ ಕಾರ್ಯಕ್ರಮ

Update: 2017-09-13 16:49 GMT

ಪುತ್ತೂರು, ಸೆ. 13: ಕಸಾಪ ಪುತ್ತೂರು ತಾಲೂಕು ಘಟಕದ ವತಿಯಿಂದ ದ.ಕ. ಜಿಲ್ಲಾ 18ನೆಯ ಸಾಹಿತ್ಯ ಸಮ್ಮೇಳದ ದತ್ತಿನಿಧಿ ಕಾರ್ಯಕ್ರಮ ಸೆ.24ರಂದು ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕಾ ತಿಳಿಸಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮವನ್ನು ಕಸಾಪ ದ.ಕ.ಜಿಲ್ಲಾ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಲಿದ್ದಾರೆ. ತಾಲೂಕು ಘಟಕದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಗ್ಗೆ ಕವಿಗೋಷ್ಠಿ ಮತ್ತು ಕಥಾಗೋಷ್ಠಿ ನಡೆಯಲಿದ್ದು, ಗೋಷ್ಠಿಯಲ್ಲಿ ವಿದ್ಯಾರ್ಥಿಗಳು, ಯುವ ಕವಿ ಸಾಹಿತಿಗಳು ಭಾಗವಹಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳು ಕವಿ- ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸುದಾನ ಶಾಲೆಯ ಶಿಕ್ಷಕಿ ಕವಿತಾ ಅಡೂರು ಮತ್ತು ಸುಳ್ಯದ ಉಪನ್ಯಾಸಕ ರಾಧೇಶ್ತೋಳ್ಪಾಡಿ ಸಂವಾದ ನಡೆಸಲಿದ್ದಾರೆ.

ಸಂಜೆ  ವಿಶೇಷ ಉಪನ್ಯಾಸ ಮತ್ತು ಕೃತಿ ಬಿಡುಗಡೆ ನಡೆಯಲಿದೆ. ‘ಎಂ.ಕೆ. ಇಂದಿರಾ ಶತಮಾನದ ನೆನಪುಗಳು’ ವಿಷಯದ ಕುರಿತು ವಿವೇಕಾನಂದ ಕಾಲೇಜ್‌ನ ಉಪನ್ಯಾಸಕಿ ಡಾ. ಗೀತಾ ಕುಮಾರಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಪ್ರೊ. ವಿ.ಬಿ.ಅರ್ತಿಕಜೆ ಅವರ ‘ಚಿಂತನಗಾಥಾ’ ಕೃತಿ ಲೋಕಾರ್ಪಣೆಗೊಳಿಸಲಾಗುವುದು. ಸುಳ್ಯದ ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್ ಕೃತಿ ಅನಾವರಣ ಮಾಡಲಿದ್ದಾರೆ. ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶಕ ಪ್ರಕಾಶ್ ಕೊಡೆಂಕಿರಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಕಸಾಪ ಪುತ್ತೂರು ಘಟಕದ ವತಿಯಿಂದ ಕಳೆದ ವರ್ಷ ಮತ್ತು ಈ ವರ್ಷ 69 ಕಾರ್ಯಕ್ರಮಗಳನ್ನು ಶಾಲಾ ಕಾಲೇಜು ಹಾಗೂ ಸಾರ್ವಜನಿಕವಾಗಿ ನಡೆಸಲಾಗಿದೆ. 2 ಸ್ಮರಣ ಸಂಚಿಕೆ ಸೇರಿದಂತೆ 26 ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಮಹಿಳೆಯರು ಮತ್ತು ಮಕ್ಕಳನ್ನು ಸಾಹಿತ್ಯಾತ್ಮಕವಾಗಿ ತೊಡಗಿಸಿಕೊಳ್ಳುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಡಾ. ಶ್ರೀಧರ್ ಎಚ್.ಜಿ, ಸರೋಜಿನಿ ಮೇನಾಲ, ಗೌರವ ಕೋಶಾಧಿಕಾರಿ ಎನ್.ಕೆ.ಜಗನ್ನಿವಾಸ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News