ಪ್ರಗತಿಪರ ಚಳವಳಿಗಳ ಭಾಗವಾಗಿದ್ದ ಗೌರಿ: ಹಯವದನ

Update: 2017-09-14 14:54 GMT

ಮಂಗಳೂರು, ಸೆ. 14: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಗೌರಿ ಲಂಕೇಶ್ ಅವರು ಪ್ರಗತಿಪರ ಚಳವಳಿಗಳ ಭಾಗವಾಗಿದ್ದರು ಎಂದು ಚಿಂತಕ, ಉಪನ್ಯಾಸಕ ಡಾ. ಹಯವದನ ಉಪಾಧ್ಯ ಹೇಳಿದ್ದಾರೆ.

ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ವತಿಯಿಂದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ಗುರುವಾರ ನಡೆದ ಪ್ರತಿರೋಧ ಸಭೆಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಅವರನ್ನು ನಾನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಅನ್ಯಾಯಗಳನ್ನು ವಿರೋಧಿಸುತ್ತಿದ್ದ ಅವರು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪರವಾಗಿದ್ದರು. ಗೌರಿ ಅವರು ಕಂಡದ್ದನ್ನು ಬರೆಯುತ್ತಿದ್ದರು. ಸತ್ಯ ಹೇಳುತ್ತಿದ್ದರು. ಆದ್ದರಿಂದಲೇ ಅವರ ಕೊಲೆಯಾಗಿದೆ ಎಂದರು.

ಕೆಥೋಲಿಕ್ ಸಭಾದ ಧಾರ್ಮಿಕ ನಿರ್ದೇಶಕ ವಂ.ಮ್ಯಾಥಿವ್ ವಾಸ್ ಮಾತನಾಡಿ, ವಿಚಾರಧಾರೆ, ಚಿಂತನೆಗಳು ಏನೇ ಇದ್ದರೂ ಹತ್ಯೆ ಮಾಡುವ ಹಕ್ಕು ಯಾರಿಗೂ ಇಲ್ಲ. ಇತರರನ್ನು ಗೌರವಿಸಿ ಬದುಕಲು ಬಿಡುವುದೇ ಮಾನವ ಧರ್ಮ. ಗೌರಿ ಲಂಕೇಶ್ ಅವರ ಹತ್ಯೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಗೌರಿ ಲಂಕೇಶ್ ಅವರ ಹತ್ಯೆಯು ಪ್ರಜಾಪ್ರಭುತ್ವದ ಹತ್ಯೆಯಾಗಿದೆ. ಹತ್ಯಾ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ನಮ್ಮೊಳಗೂ ಭಿನ್ನಾಭಿಪ್ರಾಯಗಳಿವೆ. ಜಗಳವಾಗುತ್ತವೆ. ಆದರೆ, ಕೊಲೆ ನಡೆಯುವುದಿಲ್ಲ. ಗೌರಿ ಲಂಕೇಶ್ ಅವರು ಧಾರ್ಮಿಕ ವ್ಯಕ್ತಿಯಾಗಿದ್ದರು. ಅವಮಾನಿತರು, ಅನ್ಯಾಯಕ್ಕೊಳಗಾದವರಿಗೆ ಧ್ವನಿಯಾಗಿದ್ದರು. ಗೌರಿಯೇ ನಿಜವಾದ ಧರ್ಮ ಎಂದು ಅಯವರ್ಧನ್ ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ಕೊಲೆ ಪರಿಹಾರವಲ್ಲ. ಕೊಲೆ ಮಡುವ ಮೂಲಕ ಅವರ ವಿಚಾರ, ಚಿಂತನೆಗಳನ್ನು ನಾಶ ಮಾಡಲು ಸಾಧ್ಯವಿಲ್ಲ. ಗೌರಿ ಲಂಕೇಶ್ ಹತ್ಯಾ ಆರೋಪಿಗಳ ಬಂಧನದ ಜೊತೆಗೆ ಹತ್ಯೆ ಯೋಜನೆ ರೂಪಿಸಿದ ಹಿಂದಿನ ಶಕ್ತಿಯನ್ನೂ ಗುರುತಿಸಿ ಕಠಿಣ ಶಿಕ್ಷೆಗೊಳಪಡಿಸಬೇಕಾಗಿದೆ ಎಂದರು.

ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ವಿಲಿಯಂ ಮಿನೇಜಸ್, ಸೈಂಟ್ ಆಗ್ನೆಸ್ ಕಾಲೇಜಿನ ರೆಕ್ಟರ್ ವಂ.ಡಯೊನಿಶಿಯಸ್ ವಾಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News