ಯುವಕನ ಕೊಲೆ ಪ್ರಕರಣ: ಆರೋಪಿಗಳಿಗೆ ಜಾಮೀನು

Update: 2017-09-14 16:45 GMT

ಮಂಗಳೂರು, ಸೆ. 14: ಮದುವೆ ನಿಶ್ಚಯವಾಗಿದ್ದ ಬೆಳ್ತಂಗಡಿಯ ಸುರೇಶ್ ನಾಯಕ್ (30) ಎಂಬವರನ್ನು ಕೊಲೆ ಮಾಡಿದ ಆರೋಪಿಗಳಿಗೆ ಮಂಗಳೂರಿನ ಮೂರನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಜಾಮೀನಿನಲ್ಲಿ ಬಿಡುಗಡೆ ಮಾಡಿದೆ.

ಮೊದಲ ಆರೋಪಿ ಆನಂದ ನಾಯಕ್, 4ನೆ ಆರೋಪಿ ಪ್ರಕಾಶ್, 6ನೆ ಆರೋಪಿ ನಾಗರಾಜ ಜಾಮೀನಿನಲ್ಲಿ ಬಿಡಗಡೆಗೊಂಡವರು.

ಉಳಿದ ಆರೋಪಿಗಳಾದ ಪ್ರವೀಣ್ ನಾಯಕ್, ವಿನಯ ಕುಮಾರ್ ಹಾಗೂ ಲೋಕೇಶ್‌ಗೆ ಈ ಹಿಂದೆಯೇ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದರು.

ಪ್ರಕರಣದ ಹಿನ್ನೆಲೆ: ಸುರೇಶ್ ನಾಯಕ್ಗೆ ವಿವಾಹ ನಿಶ್ಚಿತಾರ್ಥವಾಗಿದ್ದ ಹುಡುಗಿಯನ್ನೇ ಆರೋಪಿ ಆನಂದ ನಾಯಕ್ ಪ್ರೀತಿಸುತ್ತಿದ್ದ. ನಿಶ್ಚಿತಾರ್ಥದ ವಿಷಯ ತಿಳಿದ ಆನಂದ ಆಕೆಯನ್ನು ಮದುವೆಯಾಗದಂತೆ ಬೆದರಿಕೆಯೊಡ್ಡಿದ್ದ. ಇದನ್ನು ಸುರೇಶ್ ನಿರ್ಲಕ್ಷಿಸಿದ್ದ. ಅನಂತರ ಆರೋಪಿಗಳು ಪ್ರವೀಣ ನಾಯಕ್ ಅಂಗಡಿಯಲ್ಲಿ ಕುಳಿತು ಕೊಲೆ ಮಾಡುವ ಯೋಜನೆ ರೂಪಿಸಿದ್ದರು.

2017ರ ಏ.29ರಂದು ಆರೋಪಿಗಳು ಸುರೇಶ್ ನಾಯಕ್ರನ್ನು ಗಂಗಾ ಕಲ್ಯಾಣ ಯೋಜನೆಯ ಬಗ್ಗೆ ಮಾತನಾಡಲು ಇದೆ ಎಂದು ಕರೆಸಿಕೊಂಡಿದ್ದರು. ಬಳಿಕ ಆರೋಪಿಗಳು ಸುರೇಶ್ ನಾಯಕ್ರನ್ನು ಓಮ್ನಿ ಕಾರಿನಲ್ಲಿ ಅಪಹರಿಸಿ ಮುಂಡಾಜೆ ದಿಡುಪೆ ರಸ್ತೆಯಲ್ಲಿ ಕೈ ಕಾಲು ಬಿಗಿದು ಕೊಲೆ ಮಾಡಿ ಧರ್ಮಸ್ಥಳ ಗ್ರಾಮದ ಪಟ್ರಮೆ ರಸ್ತೆಯಲ್ಲಿ ಮೃತ ದೇಹಕ್ಕೆ ಗೋಣಿ ಚೀಲ ಸುತ್ತಿ ಪೆಟ್ರೋಲ್ ಹಾಕಿ ಗುರುತು ಸಿಗದಂತೆ ಬೆಂಕಿ ಇಟ್ಟು ಸುಟ್ಟು ಹಾಕಿದ್ದರು.

ಮೃತರ ವಶವಿದ್ದ ಸೊತ್ತುಗಳನ್ನು ಕೊಯ್ಯೂರು ಕಟ್ಟೆ ಎಂಬಲ್ಲಿ ಬೆಂಕಿ ಕೊಟ್ಟು ಸುಟ್ಟು ಹಾಕಿ ಸಾಕ್ಷಿ ನಾಶ ಮಾಡಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಬೆಳ್ತಂಗಡಿ ವೃತ್ತ ನಿರೀಕ್ಷರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದೀಗ ಮೂವರು ಆರೋಪಿಗಳಿಗೆ ನ್ಯಾಯಾಧೀಶರಾದ ಮುರಳೀಧರ ಪೈ ಅವರು ಜಾಮೀನು ಮಂಜೂರುಗೊಳಿಸಿ ತೀರ್ಪು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News