ಜಮೀಯ್ಯತುಲ್ ಫಲಾಹ್‌ನಿಂದ ವಿದ್ಯಾರ್ಥಿ ವೇತನ ವಿತರಣೆ

Update: 2017-09-15 17:37 GMT

ಮಂಗಳೂರು, ಸೆ.15: ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರ, ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಗೆ ಸಹಾಯಧನ, ಅರಬಿಕ್ ಮದ್ರಸಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮವು ಶುಕ್ರವಾರ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಮಂಗಳೂರು ನಗರ ಘಟಕದ ಅಧ್ಯಕ್ಷ ಸಾದುದ್ದೀನ್ ಎಂ. ಸಾಲಿ ಸಮುದಾಯದ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ವಿತರಿಸಲಾದ ಈ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆದು ಸಮಾಜಕ್ಕೆ ಮಾದರಿಯಾಗಬೇಕು. ಹಿಂದೆ ಮುಸ್ಲಿಂ ಹುಡುಗಿಯರು ಶಿಕ್ಷಣ ರಂಗದಲ್ಲಿ ತೀರಾ ಹಿಂದುಳಿದಿದ್ದರು. ಇಂದು ಬಹಳಷ್ಟು ಮುಂದೆ ಇದ್ದಾರೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಮುಸ್ಲಿಂ ವಿದ್ಯಾರ್ಥಿಗಳು ಸರಕಾರಿ ಉದ್ಯೋಗಕ್ಕೆ ಸೇರ್ಪಡೆಗೊಳ್ಳಬೇಕು. ಐಎಎಸ್, ಕೆಎಎಸ್, ಪೊಲೀಸ್ ಇಲಾಖೆ, ಬ್ಯಾಂಕಿಂಗ್ ಇತ್ಯಾದಿ ಕ್ಷೇತ್ರದತ್ತ ಆಕರ್ಷಿತರಾಗಬೇಕು. ಅದಕ್ಕೆ ಪೂರಕವಾಗಿರುವ ಮಾಹಿತಿ ಕೇಂದ್ರಗಳ ನೆರವು ಪಡೆದುಕೊಳ್ಳಬೇಕು ಎಂದು ಸಾದುದ್ದೀನ್ ಎಂ. ಸಾಲಿ ನುಡಿದರು.

ಜಮೀಯ್ಯತುಲ್ ಫಲಾಹ್‌ನ ಪದಾಧಿಕಾರಿಗಳಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಎಂ.ಕೆ.ಮಂಜನಾಡಿ, ಫರ್ವೇಝ್ ಅಲಿ, ಬೀರಾ ಮೊಯ್ದಿನ್ ಫಲಾನುಭವಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಪದಾಧಿಕಾರಿಗಳಾದ ಇಮ್ತಿಯಾಝ್ ಖತೀಬ್ ಅಹ್ಮದ್, ಅಬ್ದುಲ್ ವಹ್ಹಾಬ್, ಹಬೀಬ್, ನ್ಯಾಯವಾದಿ ಅಬ್ದುಲ್ ಅಝೀಝ್, ಮಝ್ಹರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿ.ಎಸ್. ಮುಹಮ್ಮದ್ ಬಶೀರ್, ಪಿ.ಬಿ.ಎ.ರಝಾಕ್, ಹಸನ್ ಪಾಲ್ಗೊಂಡಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್ ಅಹ್ಮದ್ ಸ್ವಾಗತಿಸಿದರು. ಸದಸ್ಯ ಹನೀಫ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

38 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಳ್ಳಾಲದ ಉರ್ದು ಶಾಲೆಯೊಂದರ 50 ಅರ್ಹ ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಸಲು ಸಹಾಯಧನ, 5 ಮಂದಿಗೆ ಹೊಲಿಗೆ ಯಂತ್ರ, ಸುಳ್ಯ ಸಮೀಪದ ಅರಬಿಕ್ ಮದ್ರಸದ ಅಭಿವೃದ್ಧಿಗೆ ಸಹಾಯಧನ ವಿತರಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News