ಮಣಿಪಾಲ ಸಾಹಿತ್ಯ ಉತ್ಸವ ಉದ್ಘಾಟಿಸಿ ಡಾ.ಕಂಬಾರ
ಮಣಿಪಾಲ, ಸೆ.15: ಭಕ್ತಿ ಚಳವಳಿ ಹಾಗೂ ಬ್ರಿಟಿಷರ ಆಳ್ವಿಕೆಯ ವೇಳೆ ಆದ ಶಿಕ್ಷಣದ ಸಾರ್ವತ್ರಿಕರಣ ದೇಶದ ಎರಡು ಮಹತ್ವದ ಬೆಳವಣಿಗೆಗಳು ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಜಾನಪದ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲ ವಿವಿ ಹಾಗೂ ಮಣಿಪಾಲ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆಯ ವತಿಯಿಂದ ಮಣಿಪಾಲ ಎಂಸಿಪಿಎಚ್‌ನ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಮೊತ್ತ ಮೊದಲ ಮಣಿಪಾಲ ವಾರ್ಷಿಕ ಸಾಹಿತ್ಯ ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಕ್ತಿ ಚಳವಳಿಯಿಂದಾಗಿ ಜನಸಾಮಾನ್ಯರಿಗೂ ದೇವರೊಂದಿಗೆ ನೇರ ಸಂಪರ್ಕ ಸಾಧಿಸಲು ಸಾಧ್ಯವಾಯಿತು. ಜನರು ತಮ್ಮ ದೇಸಿ ಭಾಷೆಯಲ್ಲಿ ದೇವರ ಜೊತೆ ನೇರವಾಗಿ ಮಾತನಾಡುವ ಅವಕಾಶವನ್ನು ಭಕ್ತಿ ಚಳವಳಿ ದೊರಕಿಸಿಕೊಟ್ಟಿತು. ಇದರೊಂದಿಗೆ ಜನಪದ ಸಾಹಿತ್ಯವೂ ಅಪಾರ ಚೈತನ್ಯವನ್ನು ಪಡೆದುಕೊಂಡಿತು ಎಂದು ಡಾ.ಕಂಬಾರ ನುಡಿದರು.
ಬ್ರಿಟಿಷರು ತಮ್ಮ ಆಳ್ವಿಕೆಯ ಕಾಲದಲ್ಲಿ ಕೆಲವರಿಗಷ್ಟೇ ಲಭ್ಯವಿದ್ದ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಿದರು. ಜನಸಾಮಾನ್ಯರಿಗೂ ಶಿಕ್ಷಣದ ಅವಕಾಶ ದೊರೆತು ‘ಅಕ್ಷರ ಎದೆಗೆ ಬಿದ್ದ ಮೇಲೆ’ ಅದೊಂದು ದೇಶದ ದೊಡ್ಡ ಕ್ರಾಂತಿ ಎನಿಸಿ ಕೊಂಡಿತು. ಆದರೆ ಅದು ಅಷ್ಟೇ ಅಪಾಯಕಾರಿಯಾಗಿ ಬೆಳೆಯಿತು. ಕಾರಣ ಇಂಗ್ಲೀಷ್ ಶಿಕ್ಷಣಕ್ಕೆ ದೊರೆತ ಪ್ರಾಧಾನ್ಯತೆ ಹಾಗೂ ಅದು ಅಧಿಕೃತ ಭಾಷೆಯಾಗಿ ಬೆಳೆದುದು ಎಂದವರು ಹೇಳಿದರು.
ಇಂಗ್ಲೀಷ್ ಬಂದ ನಂತರ ನಮ್ಮ ಅದುವರೆಗಿನ ಜ್ಞಾನವನ್ನು ಸುಳ್ಳು ಎಂದು ಹೇಳಲಾಯಿತು. ಅದರೊಂದಿಗೆ ಪ್ರಶ್ನಿಸುವ ಅಧಿಕಾರವನ್ನು ಕಳೆದುಕೊಂಡು ಬಿಟ್ಟೆವು. ಭೂತಕಾಲವನ್ನು ನಮ್ಮಿಂದ ಅಗಲಿಸಿದರು. ಭವಿಷ್ಯವನ್ನು ದೂರವಿರಿಸಿ ದರು. ಈ ಮೂಲಕ ನಾವು ನಮ್ಮ ಬೇರನ್ನು ಮರೆತುಬಿಟ್ಟೆು ಎಂದು ಡಾ.ಕಂಬಾರ ವಿವರಿಸಿದರು.
ಇಂಗ್ಲೀಷ್ ಶಿಕ್ಷಣ ನಗರ ಮತ್ತು ಹಳ್ಳಿಗಳನ್ನು ಬೇರ್ಪಡಿಸಿತು. ನಗರಕ್ಕೆ ಕೇವಲ ಇತಿಹಾಸವಿದ್ದರೆ, ಹಳ್ಳಿಗೆ ನೆನಪುಗಳಿರುತ್ತವೆ. ಇಂಗ್ಲೀಷ್ ಸಾಹಿತ್ಯ ವ್ಯಕ್ತಿ ಕೇಂದ್ರಿತವಾಯಿತು. ಗದ್ಯ ಬಂದು ಅಗಲಕ್ಕೆ ವಿಸ್ತರಿಸಿತು. ನಮ್ಮ ಕಾವ್ಯದ ಎತ್ತರ ಹಾಗೂ ಆಳ ಅದಕ್ಕಿರಲಿಲ್ಲ. ಹೀಗಾಗಿ ನಾವಿಂದು ಈ ಆಳ ಮತ್ತು ಎತ್ತರವನ್ನು ಮರೆತುಬಿಟ್ಟಿದ್ದೇವೆ ಎಂದ ಚಂದ್ರಶೇಖರ ಕಂಬಾರ ಕೊನೆಯಲ್ಲಿ ತಮ್ಮ ‘ಮಾವೋತ್ಸುಂಗೆ’ ಕವನವನ್ನು ಹಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಸಾಹಿತಿ, ಲೇಖಕಿ ವೈದೇಹಿ ಮಾತನಾಡಿ, ಇತ್ತೀಚಿಗೆ ನಡೆದ ಧೀಮಂತ ಪತ್ರಕರ್ತೆ ಹಾಗೂ ಲೇಖಕಿ ಗೌರಿ ಲಂಕೇಶ ಅವರ ಹತ್ಯೆಯನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಿದರು. ವಿಚಾರಗಳ, ವಿಚಾರವಾದಕ್ಕೆ ಎದುರಾಗಿರುವ ಇಂತ ಆತಂಕದ ಸ್ಥಿತಿಯಲ್ಲಿ ಹೃದಯಭಾರ ದಿಂದ ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದರು.
ಇಂದು ನಮಗೆ ವಾಕ್ ಸ್ವಾತಂತ್ರವಿಲ್ಲ. ಮೌನಕ್ಕೂ ಸ್ವಾತಂತ್ರವಿಲ್ಲದಂತಾಗಿದೆ. ಈ ರೀತಿ ನಾವಿಂದು ವಿಚಿತ್ರ ಪರಿಸ್ಥಿತಿಯಲ್ಲಿದ್ದೇವೆ. ಇಂದು ಮೌನಕ್ಕೂ ಬೆಲೆಯಿಲ್ಲ, ಮಾತಿಗೂ ಬೆಲೆ ಇಲ್ಲದಂತಾಗಿದೆ. ಇಂಥ ಸ್ಥಿತಿಯನ್ನು ಖಂಡಿತ ನಾವು ಬಯಸಿರಲಿಲ್ಲ. ನಾವಿಂದು ಹಾಸ್ಯವನ್ನು ಮರೆತಿದ್ದೇವೆ. ಹಾಸ್ಯವಿಲ್ಲದೇ ಬದುಕುವುದು ಹೇಗೆ ಎಂದು ಪ್ರಶ್ನಿಸಿದ ವೈದೇಹಿ, ಶಿಕ್ಷಣ ಏಕಮುಖವಾಗುತ್ತಿದೆ. ಮನುಷ್ಯ ಸೆಲೆಯನ್ನು ಒಣಗಿಸುತ್ತಿದೆ ಎಂದು ದು:ಖಿಸಿದರು.
ಮಣಿಪಾಲ ವಿವಿಯ ಕುಲಪತಿ ಡಾ.ಎಚ್.ವಿನೋದ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದೊಂದು ವಾರ್ಷಿಕ ಕಾರ್ಯಕ್ರಮವಾಗಿರುತ್ತದೆ ಎಂದು ಘೋಷಿಸಿದರು.
ಮಣಿಪಾಲ ಯುನಿವರ್ಸಿಟಿ ಪ್ರೆಸ್‌ನ ಮುಖ್ಯ ಸಂಪಾದಕಿ ಹಾಗೂ ಯುರೋಪಿಯನ್ ಸ್ಟಡೀಸ್‌ನ ನಿರ್ದೇಶಕಿ ಡಾ.ನೀತಾ ಇನಾಂದಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮಣಿಪಾಲ-ಮಲೇಕಾ ಕಾಲೇಜಿನ ಡಾ. ಅನಿತಾಗುರು ಕಾರ್ಯಕ್ರಮ ನಿರೂಪಿಸಿದರು.
ಸಾಹಿತ್ಯ ಸಮ್ಮೇಳನದ ಜೊತೆ ಜೊತೆಗೆ ಭಾಷಾಂತರದ ಕುರಿತು ಕಾರ್ಯಾಗಾರವನ್ನು, ಸಿನಿಮಾ ಉತ್ಸವವನ್ನು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಪುಸ್ತಕ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಹಾಗೂ ಛಾಯಾಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.
ಐದು ಅನುವಾದಿತ ಕೃತಿಗಳ ಬಿಡುಗಡೆ
ಮಣಿಪಾಲ ಸಾಹಿತ್ಯ ಉತ್ಸವದಲ್ಲಿ ಮಣಿಪಾಲ ಯುನಿವರ್ಸಿಟಿ ಪ್ರೆಸ್ ಮೂಲಕ ಐದು ಭಾಷಾಂತರಿತ ಸಾಹಿತ್ಯ ಕೃತಿಗಳು ಬಿಡುಗಡೆಗೊಂಡವು.
ಉಡುಪಿಯ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರು ಡಾ.ಚಂದ್ರಶೇಖರ ಕಂಬಾರ ಅವರ ‘ಮಹಾಮಾಯಿ’ ಕೃತಿಯನ್ನು ತುಳುವಿಗೆ ಅನುವಾದಿಸಿದರೆ, ಪತ್ರಕರ್ತೆ ದೀಪಾ ಗಣೇಶ್ ಅವರು ವೈದೇಹಿ ಬರೆದ ಸರಸ್ವತಿಬಾಯಿ ರಾಜವಾಡೆ ಅವರ ಆತ್ಮಕತೆಯನ್ನು ಇಂಗ್ಲೀಷ್‌ಗೆ ಅನುವಾದಿಸಿದ್ದು, ಇವುಗಳನ್ನು ಡಾ.ಕಂಬಾರ ಬಿಡುಗಡೆಗೊಳಿಸಿದರು.
ಅಲ್ಲದೇ ಗೋಪಾಲಕೃಷ್ಣ ಪೈ ಅವರ ಬೃಹತ್ ಕಾದಂಬರಿ ‘ಸ್ವಪ್ನ ಸಾರಸ್ವತ’ವನ್ನು ಸುಮತಿ ಶೆಣೈ, ಎಂ.ಆರ್.ರಕ್ಷಿತ್ ಹಾಗೂ ಸವಿತಾ ಶಾಸ್ತ್ರಿ ಇಂಗ್ಲೀಷ್‌ಗೆ ಅನುವಾದಿಸಿದ್ದು, ನಾಡಿಸೋಜ ಅವರ ಕನ್ನಡ ಕಾದಂಬರಿ ‘ಬೊಮ್ಮನ್’ನ್ನು ಎಸ್.ಎಂ.ಪೇಜತ್ತಾಯ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ. ಇದರೊಂದಿಗೆ ಕೊಕ್ಕಡ ಅನಂತ ಪದ್ಮನಾಭ ಶಾಸ್ತ್ರಿ ಅವರು ಸಂಸ್ಕೃತಕ್ಕೆ ಅನುವಾದಿಸಿರುವ ಡಾ.ಕೋಟ ಶಿವರಾಮ ಕಾರಂತರ ‘ಚೋಮನ ದುಡಿ’ ಕೃತಿಯನ್ನು ಸಹ ಇಂದು ಬಿಡುಗಡೆಗೊಳಿಸಲಾಯಿತು.