ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಅಭಿಯಾನ:ಜಿಲ್ಲಾಧಿಕಾರಿ

Update: 2017-09-15 17:13 GMT

ಉಡುಪಿ, ಸೆ.15: ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ನಿರ್ಮಿತಿ ಕೇಂದ್ರ, ಮಲ್ಪೆ ಬೀಚ್ ನಿರ್ವಹಣಾ ಅಭಿವೃದ್ದಿ ಸಮಿತಿ ಹಾಗೂ ಕರಾವಳಿ ಪ್ರವಾಸೋದ್ಯಮ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಸುಸ್ಥಿರ ಪ್ರವಾಸೋದ್ಯಮ-ಅಭಿವೃದ್ಧಿಯ ಒಂದು ಸಾಧನ’ ಎಂಬ ಸಂದೇಶದೊಂದಿಗೆ, ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಸೆ.27ರಂದು ಜಿಲ್ಲೆಯಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆ.20ರಿಂದ 23ರವರೆಗೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಸ್ವಚ್ಛ ಅಭಿಯಾನವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲೆಯ, ಪ್ರಮುಖ ಪ್ರವಾಸಿ ತಾಣಗಳಾದ ಕಾರ್ಕಳ ಗೊಮ್ಮಟೇಶ್ವರ ಬೆಟ್ಟದ ಆವರಣ, ಕಾರ್ಕಳ ಚತುರ್ಮುಖ ಬಸದಿ, ಬಾರ್ಕೂರು ಕತ್ತಲೆ ಬಸದಿ, ಕಾರ್ಕಳದ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್, ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್, ಮಣಿಪಾಲದ ಮಣ್ಣಪಳ್ಳ ಕೆರೆಯ ಸುತ್ತಮುತ್ತ, ಹೆಬ್ರಿಯು ಜೋಮ್ಲು ತೀರ್ಥ, ಶಿರೂರಿನ ಒತ್ತಿನೆಣೆ ಹಾಗೂ ಕುಂದಾಪುರದ ಕೋಡಿಬೀಚ್‌ನಲ್ಲಿ ಸಂಬಂಧಪಟ್ಟ ಇಲಾಖೆಗಳು, ವಿವಿಧ ಸಂಘ ಸಂಸ್ಥೆಗಳು, ಯುವಕ ಮಂಡಲಗಳು ಹಾಗೂ ಪಂಚಾಯತ್‌ಗಳ ಸಹಕಾರದೊಂದಿಗೆ ಸ್ವಚ್ಛತಾ ಅಭಿಯಾನ ಕೈಗೊಳ್ಳುವ ಮೂಲಕ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಗುವುದು ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿನಾಚರಣೆಗೆ ಸೆ.26ರ ಸಂಜೆ ಉಡುಪಿ ತಾಲೂಕಿನ ಬಾರಕೂರಿನ ಕತ್ತಲೆ ಬಸದಿಯಲ್ಲಿ ಹಣತೆಯಲ್ಲಿ ದೀಪ ಬೆಳಗುವ ಮೂಲಕ ಚಾಲನೆ ನೀಡಲಾಗುವುದು ಎಂದು ತಿಳಿಸಿದ ಪ್ರಿಯಾಂಕ, ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಛಾಯಾಚಿತ್ರ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದರು.

ಸೆ.27ರಂದು ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದು, ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳು ಹಾಗೂ ವಿಶಿಷ್ಟ ಆಹಾರ ಪದ್ದತಿಗಳ ತುಣುಕು ದೃಶ್ಯ ಬಿಡುಗಡೆ ಮಾಡುವರು. ಪ್ರವಾಸೋದ್ಯಮ ಇಲಾಖೆ ನವೀಕರಿಸಿದ ವೆಬ್‌ಸೈಟ್ ಅನಾವರಣ,ಉಡುಪಿ ಪ್ರವಾಸೋದ್ಯಮ ಆ್ಯಪ್‌ಬಿಡುಗಡೆ, ಪ್ರವಾಸೋದ್ಯಮ ಇಲಾಖೆಯ ರೇಡಿಯೋ ಜಿಂಗಲ್ಸ್‌ಗಳ ಪ್ರಸಾರ ಹಾಗೂ ಕಿರುಹೊತ್ತಿಗೆಗಳು ಬಿುಗಡೆಗೊಳ್ಳಲಿವೆ ಎಂದು ತಿಳಿಸಿದರು.

ಅದೇ ದಿನ ಅಪರಾಹ್ನ ಮೂಡುಕುದ್ರು ಗ್ರಾಮದಲ್ಲಿ ವಿಲೇಜ್ ಲೈಪ್ ಎಕ್ಸ್ ಪೀರಿಯನ್ಸ್ ಟೂರಿಸಂನ್ನು ಉತ್ತೇಜಿಸುವ ಸಲುವಾಗಿ ಅತಿಥಿಗಳನ್ನು ಆಹ್ವಾನಿಸಿ, ಮೂಡುಕುದ್ರು ಗ್ರಾಮಕ್ಕೆ ಬೋಟುಗಳ ಮೂಲಕ ತೆರಳಿ ಸ್ಥಳೀಯ ಸ್ವ ಸಹಾಯ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಆಹಾರ ವೈವಿಧ್ಯಗಳ ಮಾರಾಟ, ಮಹಿಳಾ ತಂಡಗಳಿಂದ ನೃತ್ಯ, ಡೋಲು ಕುಣಿತ, ಕ್ಯಾಂಪ್ ಪೈರ್ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲೆಯ ವಿವಿಧ ಪ್ರವಾಸೋದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News