ಆಹಾರ ಪದಾರ್ಥ ಪೋಲಾಗುವುದರ ವಿರುದ್ಧ ಜಾಗೃತಿಗಾಗಿ ದೇಶಾದ್ಯಂತ ಪಾದಯಾತ್ರೆ

Update: 2017-09-16 07:04 GMT

ಉಡುಪಿ, ಸೆ.16: ಆಹಾರ ವಸ್ತುಗಳು ಪೋಲಾಗದಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಮಿಳುನಾಡಿನ ಕೊಯಂಬತ್ತೂರಿನಿಂದ ದೇಶಾದ್ಯಂತ ಪಾದಯಾತ್ರೆ ಹೊರಟಿರುವ ಇಂಜಿನಿಯರಿಂಗ್ ಪದವೀಧರ ನಿಗ್ ಬಿನಿಷ್ (24) ಇಂದು ಉಡುಪಿಗೆ ಆಗಮಿಸಿದ್ದಾರೆ.

ತಮಿಳುನಾಡು ರಾಜ್ಯದ ಕನ್ಯಾಕುಮಾರಿಯ ನಿಗ್ ಬಿನಿಷ್ ಅವರು ಬಿ.ಟೆಕ್ ಇಂಜಿನಿಯರಿಂಗ್ ಪದವೀಧರ. ಇವರಿಗೆ ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿ ಇದ್ದಾರೆ. ಇವರು ಮಲಯಾಳಂ, ಇಂಗ್ಲಿಷ್, ತಮಿಳು ಭಾಷೆ ಮಾತನಾಡುತ್ತಾರೆ.

‘ಭಾರತದಲ್ಲಿ ಆಹಾರ ರಕ್ಷಣೆ’ ಎಂಬ ಧ್ಯೇಯವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತ ಕೊಯಂಬತ್ತೂರಿನಿಂದ ಆ.24ರಂದು ಪಾದಯಾತ್ರೆ ಹೊರಟಿರುವ ನಿಗ್ ಬಿನಿಷ್, ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪಾಂಡಿಚೇರಿಯ ಮೂಲಕ 24 ದಿನಗಳಲ್ಲಿ ಕರ್ನಾಟಕ ರಾಜ್ಯ ಪ್ರವೇಶಿಸಿದ್ದಾರೆ. ಇವರು ದಾರಿಯುದ್ದ್ದಕ್ಕೂ ಸಿಗುವ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಆಹಾರ ವಸ್ತುಗಳು ಪೋಲಾಗುವ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ನಿಗ್ ಬಿನಿಷ್ ದಿನವೊಂದಕ್ಕೆ 30 ಕಿ.ಮೀ. ದೂರ ನಡೆಯುತ್ತಾರೆ. ರಾತ್ರಿ ದಾರಿಯಲ್ಲಿ ಸಿಗುವ ದೇವಾಲಯ, ಚರ್ಚ್, ಮಸೀದಿಗಳಲ್ಲಿ ಅನುಮತಿ ಪಡೆದು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ದೇಶದ 29 ರಾಜ್ಯಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುವ ಉದ್ದೇಶವನ್ನು ನಿಗ್ ಬಿನಿಷ್ ಹೊಂದಿದ್ದಾರೆ. ಸಾರ್ವಜನಿಕರು ಯಾತ್ರೆಯ ದಿನಚರಿ ಖರ್ಚಿಗೆ ಹಣ ನೀಡಿದರೆ ಸ್ವಿಕರಿಸುವುದಿಲ್ಲ. ಫಲಾಹಾರ, ಪಾನೀಯ ನೀಡಿದರೆ ಮಾತ್ರ ಸ್ವೀಕರಿಸುತ್ತಾರೆ.

ಉಡುಪಿಯಲ್ಲಿ ಸ್ವಾಗತ: ಪದವೀಧರ ಯುವಕನ ಸಾಮಾಜಿಕ ಕಳಕಳಿಯ ಪಾದಯಾತ್ರೆಯ ಉದ್ದೇಶ ತಿಳಿದ ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ ಮತ್ತು ಶಿರೂರು ತಾರಾನಾಥ್ ಮೇಸ್ತ ಅವರು ಉಡುಪಿಗೆ ಆಗಮಿಸಿದ ನಿಗ್ ಬಿನಿಷ್‌ರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತಿಸಿದರು.

ಅವರೊಂದಿಗೆ ಕುಶಲೋಪರಿ ನಡೆಸಿ ಉಪಹಾರದ ವ್ಯವಸ್ಥೆ ಮಾಡಿಸಿ ಮುಂದಿನ ಪ್ರಯಾಣಕ್ಕೆ ಬೀಳ್ಕೊಟ್ಟಿದ್ದಾರೆ.

‘ಸಾರ್ವಜನಿಕರು ನಿಗ್ ಬಿನಿಷ್ ಅವರ ಉದ್ದೇಶವನ್ನು ಅರಿತುಕೊಂಡು, ಶಾಲಾ ಕಾಲೇಜು ಉಸ್ತುವಾರಿಗಳು ಇವರ ಉಪನ್ಯಾಸಕ್ಕೆ ಅನುವು ಮಾಡಿಕೊಡಬೇಕು. ಆಗ ಮಾತ್ರ ಇವರ ಜಾಗೃತಿ ನಡಿಗೆ ಫಲಶ್ರುತಿ ಕಾಣಲು ಸಾಧ್ಯ’ ಎಂದು ವಿಶು ಶೆಟ್ಟಿ ಅಂಬಲಪಾಡಿ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News