ದ.ಕ.: ವಿಶ್ವಕರ್ಮ ಜಯಂತಿ ಆಚರಣೆ

Update: 2017-09-16 10:22 GMT

ಮಂಗಳೂರು, ಸೆ. 16: ನಗರದ ಪುರಭವನದಲ್ಲಿ ದ.ಕ. ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಸಹಯೋಗದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ವಿಶ್ವಕರ್ಮ ಸಮುದಾಯವು ಕುಶಲತೆ, ಮೇಧಾವಿಶಕ್ತಿಯ ಮೂಲಕ ಸಮಾಜದ ಇತರ ವರ್ಗದ ಪ್ರೀತಿಗೆ ಪಾತ್ರವಾಗಿದೆ. ಆರ್ಥಿಕ, ಸಾಮಾಜಿಕವಾಗಿ ಬೆಳೆದಿರುವ ಈ ಸಮಾಜದ ಭಾವನೆಗಳಿಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ವಿಶ್ವಕರ್ಮ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ ಎಂದರು.

ಆರ್ಥಿಕ, ಸಾಮಾಜಿಕವಾಗಿ ಎಲ್ಲರೂ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಸರಕಾರವು ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ವಿಶ್ವಕರ್ಮ ಸಮುದಾಯಕ್ಕೂ ವಿವಿಧ ಸೌಲಭ್ಯವನ್ನು ನೀಡುವ ಕಾರ್ಯವನ್ನು ಸರಕಾರ ಮಾಡಿದೆ ಎಂದವರು ಹೇಳಿದರು.

ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಮಾತನಾಡಿ, ವಿಶ್ವಕರ್ಮ ಸಮುದಾಯದ ಸಮಗ್ರ ಏಳಿಗೆಯ ದೃಷ್ಟಿಯಿಂದ ರಾಜ್ಯ ಸರಕಾರವು ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ವಿವಿಧ ಅನುದಾನಗಳನ್ನು ನೀಡುವ ಕಾರ್ಯ ಮಾಡುತ್ತಿದೆ. ಜಿಲ್ಲೆಯಲ್ಲಿ ವಿಶ್ವಕರ್ಮ ಭವನದ ನಿರ್ಮಾಣಕ್ಕೆ ಅನುದಾನಕ್ಕಾಗಿ ನಿಯೋಗದೊಂದಿಗೆ ಮುಖ್ಯಮಂತಿಯನ್ನು ಭೇಟಿಯಾಗಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ಅವರು ವಿಶ್ವಕರ್ಮ ಜಯಂತಿಯ ಸಂದೇಶ ನೀಡಿದರು.

ವೇದಿಕೆಯಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಆರ್.ಪಿ.ನಾಯಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ವಿಶ್ವಕರ್ಮ ನಿಗಮದ ಅಧಿಕಾರೇತರ ಸದಸ್ಯ ವಿಕ್ರಮ್ ಬಿ.ಆಚಾರ್ಯ, ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಪ್ರಬಂಧಕ ಕಡೇಶ್ವಾಲ್ಯ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News