ಅನಂತಕೃಷ್ಣರಿಗೆ ಕೆ.ಕೆ.ಪೈ ರಾ.ಬ್ಯಾಂಕಿಂಗ್ ಪ್ರಶಸ್ತಿ

Update: 2017-09-16 14:09 GMT

ಉಡುಪಿ, ಸೆ.16: ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಅನಂತಕೃಷ್ಣ ಅವರು 2017-18ನೇ ಸಾಲಿನ ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿಗೆ ಆಯ್ಕೆಯಾ ಗಿದ್ದಾರೆ ಎಂದು ಕೆ.ಕೆ.ಪೈ ಟ್ರಸ್ಟಿನ ಕಾರ್ಯದರ್ಶಿ ಡಾ.ಕೆ.ಕೆ.ಅಮ್ಮಣಾಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಆಯ್ಕೆ ಸಮಿತಿಯು ಅನಂತಕೃಷ್ಣರ ಹೆಸರನ್ನು ಸರ್ವಾನುಮತದಿಂದ ಶಿಫಾರಸ್ಸು ಮಾಡಿದ್ದು, ಇತ್ತೀಚೆಗೆ ನಡೆದ ಕೆ.ಕೆ.ಪೈ ಟ್ರಸ್ಟ್ ಸಭೆಯಲ್ಲಿ ಇದನ್ನು ಅಂಗೀಕರಿಸಿ ನಾಡಿನ ಖ್ಯಾತನಾಮ ಬ್ಯಾಂಕರ್ ಆಗಿರುವ ಅನಂತಕೃಷ್ಣರಿಗೆ 2017-18ನೇ ಸಾಲಿನ ಪ್ರಶಸ್ತಿ ನೀಡಲು ನಿರ್ಧರಿಸಿತು ಎಂದು ಅವರು ವಿವರಿಸಿದ್ದಾರೆ.

ಡಾ.ಎಚ್ ಎಸ್ ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಟ್ರಸ್ಟಿಗಳಾದ ಅಶೋಕ ಪೈ, ಕೆ.ಎಂ.ಉಡುಪ, ಡಾ.ಕೆ.ಕೆ.ಅಮ್ಮಣ್ಣಾಯ ಮತ್ತು ಪ್ರೊ.ಎಚ್.ಕೃಷ್ಣ ಟ್ ಭಾಗವಹಿಸಿದ್ದರು.

ದ.ಕ.ಜಿಲ್ಲೆಯ ಬಂಟ್ವಾಳದವರಾದ ಅನಂತಕೃಷ್ಣ, ಎಸ್.ವಿ.ಎಸ್ ಹೈಸ್ಕೂಲು ಬಂಟ್ವಾಳ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿತು ಮೈಸೂರು ವಿವಿಯಿಂದ ಗಣಿತ ಶಾಸ್ತ್ರದಲ್ಲಿ ಎಂ.ಎಸ್‌ಸಿ ಪದವಿ ಪಡೆದರು. ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಮೊಡಂಕಾಪು ದೀಪಿಕಾ ಹೈಸ್ಕೂಲು ಮತ್ತು ಮಣಿಪಾಲದ ಎಂಐಟಿಯಲ್ಲಿ ಶಿಕ್ಷಕರಾಗಿ ದುಡಿದರು.

ಅನಂತಕೃಷ್ಣ ಬ್ಯಾಂಕಿನ ಪ್ರಗತಿಗೆ ಅದ್ಭುತ ಕೊಡುಗೆ ನೀಡಿದ್ದಾರೆ. ನಾಡಿನ ಈ ಭಾಗದಲ್ಲಿ ಅತಿ ಹೆಚ್ಚು ಅವಧಿಗೆ ಬ್ಯಾಂಕೊಂದರ ಮುಖ್ಯಸ್ಥರಾಗಿ ದುಡಿದ ಕೆ.ಎಸ್.ಎನ್.ಅಡಿಗ (7ವರ್ಷ) ಮತ್ತು ಕೆ.ಕೆ.ಪೈ (8) ಅವರಿಗಿಂತಲೂ ಹೆಚ್ಚು ಕಾಲ ಕರ್ನಾಟಕ ಬ್ಯಾಂಕಿನ ಮುಖ್ಯಸ್ಥರಾಗಿ ದುಡಿದು ಇತಿಹಾಸ ನಿರ್ಮಿಸಿದ ಖ್ಯಾತಿ ಅನಂತಕೃಷ್ಣರದು.

ಅವರ ಅಧಿಕಾರಾವಧಿಯಲ್ಲಿ ಬ್ಯಾಂಕಿನ ವ್ಯವಹಾರ 7,500 ಕೋಟಿ ರೂ. ನಿಂದ 30,000 ಕೋಟಿ ರೂ., ಶಾಖೆಗಳ ಸಂಖ್ಯೆ 349ರಿಂದ 449 ಕ್ಕೂ, ನಿವ್ವಳ ಲಾಭ 40 ಕೋಟಿ ರೂ.ನಿಂದ 247 ಕೋಟಿಗೂ ಏರಿಕೆ ಕಂಡಿತ್ತು. 2002ರಲ್ಲಿ ಚಾರಿತ್ರಿಕ ಬೋನಸ್ ಶೇರುಗಳನ್ನು ವಿತರಿಸಿದ ಖ್ಯಾತಿ ಇವರದು. ಇವರ ಅವಧಿಯಲ್ಲಿ ಬ್ಯಾಂಕಿನಲ್ಲಿ ಕೋರ್ ಬ್ಯಾಂಕಿಂಗನ್ನು ಅನುಷ್ಠಾನಗೊಳಿಸಿದ ಪ್ರಥಮ ಬ್ಯಾಂಕ್ ಎಂಬ ಖ್ಯಾತಿ ಕರ್ಣಾಟಕ ಬ್ಯಾಂಕ್‌ಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News