ಟ್ಯಾಲೆಂಟ್‌ನಿಂದ ‘ಇಂಜಿನೆರ’ ಮೊಬೈಲ್ ಆ್ಯಪ್ ಅನಾವರಣ

Update: 2017-09-16 15:45 GMT

ಮಂಗಳೂರು, ಸೆ. 16: ಎಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಒಂಭತ್ತು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಿದ್ಧಪಡಿಸಲಾದ ನೋಟ್ಸ್‌ಗಳ ಉಚಿತ ಮೊಬೈಲ್ ಆ್ಯಪ್ ‘ಇಂಜಿನೆರ’ ಶನಿವಾರ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.

ಮೂಡುಬಿದಿರೆಯ ನಿವಾಸಿ ಪ್ರಸ್ತುತ ನಿಟ್ಟೆಯ ಮೆಕಾನಿಕಲ್ ಎಂಜಿನಿಯರಿಂಗ್‌ನ 5ನೆ ಸೆಮಿಸ್ಟರ್‌ನ ವಿದ್ಯಾರ್ಥಿ ರಾಹುಲ್ ಪೈ ನೇತೃತ್ವದಲ್ಲಿ 9 ಮಂದಿ ವಿದ್ಯಾರ್ಥಿಗಳು ಈ ‘ಇಂಜಿನೆರ’ ಮೊಬೈಲ್ ಆ್ಯಪ್ ಅನ್ನು ಸಿದ್ಧಪಡಿಸಿದ್ದಾರೆ.

ನೂತನ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು, ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮೊಬೈಲ್ ಆ್ಯಪ್ ಸಿದ್ಧಪಡಿಸಿರುವ ರಾಹುಲ್ ಪೈ ಸಹಿತ 9 ಮಂದಿ ವಿದ್ಯಾರ್ಥಿಗಳಲ್ಲಿ ನಾಲ್ಕು ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲೇ ಶಿಕ್ಷಣ ಪಡೆದವರು. ವಿದ್ಯಾರ್ಥಿಗಳ ಇಂತಹ ಸಾಧನೆಯನ್ನು ಬಿಡುಗಡೆಗೊಳಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಆವಿಷ್ಕಾರಗಳನ್ನು ನಡೆಸುವ ಮೂಲಕ ಇವರ ಸೇವೆಯು ದೇಶಕ್ಕೆ ಲಭ್ಯವಾಗಲಿ ಎಂದು ಹಾರೈಸಿದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಅವರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಮೂಡುಬಿದಿರೆಯವರೇ ಆಗಿರುವ ರವೂಫ್ ಪುತ್ತಿಗೆ ಅವರ ಕುಟುಂಬ ನನಗೆ ಹತ್ತಿರವಾಗಿದೆ. ರವೂಫ್ ಪುತ್ತಿಗೆ ಅವರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ್ನು ಸ್ಥಾಪಿಸಿ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡಿರುವುದನ್ನು ಗಮನಿಸಿದ್ದೇನೆ. ವಿದ್ಯೆಗೆ ಹೆಚ್ಚಿನ ಒತ್ತು ನೀಡಿರುವ ಅವರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಜಾಗೃತಿ ಮೊದಲಾದ ಕಾರ್ಯಕ್ರಮಗಳನ್ನು ನೀಡುತ್ತಿರುವುದನ್ನು ಗಮನಿಸಿದ್ದೇನೆ. ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವು ದೇವರು ಮೆಚ್ಚುವ ಕೆಲಸವಾಗಿದೆ ಎಂದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಯುನಿವರ್ಸಿಟಿಯ ರಿಜಿಸ್ಟ್ರಾರ್ ಡಾ.ಎಂ.ಎಸ್. ಮೂಡಿತ್ತಾಯ, ಡಾ. ಯು.ಟಿ.ಇಫ್ತಿಕಾರ್ ಅಲಿ, ಸೈಂಟ್ ಅಲೋಶಿಯಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಹಾಗೂ ರೆಕ್ಟರ್ ಫಾ.ಲಿಯೊ ಡಿಸೋಜಾ ಎಸ್.ಜೆ., ನೊವಿಗೊ ಸೊಲ್ಯುಶನ್‌ನ ಸಹ ಸ್ಥಾಪಕ ಮುಹಮ್ಮದ್ ಹನೀಫ್, ಪುತ್ತಿಗೆ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ಆಡಳಿತ ನಿರ್ದೇಶಕ ಫತೇ ಮುಹಮ್ಮದ್ ಪುತ್ತಿಗೆ, ಮೂಡುಬಿದಿರೆ ಭಾರತ್ ಕನ್ಸ್‌ಟ್ರಕ್ಷ್ಷನ್‌ನ ಮುಸ್ತಫಾ ಉಪಸ್ಥಿತರಿದ್ದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿ, ಪ್ರಾಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಹಮೀದ್ ವಂದಿಸಿದರು. ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News