​ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Update: 2017-09-16 16:46 GMT

ಮಂಗಳೂರು, ಸೆ. 16: ಯುವಕನೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಡೀಲ್ ವೀರನಗರ ನಿವಾಸಿ ಪುನೀತ್ ಯಾನೆ ಪಚ್ಚು, ಕಣ್ಣೂರು ಹೊಸಗದ್ದೆ ಪೇರ್ಲ ನಿವಾಸಿಗಳಾದ ಶರತ್, ನಿಖಿಲ್, ಕೊಡಕ್ಕಲ್ ಶಿವನಗರ ನಿವಾಸಿ ಪ್ರಕಾಶ್ ಶೆಟ್ಟಿ ಬಂಧಿತ ಆರೋಪಿಗಳು.

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆ.14 ರ ರಾತ್ರಿ ನಗರದ ಅತ್ತಾವರದಲ್ಲಿ ನಡೆದ ಮೊಸರು ಕುಡಿಕೆ ಕಾರ್ಯಕ್ರಮ ವೀಕ್ಷಿಸಲು ಕೋಡಿಕಲ್ ಶಿವನಗರದ ನಿವಾಸಿ ನಿಸರ್ಗ ( 19) ಅವರು ತನ್ನ ಸ್ನೇಹಿತರಾದ ನಿಶಾಂತ್, ಪುನೀತ್, ನಿಖಿಲ್, ಪ್ರಕಾಶ್ ಹಾಗೂ ಶರತ್‌ರೊಂದಿಗೆ ತೆರಳಿದ್ದರು.

ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ರಾತ್ರಿ 2.30 ರ ವೇಳಗೆ ಪಡೀಲ್ ರೈಲ್ವೇ ಸೇತುವೆ ಬಳಿ ಎಲ್ಲರೂ ಸೇರಿದ್ದಾರೆ. ಈ ಸಂದರ್ಭ ನಿಸರ್ಗನನ್ನು ಉದ್ದೇಶಿಸಿ ಪುನೀತ್ ಎಂಬಾತ,‘‘ನೀನು ಭಾರಿ ತಮಾಷೆ ಮಾಡಿ ಹಿಯಾಳಿಸುತ್ತಿ. ಎಲ್ಲರ ಎದುರು ನನ್ನನ್ನು ಕೀಳಾಗಿ ನೋಡುತ್ತೀಯಾ’’ ಎನ್ನುತ್ತಾ ಅವಾಚ್ಯ ಶಬ್ದದಿಂದ ಬೈದಿದ್ದಾನೆ ಎಂದು ಆರೋಪಿಸಲಾಗಿದೆ. ಇದೇ ಸಂದರ್ಭದಲ್ಲಿ ಪುನೀತ್ ನಿಸರ್ಗನನ್ನು ಚೂರಿಯಿಂದ ಹೊಟ್ಟೆಯ ಎಡಭಾಗಕ್ಕೆ ಇರಿದಿದ್ದಾನೆ. ತೀವ್ರ ಗಾಯಗೊಂಜ ನಿಸರ್ಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಕೂಡಲೇ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ನಿಶಾಂತ್ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಡಿಸಿಪಿ ಹನುಮಂತರಾಯ, ದಕ್ಷಿಣ ವಿಭಾಗದ ಎಸಿಪಿ ಕೆ.ರಾಮರಾವ್, ಕಂಕನಾಡಿ ನಗರ ಪೊಲೀಸ್ ಇನ್‌ಸ್ಪೆಕ್ಟರ್ ರವಿ ನಾಕ್, ಪಿಎಸ್‌ಐ ರುಕ್ಮಯ್ಯ, ಭಾಸ್ಕರ ಮದನ್, ವಿನೋದ್, ರವೀಂದ್ರನಾಥ ರೈ, ರಘುವೀರ್, ನೂತನ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News