ಯುವಜನತೆಯ ಹೋರಾಟ ತಳ ಸಮುದಾಯವನ್ನು ಕೇಂದ್ರೀಕರಿಸಲಿ: ಡಾ.ಕಿರಣ್ ಗಾಜನೂರ್

Update: 2017-09-17 08:57 GMT

ಮಂಗಳೂರು, ಸೆ. 17: ಹಿಂಸೆಯನ್ನು ಭಾಷೆಯನ್ನಾಗಿಸುವ ಇಂದಿನ ಕಾಲಘಟ್ಟದಲ್ಲಿ ಯುವ ಜನರು ತಮ್ಮ ಹೋರಾಟವನ್ನು ತಳ ಸಮುದಾಯದ ಆಹಾರ, ರಕ್ಷಣೆ ಮತ್ತು ಹಕ್ಕಿನ ಹೋರಾಟವನ್ನಾಗಿಸುವ ಮೂಲಕ ಮತೀಯವಾದಕ್ಕೆ ಪ್ರತಿರೋಧ ತೋರಬೇಕಾಗಿದೆ ಎಂದು ಚಿಂತಕ ಹಾಗೂ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಡಾ. ಕಿರಣ್ ಗಾಜನೂರ್ ಹೇಳಿದರು.

ನಗರದ ನಂತೂರು ಶಾಂತಿಕಿರಣದ ಗೌರಿ ಲಂಕೇಶ್ ವೇದಿಕೆಯಲ್ಲಿ ಉದ್ಯೋಗ, ಅಭಿವೃದ್ಧಿ, ಸಾಮರಸ್ಯದ ಘೋಷಣೆಯಡಿಯಲ್ಲಿ ಡಿವೈಎಫ್ಐ ನ 13ನೆ ದ.ಕ ಜಿಲ್ಲಾ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಅವರು ಯುವಜನತೆಗೆ ಕರೆ ನೀಡಿದರು.

ಕೋಮುವಾದವನ್ನು ಪ್ರಚೋದಿಸುವ ಆಳುವ ವರ್ಗಕ್ಕೆ ಪ್ರತಿರೋಧ ತೋರುವ ನಿಟ್ಟಿನಲ್ಲಿ ನಮ್ಮ ಹೋರಾಟ ಕೇವಲ ಒಂದು ವರ್ಗಕ್ಕೆ ಸೀಮಿತ ಗೊಳ್ಳಬಾರದು. ಧರ್ಮದ ಹೆಸರಿನಲ್ಲಿ ಇಂದು ದೇಶದಲ್ಲಿ ಅಸಮಾನತೆ ಮತ್ತು ಒಪ್ಪಿಗೆಯ ಉತ್ಪಾದನೆ ಎಂಬ ಉದ್ಯಮವನ್ನು ವ್ಯವಸ್ಥಿತವಾಗಿ ಬೆಳೆಸುವ ಸಂಖ್ಯೆ ನಡೆಯುತ್ತಿದೆ. ಇದಕ್ಕಾಗಿಯೇ ಕೋಮುವಾದಿ ತಂತ್ರವನ್ನು ಹರಿಯಬಿಡಲಾಗುತ್ತದೆ. ಅಭಿವೃದ್ಧಿ ಎನ್ನುವುದು ಪೊಳ್ಳು ಭರವಸೆ ಹಾಗೂ ಉಳ್ಳವರನ್ನು ಮತ್ತಷ್ಟು ಬಲಿಷ್ಠರನ್ನಾಗಿಸುವ ತಂತ್ರಗಾರಿಕೆಯಾಗಿ ಮುಂದುವರಿಯುತ್ತಿದೆ. ಇಂತಹ ವ್ಯವಸ್ಥೆಯಡಿ ದೇಶದಲ್ಲಿ ದುಡಿದು ತಿನ್ನುವ ತಳ ವರ್ಗದ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವ ನಿಟ್ಟಿನಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ತುಳು ನಾಡಿನ ಇತಿಹಾಸ ಪುರುಷರಾಗಿರುವ ಕೋಟಿ ಚೆನ್ನಯ್ಯರ ಕುರಿತು ವಿಶ್ವವಿದ್ಯಾನಿಲಯದಲ್ಲಿ ಪಠ್ಯ ಪುಸ್ತಕ ಹೊರ ತರಬೇಕು ಹಾಗೂ ಅವರ ಬಗ್ಗೆ ಅಧಿಕೃತ ಇತಿಹಾಸ ಹೊರತರಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಭಿಪ್ರಾಯಿಸಿದರು.

ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕೋಟಿ ಚೆನ್ನಯ್ಯ ಅವರು ತುಳುನಾಡಿನ ಕೇವಲ ಜನಪದ ಪುರುಷರು ಮಾತ್ರವಲ್ಲ, ಅವರು ತುಳುನಾಡಿನ ಇತಿಹಾಸ ಪುರುಷರು ಎಂದು ಒಪ್ಪಿಕೊಳ್ಳಲು ಹಲವರು ಸಿದ್ಧರಿಲ್ಲ. ಆದ್ದರಿಂದ ದ.ಕ. ಜಿಲ್ಲೆಯ 5ನೆ ಶತಮಾನಕ್ಕೂ ಹಿಂದೆ ತುಳುನಾಡಿನಲ್ಲಿ ಗರೋಡಿಗಳನ್ನು ಕಟ್ಟಿ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದ್ದ ಕೋಟಿ ಚೆನ್ನಯ್ಯರನ್ನು ತುಳುನಾಡಿನಲ್ಲಿ ಇಂದಿಗೂ ಅಧಿಕೃತ ಇತಿಹಾಸ ಪುರುಷರಾಗಿಲ್ಲ. ಅಂದು ಕೋಟಿ ಚೆನ್ನಯ್ಯರು ಅಸಮಾನತೆಯ ವಿರುದ್ಧ ಎತ್ತಿಕೊಂಡ ಹೋರಾಟವನ್ನು ಡಿವೈಎಫ್ಐ ಮುಂದುವರಿಸುತ್ತದೆ ಎಂದರು. 

ಸಮಾವೇಶದಲ್ಲಿ ಡಿವೈಎಫ್ಐ ಮುಖಂಡರಾದ ಆಶಾ ಬೊಳಾರ್, ದಯಾನಂದ ಶೆಟ್ಟಿ, ಎಸ್ಎಫ್ಐನ ಜಿಲ್ಲಾಧ್ಯಕ್ಷ  ನಿತಿನ್ ಕುತ್ತಾರ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಸ್ವಾಗತಿಸಿದರು. ಡಿವೈಎಫ್ಐ ಮುಖಂಡ ಮನೋಜ್ ವಾಮಂಜೂರ್ ಕಾರ್ಯಕ್ರಮ ನಿರೂಪಿಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News