ಧರ್ಮಸ್ಥಳ: ಭಜನಾ ತರಬೇತಿ ಕಮ್ಮಟದ ಸಮಾರೋಪ

Update: 2017-09-17 17:08 GMT

ಬೆಳ್ತಂಗಡಿ, ಸೆ. 17: ಭಜನೆಯ ಮೂಲಕ ಭಕ್ತಿಯಿಂದ ಭಗವಂತನನ್ನು ಆರಾಧಿಸಿ ಅನುಗ್ರಹಕ್ಕೆ ಪಾತ್ರರಾಗುವ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿದೆ ಎಂದು ರಾಜ್ಯ ಸಕ್ಕರೆ ಮತ್ತು ಸಣ್ಣ ಕೈಗಾರಿಕಾ ಸಚಿವೆ ಡಾ. ಎಂ.ಸಿ. ಮೋಹನ ಕುಮಾರಿ ಹೇಳಿದರು.

ಅವರು ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ ನಡೆದ 19ನೆ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಹಾಗೂ ಭಜನೋತ್ಸವ ಸಮಾವೇಶದಲ್ಲಿ ಮಾತನಾಡಿದರು.

ಭಜನಾ ತರಬೇತಿಯೊಂದಿಗೆ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾದ ಯೋಗಾಭ್ಯಾಸ, ಪ್ರಾರ್ಥನೆ, ಧ್ಯಾನದ ಬಗ್ಗೆಯೂ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿರುವುದು ವಿಶಿಷ್ಟ ಪ್ರಯತ್ನವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಡಾ ಹೆಗ್ಗಡೆಯವರು ಮಾಡುತ್ತಿರುವ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಕ್ಷೇತ್ರದಿಂದ ಮಾಡಲಾಗುತ್ತಿರುವ ಸೇವಾ ಕಾರ್ಯಗಳಿಗೆ ಸರ್ಕಾರದಿಂದ ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಜಿಲ್ಲೆಯ ಸಮಗ್ರ ಪ್ರಗತಿಗಾಗಿ ತನ್ನ ಇಲಾಖೆ ವತಿಯಿಂದ ಸಣ್ಣ ಕೈಗಾರಿಕೆಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಅವರು ಪ್ರಕಟಿಸಿದರು.

ಬೆಂಗಳೂರಿನ ಖ್ಯಾತ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಭಜನೆಯಿಂದ ಪ್ರಗತಿ, ಕ್ಷಮತೆ, ಶಿಸ್ತು, ಕ್ರಿಯಾಶೀಲತೆ, ಕೌಶಲ, ಸಾಧನೆ ಹೆಚ್ಚಾಗುತ್ತದೆ. ಭಕ್ತಿಯ ಅಂತರಗಂಗೆ ಭಜನೆ ಮೂಲಕ ಜಲಪಾತವಾಗಿ ಧುಮುಕುತ್ತದೆ. ನಿಷ್ಕಲ್ಮಶ ಪ್ರೀತಿಯಿಂದ, ಮುಗ್ದ ಭಕ್ತಿಯಿಂದ ಭಜನೆ ಹಾಡಿದರೆ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಭಜನಾ ಸಂಸ್ಕೃತಿಯ ಪುನರುತ್ಥಾನದೊಂದಿಗೆ ಭಜಕರು ನವಭಾರತ ನಿರ್ಮಾಣದ ಶಿಲ್ಪಿಗಳಾಗಬೇಕು ಎಂದ ಅವರು, ಭಜನಾ ಸಂಸ್ಕೃತಿಯ ಮೂಲಕ ಪ್ರತಿ ಮನೆಯಲ್ಲಿ ಉತ್ತಮ ಸಂಸ್ಕಾರ ಮೂಡಿಸುತ್ತಿರುವ ಕೆಲಸ ಶ್ರೀ ಕ್ಷೇತ್ರದಿಂದ ನಡೆಯುತ್ತಿದೆ. ತನ್ಮೂಲಕ ಪ್ರೀತಿ-ವಿಶ್ವಾಸ ಪಸರಿಸುವ ಮೌನ ಕ್ರಾಂತಿ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿದೆ. ಎಂದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನಾವು ಸುಖ-ಭೋಗದ ದಾಸರಾಗದೆ ಇಂದ್ರಿಯಗಳ ಸಂಯಮ, ಹತೋಟಿಯೊಂದಿಗೆ ಭಗವಂತನ ದಾಸರಾಗಿ ಸುಖ-ಶಾಂತಿ, ನೆಮ್ಮದಿಯ ಸಾರ್ಥಕ ಜೀವನ ನಡೆಸಬೇಕು. ಭೋಗದಿಂದ ಯೋಗದೆಡೆಗೆ ಎಂಬ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮದಿಂದ ಜನರಲ್ಲಿ ಜಾಗೃತಿ ಮಾಡಿಸುವ ಕೆಲಸ ಮಾಡಲಾಗುತ್ತಿದೆ.

ಭಜನೆಯ ಸತ್ಸಂಗದ ಮೂಲಕ ಸಮಾಜದ ಸಂಘಟನೆಯಾಗಬೇಕು. ಸಾಮರಸ್ಯ ಮೂಡಿ ಬರಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನದ ಹಾಗೂ ಪರಿಸರದ ಮಾಲಿನ್ಯವನ್ನು ತಡೆಗಟ್ಟಬೇಕು. ಸತ್ಸಂಗದ ಮೂಲಕ ಮನದ ಮಾಲಿನ್ಯವನ್ನು ದೂರ ಮಾಡಬಹುದು. ಭಜನಾ ಮಂಡಳಿಗಳ ಮೂಲಕ ದುಶ್ಚಟ ಮುಕ್ತವಾದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಬೇಕು ಎಂದರು.

ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಪಾಧ್ಯಕ್ಷರಾದ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರೀಯಾ ಹರ್ಷೇಂದ್ರ ಕುಮಾರ್, ಪರಿಷತ್ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಯೋಗ ನಿರ್ದೇಶಕ ಡಾ ಐ. ಶಶಿಕಾಂತ್ ಜೈನ್ ಉಪಸ್ಥಿತರಿದ್ದರು.

ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ವರದಿ ವಾಚಿಸಿದರು. ಡಾ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ವಂದಿಸಿದರು. ಶ್ರೀನಿವಾಸ್ ರಾವ್ ಮತ್ತು ಪ್ರದೀಪ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News