‘ಮೇಲ್ತೆನೆ’ಯಿಂದ ಬ್ಯಾರಿ ಸಾಹಿತ್ಯ ಸಂವಾದ ಕೂಟ

Update: 2017-09-18 10:16 GMT

ಮಂಗಳೂರು, ಸೆ.18: ದೇರಳಕಟ್ಟೆಯ ಬ್ಯಾರಿ ಸಾಹಿತಿ ಮತ್ತು ಕಲಾವಿದರ ಒಕ್ಕೂಟವಾದ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ಸಂಘಟನೆಯ ಸದಸ್ಯ, ಯೆನೆಪೊಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಿಯಾಝ್ ಪಿ. ಅವರ ಮನೆಯಲ್ಲಿ ರವಿವಾರ ಬ್ಯಾರಿ ಸಾಹಿತ್ಯ ಸಂವಾದ ಕೂಟ ನಡೆಯಿತು.

'ಕಾಲೇಜುಗಳಲ್ಲಿ ಬ್ಯಾರಿ ಭಾಷೆ' ಎಂಬ ವಿಷಯದಲ್ಲಿ ನಿಯಾಝ್ ಮಂಡಿಸಿದ ಪ್ರಬಂಧದ ಮೇಲೆ ಸಂಘಟನೆಯ ಸದಸ್ಯರು ವಿಸ್ತೃತ ಚರ್ಚೆ ನಡೆಸಿದರು.

ಕಾಲೇಜು ಆವರಣದಲ್ಲಿ ಬ್ಯಾರಿ ಮಕ್ಕಳು ಬ್ಯಾರಿ ಭಾಷೆಯಲ್ಲಿ ಮಾತನಾಡಲು ಹಿಂಜರಿಯುತ್ತಿದ್ದಾರೆ. ಕೆಲವು ಕಡೆ ದಂಡ ಹಾಕುವ ಪ್ರಕ್ರಿಯೆಯೂ ಇದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಅಲ್ಲದೆ, ಶಾಲಾ-ಕಾಲೇಜುಗಳಲ್ಲಿ ತುಳು, ಕೊಂಕಣಿ ಸಾಹಿತ್ಯ ಸಂಘ ರಚಿಸಿದಂತೆ ಬ್ಯಾರಿ ಸಾಹಿತ್ಯ ಸಂಘ ರಚಿಸಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮುಂದಾಗಬೇಕು. ಶಾಲಾ-ಕಾಲೇಜುಗಳ ಗೋಡೆಬರೆಹ ಸಂಚಿಕೆಗಳಲ್ಲಿ ಬ್ಯಾರಿ ಭಾಷೆಗೂ ಅವಕಾಶ ಸಿಗುವಂತಾಗಬೇಕು ಎಂದು ನಿಯಾಝ್ ಅಭಿಪ್ರಾಯಪಟ್ಟರು. ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು.

‘ಮೇಲ್ತೆನೆ’ ಸಂಘಟನೆಯ ಅಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮೇಲ್ತೆನೆಯ ಪದಾಧಿಕಾರಿಗಳಾದ ಇಸ್ಮಾಯೀಲ್ ಟಿ., ಇಸ್ಮತ್ ಪಜೀರ್, ಬಶೀರ್ ಕಲ್ಕಟ್ಟ, ಸದಸ್ಯರಾದ ಹಂಝ ಮಲಾರ್, ಬಶೀರ್ ಅಹ್ಮದ್ ಕಿನ್ಯ, ರಫೀಕ್ ಪಾಣೇಲ, ಅರೀಫ್ ಕಲ್ಕಟ್ಟ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News