ಕುದ್ರೋಳಿಯಲ್ಲಿ ಸೆ.21ರಿಂದ ಅ.1ರವರೆಗೆ ‘ಮಂಗಳೂರು ದಸರಾ ಉತ್ಸವ’

Update: 2017-09-18 12:42 GMT

ಮಂಗಳೂರು, ಸೆ. 18: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ 2017 ಹಾಗೂ ನವರಾತ್ರಿ ಮಹೋತ್ಸವ ಸೆ.21ರಿಂದ ಅ.1ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಕ್ಷೇತ್ರದ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.21ರಂದು ಮಧ್ಯಾಹ್ನ 12.20ಕ್ಕೆ ನವದುರ್ಗೆಯರ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿದೆ. ಸೆ.28ರಂದು ಬೆಳಗ್ಗೆ 10 ಗಂಟೆಗೆ ಚಂಡಿಕಾಹೋಮ, ಹಗಲೋತ್ಸವ ಜರುಗಲಿದೆ. ಉತ್ಸವ ಸಂದರ್ಭ ಪ್ರತಿದಿನ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆ ಹಾಗೂ ಪ್ರತಿದಿನ ಸಂಜೆ 6ರಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರಿಂದ ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.

ಸೆ.30ರಂದು ಸಂಜೆ 4 ಗಂಟೆಗೆ ವೈಭವದ ‘ಮಂಗಳೂರು ದಸರಾ’ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಸಮಾರಂಭ ನಡೆಯಲಿದೆ. ಮೆರವಣಿಗೆಯಲ್ಲಿ ಶ್ರೀ ಶಾರದಾ ಮಾತೆ, ಮಹಾಗಣಪತಿ, ನವದುರ್ಗೆಯರ ಮೂರ್ತಿ ಸಹಿತ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ 75ಕ್ಕಿಂತಲೂ ಅಧಿಕ ಟ್ಯಾಬ್ಲೋಗಳು ಭಾಗವಹಿಸಲಿದೆ. ಜಿಲ್ಲೆಯ ಹಾಗೂ ಹೊರಜಿಲ್ಲೆಯ ಜಾನಪದ ತಂಡಗಳು ಮೆರವಣಿಗೆಗೆ ವಿಶೇಷ ಸೊಬಗನ್ನು ನೀಡಲಿದೆ. ಸುಮಾರು 500ಕ್ಕೂ ಹೆಚ್ಚು ಅಲಂಕಾರಿಕ ಕೊಡೆಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಮೆರವಣಿಗೆಗೆ ಹೆಚ್ಚಿನ ಮೆರುಗನ್ನು ನೀಡಲಿದೆ ಎಂದು ಅವರು ತಿಳಿಸಿದರು.

ಈ ಎಲ್ಲ ಕಾರ್ಯಕ್ರಮಗಳ ಸಿದ್ಧತೆಗಳು ಪೂರ್ಣಗೊಂಡಿದೆ. ನಗರವನ್ನು ವಿದ್ಯುತ್‌ದೀಪಗಳಿಂದ ಸಿಂಗರಿಸಲಾಗಿದೆ. ಶೋಭಾಯಾತ್ರೆ ಕುದ್ರೋಳಿ ದೇವಸ್ಥಾನದಿಂದ ಹೊರಟು ಲೇಡಿಹಿಲ್, ಬಳ್ಳಾಲ್‌ಬಾಗ್, ಕೊಡಿಯಾಲ್‌ಬೈಲ್, ಹಂಪನಕಟ್ಟೆ, ವಿವಿ ಕಾಲೇಜು, ಗಣಪತಿ ಹೈಸ್ಕೂಲ್ ರಸ್ತೆ, ರಥಬೀದಿ, ನ್ಯೂಚಿತ್ರ ಮಾರ್ಗವಾಗಿ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಬಂದು ಪುಷ್ಕರಣಿಯಲ್ಲಿ ವಿಸರ್ಜನೆಗೊಳ್ಳಲಿವೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಬಿ.ಕೆ.ತಾರಾನಾಥ್, ರವಿಶಂಕರ್ ಮಿಜಾರ್, ಕೆ.ಮಹೇಶ್ಚಂದ್ರ, ಅಭಿವೃದ್ಧಿ ಸಮಿತಿಯ ದೇವೇಂದ್ರ ಪೂಜಾರಿ, ಎನ್.ಹರೀಶ್ಚಂದ್ರ, ಹರಿಕೃಷ್ಣ ಬಂಟ್ವಾಳ್, ಎಂ.ಶೇಖರ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News