ಜಿಲ್ಲೆಯಲ್ಲಿ ಮನೆಗೆ ಆಹಾರ ಸೌಲಭ್ಯ ಒದಗಿಸಿ- ಆಗ್ರಹ

Update: 2017-09-18 14:08 GMT

ಪುತ್ತೂರು, ಸೆ. 18: ರಾಜ್ಯದ ಮಹತ್ವಾಕಾಂಕ್ಷಿ ‘ಮಾತೃಪೂರ್ಣ’ ಯೋಜನೆಯಡಿಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಆಹಾರ ಸೌಲಭ್ಯ ಪೂರೈಕೆಯನ್ನು ಅಂಗನವಾಡಿಯಲ್ಲಿಯೇ ನೀಡುವಂತೆ ಆದೇಶ ನೀಡಿರುವುದರಿಂದ ಜಿಲ್ಲೆಯಲ್ಲಿ ಅನೇಕ ತೊಂದರೆಗಳು ಉಂಟಾಗಲಿದೆ. ದ.ಕ.ಜಿಲ್ಲೆಯ ಗುಡ್ಡಗಾಡು ಪರಿಸರವನ್ನು ಗಮನದಲ್ಲಿಟ್ಟುಕೊಂಡು ನಿಯಮ ಸಡಿಲಿಕೆ ಮಾಡುವ ಮೂಲಕ ಈ ಹಿಂದಿನ ರೀತಿಯಲ್ಲಿಯೇ ಜಿಲ್ಲೆಯಲ್ಲಿ ಆಹಾರ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮದ ಕಾವು ನಡುವಡ್ಕದ ಸಾಮಾಜಿಕ ಕಾರ್ಯಕರ್ತ ಸಿ.ಕೆ.ಯೂಸುಫ್ ಅವರು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವೆ ಉಮಾಶ್ರೀ ಅವರಿಗೆ ಮನವಿ ಮಾಡಿದ್ದಾರೆ.

ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಈ ಹಿಂದೆ ಮನೆಗೆ ಆಹಾರ ಸೌಲಭ್ಯಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಇದರಿಂದ ಪೌಷ್ಟಿಕ ಆಹಾರ ಕೊರತೆಗೆ ಪರಿಹಾರ ನೀಡಿದಂತಾಗಿತ್ತು. ಆದರೆ ಇದೀಗ ಅಂಗನವಾಡಿಗಳಲ್ಲಿಯೇ ಈ ಆಹಾರ ಪೂರೈಕೆ ನಡೆಯಬೇಕು ಎಂದು ಆದೇಶ ಮಾಡಿರುವುದು ಜಿಲ್ಲೆಯಲ್ಲಿರುವ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಸಮಸ್ಯೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಂಗನವಾಡಿಗಳು ಮನೆಗಳಿಂದ 2-3 ಕಿ.ಮೀ ಗಳಷ್ಟು ದೂರದಲ್ಲಿವೆ. ಅಲ್ಲದೆ ಹಳ್ಳ ಕೊಳ್ಳಗಳನ್ನು ದಾಟಿ ಈ ಅಂಗನವಾಡಿಗಳಿಗೆ ಬರುವ ಸ್ಥಿತಿ ಇದೆ. ಇಂತಹ ಅಂಗನವಾಡಿಗಳಿಗೆ ಗರ್ಭಿಣಿ ಹಾಗೂ ಬಾಣಂತಿಯರು ಬರುವುದು ಕಷ್ಟ ಸಾಧ್ಯವಾಗಿದ್ದು, ಸರ್ಕಾರದ ಉತ್ತಮ ಯೋಜನೆಯೊಂದರ ಫಲಾನುಭವಿಗಳಾಗುವ ಅವಕಾಶ ಇಲ್ಲಿನವರಿಗೆ ತಪ್ಪುವಂತಾಗಿದೆ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.

40 ದಿನಗಳ ಕಾಲ ಬಾಣಂತಿಯರು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಬೆಡ್‌ರೆಸ್ಟ್ ಹಾಗೂ ನಿತ್ರಾಣದಲ್ಲಿರುವ ಬಾಣಂತಿಯರು ಅಂಗನವಾಡಿಗಳಿಗೆ ಬರಲು ಅಸಾಧ್ಯವಾಗಿರುತ್ತದೆ. ಶಸ್ತ್ರಚಿಕಿತ್ಸೆಗೊಳಗಾದ ಬಾಣಂತಿಯರಿಗೆ ಈ ಮೂರು ಕಿಮೀ ನಡೆಯಲು ಸಾಧ್ಯವಾಗಲಾರದು. ಅಂಗನವಾಡಿಯಲ್ಲಿ ಏಕಕಾಲದಲ್ಲಿ 15ರಿಂದ 20 ಮಂದಿ ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಆಹಾರ ನೀಡುವುದೂ ಕೂಡಾ ಅಸಾಧ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಇದ್ದ ಕ್ರಮದ ಹಾಗೇ ಮನೆಗೆ ಆಹಾರ ಪದಾರ್ಥಗಳನ್ನು ತಲುಪಿಸುವುದು ಹೆಚ್ಚು ಉತ್ತಮ ಮಾರ್ಗವಾಗಿದೆ. ಹಾಗಾಗಿ ಈ ಮಾತೃಪೂರ್ಣ ಯೋಜನೆಯಲ್ಲಿ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗುಡ್ಡಗಾಡು ಪರಿಸರವನ್ನು ಗಮನದಲ್ಲಿಟ್ಟುಕೊಂಡು ನಿಯಮ ಸಡಿಲಿಕೆ ಮಾಡುವ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಈ ಸೌಲಭ್ಯಗಳನ್ನು ಪಡೆಯಲು ಅನುಕೂಲ ವಾತಾವರಣವನ್ನು ಕಲ್ಪಿಸುವಂತೆ ಅವರು ಮನವಿ ಮೂಲಕ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News