ಭಟ್ಕಳ: ಪೌರಸೇವಾ ನೌಕರರಿಗೆ ರಕ್ಷಣೆ ಒದಗಿಸುವಂತೆ ಮನವಿ

Update: 2017-09-18 15:35 GMT

ಭಟ್ಕಳ, ಸೆ. 18: ಭಟ್ಕಳ ಪುರಸಭೆಯ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ಭಟ್ಕಳ ಸೋಮವಾರ ಇಲ್ಲಿನ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತು.

ಮೇಲಾಧಿಕಾರಿಗಳ ಆದೇಶದ ಮೇರೆಗೆ ಭಟ್ಕಳ ಪುರಸಭೆ ಮಾಲಿಕತ್ವದ ಅಂಗಡಿ ಮಳಿಗೆಗಳನ್ನು ಕಬ್ಜಾ ಪಡೆಯುವ ಕಾರ್ಯಾಚರಣೆಯಲ್ಲಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಅಂಗಡಿಕಾರನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ನಂತರದ ಬೆಳವಣೆಗೆಯಲ್ಲಿ ಪೌರ ನೌಕರರ ಮೇಲೆ ಹಾಗೂ ಮುಖ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದು ಪುರಸಭೆಯ ಕಟ್ಟಡದ ಮೇಲೆ ಕಲ್ಲೆಸೆತ ನಡೆದಿರುತ್ತಿದೆ. ಇದರಿಂದಾಗಿ ನೌಕರರ ಮನೋಬಲ ಕುಗ್ಗಿ ಹೋಗಿದ್ದು ಜೀವಭಯದಿಂದ ವಿಚಲಿತಗೊಂಡಿದ್ದಾರೆ. ತಮ್ಮ ಹಾಗೂ ಪೊಲೀಸ್ ಅಧಿಕಾರಿಗಳ ಸಮಸಕ್ಷಮದಲ್ಲೇ ಪುರಸಭೆ ಸಿಬ್ಬಂದ್ದಿಗಳ ಹಲ್ಲೆ ಹಾಗೂ ಕಲ್ಲು ತೂರಾಟ ನಡೆದಿದ್ದು ಪುರಸಭೆಯ ನೌಕರರಲ್ಲಿ ಅಸುರಕ್ಷೆತೆ ಹಾಗೂ ಅಭದ್ರತೆ ಭಾವನೆ ಉಂಟಾಗಿದೆ ಕಾರಣ  ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿಪತ್ರದಲ್ಲಿ ತಿಳಿಸಲಾಗಿದೆ.

ಈ ಘಟನೆಯಿಂದಾಗಿ ಕಂದಾಯ ಅಧಿಕಾರಿ ಹಾಗೂ ತೆರಿಗೆ ವಸೂಲಿ ಸಹಾಯಕರು ಜೀವಭಯದಿಂದ ಪುರಸಭೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಅಲ್ಲದೆ ಅವರ ಮೇಲೆ ಕೊಲೆ ಯತ್ನದ ಆರೋಪದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಆದ್ದರಿಂದ ಎಲ್ಲ ಪುರಸಭೆ ನೌಕರರಿಗೆ ಸೂಕ್ತ ರಕ್ಷಣೆ ಹಾಗೂ ಕಚೇರಿಯಲ್ಲಿರುವ ದಾಖಲೆಗಳಿಗೆ ಭದ್ರತೆಯನ್ನು ನೀಡಬೇಕೆಂದು ಮತ್ತು ಮುಂದಿನ ದಿನಗಳಲ್ಲಿ ಸದರಿ ಅಂಗಡಿ ಮಳಿಗೆಗಳನ್ನು ಕಬ್ಜಾ ಪಡೆಯುವ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಬಳಸಿ ಕಾರ್ಯಾಚರಣೆ ಮಾಡಿಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.  ಮನವಿ ಪತ್ರವನ್ನು ಸಹಾಯಕ ಆಯುಕ್ತ ಎಂ.ಎನ್.ಮಂಜುನಾಥ್ ಸ್ವೀಕರಿದ್ದಾರೆ.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಸಾದಿಖ್ ಮಟ್ಟಾ, ಸದಸ್ಯರಾದ ಅಶ್ಫಾಖ್ ಕೆ.ಎಂ. ಸೇರಿದಂತೆ, ನೌಕರರ ಸಂಘದ ವೇಣುಗೋಪಾಲ ಶಾಸ್ತ್ರಿ, ವೆಂಕಟೇಶ್ ನಾವುಡಾ, ಕಿರಣ್.ಎನ್. ಭಟ್ಕಳಕರ್ ಮತ್ತಿತರ ಪುರಸಭೆಯ 24 ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News