ಜಗದೀಶ್ ಕಾರಂತ್ ಬಹಿರಂಗ ಬೆದರಿಕೆ ಹಾಕಿದ್ದರೂ ಪೊಲೀಸ್ ಇಲಾಖೆ ಮೌನ!

Update: 2017-09-19 11:20 GMT

ಮಂಗಳೂರು, ಸೆ.19: ಸಂಪ್ಯ ಠಾಣೆಯ ಎಸ್ಸೈ ಖಾದರ್, ಎಎಸ್ಸೈ ರುಕ್ಮಾ ಹಾಗೂ ಚಂದ್ರ ಎಂಬವರ ವಿರುದ್ಧ ಕಳೆದ ಶುಕ್ರವಾರ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಪೊಲೀಸರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದರೂ ಮೌನ ವಹಿಸಿರುವ ಪೊಲೀಸ್ ಇಲಾಖೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಮಧ್ಯೆ ಜಿಲ್ಲೆಯಲ್ಲಿ ಇಬ್ಬರು ಸಚಿವರ ಸಹಿತ 7 ಮಂದಿ ಕಾಂಗ್ರೆಸ್ ಶಾಸಕರೂ ಮೌನವಹಿಸಿರುವ ಬಗ್ಗೆಯೂ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಲೆಂದೇ ಜಗದೀಶ್ ಕಾರಂತ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಕೇವಲ ಪೊಲೀಸ್ ಇಲಾಖೆಗೆ ಮಾಡುವ ಅವಮಾನವಲ್ಲ. ಸರಕಾರಕ್ಕೆ ಹಾಕಿದ ಸವಾಲಾಗಿದೆ. ಈಗಾಗಲೆ ಜಗದೀಶ್ ಕಾರಂತರ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಾಗಿ ಯಾವ ಕಾರಣಕ್ಕೂ ಪೊಲೀಸ್ ಇಲಾಖೆ ತಡಮಾಡಬಾರದು. ತಕ್ಷಣ ಸ್ವಯಂಪ್ರೇರಿತವಾಗಿ ಜಗದೀಶ್ ಕಾರಂತ್ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು. ಸೆ.20ರಂದು ಗೃಹ ಸಚಿವರು ಮಂಗಳೂರಿಗೆ ಆಗಮಿಸಲಿದ್ದು, ಅದಕ್ಕಿಂತ ಮುಂಚೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು" ಎಂದು ವಿಧಾನ ಪರಿಷತ್‌ನ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಸೂಚಿಸಿದ್ದಾರೆ.

"ಜಗದೀಶ್ ಕಾರಂತ್‌ ಹೇಳಿಕೆ ಖಂಡನೀಯ. ಇದನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವಂತಹ ಹೇಳಿಕೆ ಇದಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇದನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸಬಹುದಾಗಿತ್ತು. ಆದರೆ ಈವರೆಗೂ ಮಾಡಿಲ್ಲ. ನಾಳೆ ಗೃಹ ಸಚಿವರು ಮಂಗಳೂರಿಗೆ ಆಗಮಿಸಲಿದ್ದು, ಈ ವಿಷಯದಲ್ಲಿ ಅವರ ಗಮನ ಸೆಳೆಯುತ್ತೇನೆ" ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವ ತಿಳಿಸಿದ್ದಾರೆ.

"ಇಲ್ಲಿ ಪ್ರಜಾಪ್ರಭುತ್ವವಿಲ್ಲವೇ?, ಜಿಲ್ಲಾಡಳಿತವು ಜಿಲ್ಲೆಯಲ್ಲಿ ಮೂಲಭೂತವಾದಿ ಶಕ್ತಿಗಳ ಕೈಗೆ ಒಪ್ಪಿಸಿದೆಯೇ?, ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಅಧಿಕಾರಿಗಳಿಗೆ ಸಾರ್ವಜನಿಕ ಸಭೆಯಲ್ಲಿ ಬೆದರಿಕೆ ಹಾಕಿದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾಕೆ ಮೌನ ತಾಳಿದ್ದಾರೆ?, ಆರೋಪಿಗಳಿಗೆ ಕಾನೂನು ರೀತಿಯಲ್ಲಿ ಏನು ಮಾಡಬೇಕೋ ಅದನ್ನು ಪೊಲೀಸರು ಮಾಡಲಿ. ಜಿಲ್ಲೆಯ ಜನತೆ ಅದಕ್ಕಿಂತ ಬೇರೆ ಏನನ್ನೂ ನಿರೀಕ್ಷಿಸುವುದಿಲ್ಲ. ಒಬ್ಬ ಸರಕಾರಿ ಅಧಿಕಾರಿಗೆ, ಅದರಲ್ಲೂ ಪೊಲೀಸ್ ಇಲಾಖೆಯ ಅಧಿಕಾರಿಗೆ ಬಹಿರಂಗವಾಗಿ ಬೆದರಿಕೆ ಒಡ್ಡುವುದು ಅಕ್ಷಮ್ಯ. ಇದನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು" ಎಂದು ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ಪ್ರತಿಕ್ರಿಯಿಸಿದ್ದಾರೆ.

"ಜಗದೀಶ್ ಕಾರಂತ್ ಪೊಲೀಸ್ ಇಲಾಖೆಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಅದನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಇದು ಪೊಲೀಸ್ ಇಲಾಖೆಗೆ ಮಾಡಿದ ಅವಮಾನವಾಗಿದೆ. ಇವರ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದರೂ ಕೂಡ ಇಲಾಖೆಯ ಮೇಲಧಿಕಾರಿಗಳು ಯಾಕೆ ಮೌನ ತಾಳಿದ್ದಾರೆ ಎಂಬುದರ ಬಗ್ಗೆ ಜಿಲ್ಲೆಯ ಜನತೆಗೆ ಮೊದಲು ಸ್ಪಷ್ಟನೆ ಕೊಡಬೇಕು" ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಒತ್ತಾಯಿಸಿದ್ದಾರೆ.

"ಜಗದೀಶ್ ಕಾರಂತ್ 1998ರಲ್ಲಿ ಸುರತ್ಕಲ್ ಗಲಭೆಯ ಕಾರಣಕರ್ತ. ಇದೀಗ  ಪುತ್ತೂರನ್ನು ಸುರತ್ಕಲ್ ಮಾಡಲು ಮುಂದಾಗಿದ್ದಾರೆ. ಬಹಿರಂಗ ಸಭೆಯಲ್ಲಿ ಒಬ್ಬ ಎಸ್ಸೈಗೆ ಅಶ್ಲೀಲ ಪದ ಬಳಸಿ ನಿಂದಿಸಿದ್ದರೂ ಕೂಡ ಮೇಲಧಿಕಾರಿಗಳು ಮೌನ ತಾಳಿರುವುದು ಖಂಡನೀಯ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಷ್ಪಕ್ಷಪಾತಿಯಾಗಿದ್ದರೆ ತಕ್ಷಣ ಜಗದೀಶ್ ಕಾರಂತ್ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಿ. ಇಷ್ಟೆಲ್ಲಾ ಆದರೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮೌನ ತಾಳಿರುವುದು ವಿಪರ್ಯಾಸ" ಎಂದು ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಹೇಳಿದ್ದಾರೆ.

"ಶಾಂತಿಯತ್ತ ಮರಳುತ್ತಿರುವ ದ.ಕ.ಜಿಲ್ಲೆಯಲ್ಲಿ ಮತ್ತೆ ಅಶಾಂತಿ ಸೃಷ್ಟಿಸಲು ಸಂಘಪರಿವಾರ ಮುಂದಾಗಿದೆ. ಜಗದೀಶ್ ಕಾರಂತರ ಮೊನ್ನೆಯ ಭಾಷಣ ಅದರ ಭಾಗವಾಗಿದೆ. ಆದರೂ ಜಿಲ್ಲೆಯ ಪೊಲೀಸ್ ಇಲಾಖೆ ಮೌನ ತಾಳಿರುವುದು ಖಂಡನೀಯ. ಗೃಹ ಸಚಿವರು ಮಂಗಳೂರಿಗೆ ಆಗಮಿಸಲಿದ್ದು, ಜಿಲ್ಲೆಯ ಸ್ಥಿತಿಗತಿಯ ಬಗ್ಗೆ, ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಗಮನ ಸೆಳೆಯಲಾಗುವುದು" ಎಂದು ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ತಿಳಿಸಿದ್ದಾರೆ.

"ಜಗದೀಶ್ ಕಾರಂತರ ಭಾಷಣ ಪ್ರಚೋದನಕಾರಿಯಾದುದು. ಠಾಣೆಯ ಎಸ್ಸೈಯನ್ನು ಅಶ್ಲೀಲ ಪದ ಬಳಸಿ ನಿಂದಿಸಿರುವುದು ಖಂಡನೀಯ. ಪುತ್ತೂರನ್ನು ಸುರತ್ಕಲ್ ಆಗಿ ಪರಿವರ್ತನೆ ಮಾಡುತ್ತೇನೆ ಎಂದು ಕೋಮುಸೂಕ್ಷ್ಮ ಪ್ರದೇಶವಾದ ಪುತ್ತೂರಿನಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಕೂಡ ಪೊಲೀಸ್ ಇಲಾಖೆಯ ಮೌನ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ವಸ್ತುನಿಷ್ಠ ವರದಿ ಮಾಡಿದ ಪತ್ರಕರ್ತನ ಮೇಲೆ ಜಿಲ್ಲಾ ಎಸ್ಪಿ ಸ್ವಯಂ ಪ್ರೇರಿತವಾಗಿ ಕಾನೂನು ಕ್ರಮಕೈಗೊಂಡಿರುವಾಗ ಈ ವಿಷಯದಲ್ಲಿ ಮೌನ ತಾಳಿರುವುದು ವಿಪರ್ಯಾಸ. ಇದು ಜಿಲ್ಲಾ ಉಸ್ತುವಾರಿ ಸಚಿವರ, ಜಿಲ್ಲಾ ಪೊಲೀಸ್ ಇಲಾಖೆಯ ದೌರ್ಬಲ್ಯ ಮತ್ತು ವೈಫಲ್ಯವಾಗಿದೆ" ಎಂದು ಮುಸ್ಲಿಂ ವರ್ತಕರ ಸಂಘದ ಮುಖಂಡರಾದ ಅಲಿ ಹಸನ್, ಯಾಸೀನ್ ಕುದ್ರೋಳಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News