ಜಗದೀಶ್ ಕಾರಂತ, ಪ್ರತಿಭಟನಾ ಆಯೋಜಕರನ್ನು ತಕ್ಷಣವೇ ಬಂಧಿಸಿ: ಎಸ್‌ಡಿಪಿಐ ಮುಖಂಡರ ಒತ್ತಾಯ

Update: 2017-09-19 15:12 GMT

ಪುತ್ತೂರು, ಸೆ, 19: ಪ್ರತಿಭಟನೆಯ ಹೆಸರಿನಲ್ಲಿ ಸಮುದಾಯದ ನಿಂದನೆ, ವ್ಯಕ್ತಿಗತ ನಿಂದನೆ ಮತ್ತು ಅಧಿಕಾರಿಗಳ ಕರ್ತವ್ಯಪಾಲನೆಯನ್ನು ಪ್ರಶ್ನಿಸುವ ಆದಿಕಾರ ಯಾರಿಗೂ ಇಲ್ಲ. ಪ್ರತಿಭಟನೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತ್ತು ಕೋಮು ಗಲಭೆ ಹಬ್ಬಿಸಲು ಯತ್ನಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಅಲ್ ಇಂಡಿಯಾ ಇಮಾಂ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಹೇಳಿದರು.

ಅವರು ಪ್ರಚೋದನಕಾರಿ ಭಾಷಣದ ಮೂಲಕ ಶಾಂತಿ ಕದಡಲು ಯತ್ನಿಸಿದ ಜಗದೀಶ್ ಕಾರಂತ್ ಮತ್ತು ಕಾರ್ಯಕ್ರಮ ಸಂಯೋಜಿಸಿದ ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲುಕು ಸಮಿತಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಸಂಜೆ ಇಲ್ಲಿನ ಗಾಂಧಿ ಕಟ್ಟೆ ಬಳಿಯಲ್ಲಿ ಎಸ್‌ಡಿಪಿಐ ಪುತ್ತೂರು ತಾಲೂಕು ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ತನಿಖೆಯ ಹೆಸರಿನಲ್ಲಿ ಪೊಲೀಸರು ಮನೆಗೆ ಹೋಗಿ ಕುರಾನ್ ಎಸೆದ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ವರದಿ ಮಾಡಿದ ಬಂಟ್ವಾಳದ ವಾರ್ತಾಭಾರತಿ ಪತ್ರಿಕೆಯ ವರದಿಗಾರನ ವಿರುದ್ದ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿರುವ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತನ್ನದೇ ಇಲಾಖೆಯ ಅಧಿಕಾರಿ ಒಬ್ಬರನ್ನು ಅವಮಾನಿಸಿದ, ಅಶ್ಲೀಲವಾಗಿ ನಿಂದಿಸಿದ ಜಗದೀಶ್ ಕಾರಂತ್ ಮತ್ತು ಕಾರ್ಯಕ್ರಮ ಆಯೋಜಿಸಿದವರ ಮೇಲೆ ಕೇಸು ದಾಖಲಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಜಗದೀಶ್ ಕಾರಂತ ಕೋಮು ಪ್ರಚೋದಿತವಾಗಿ ಮಾತನಾಡಿದ್ದರೂ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರವನ್ನು ತೃಪ್ತಿ ಪಡಿಸಲು ಇಲ್ಲಿನ ಪೊಲೀಸ್ ಇಲಾಖೆ ಆತನ ವಿರುದ್ದ ಕೇಸು ದಾಖಲಿಸಿಲ್ಲ. ಕೇಳಿದರೆ ದೂರು ನೀಡಿಲ್ಲ ಎನ್ನುತ್ತಾರೆ. ಇಲ್ಲಿನ ಪೊಲೀಸರು ಮುಸ್ಲಿಮರಿಗೆ ಒಂದು ನೀತಿ ಮತ್ತು ಹಿಂದೂಗಳಿಗೆ ಒಂದು ನೀತಿ ಎಂಬ ಧೋರಣೆ ಮಾಡುತ್ತಿದ್ದಾರೆ ಇಂತಹ ತಾರತಮ್ಯ ಖಂಡನೀಯ ಎಂದರು.

ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಮತ್ತು ಕಲ್ಲಡ್ಕ ಪ್ರಭಾಕರ ಭಟ್ ಜಿಲ್ಲೆಯಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಸೌಹಾರ್ಧತೆಯಿಂದ ಬದುಕುತ್ತಿರುವ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಸುವ ಪ್ರಯತ್ನ ಮಾಡಿದ್ದು, ಅದಕ್ಕೆ ಜಿಲ್ಲೆಯ ಜನತೆ ಮಾನ್ಯತೆ ನೀಡದಿದ್ದಾಗ ಇದೀಗ ಜಗದೀಶ್ ಕಾರಂತರನ್ನು ಬರಮಾಡಿಸಿಕೊಂಡು ತನ್ನ ಪ್ರಯತ್ನವನ್ನು ಮುಂದುವರಿಸುತ್ತಿದ್ದಾರೆ. ಸುರತ್ಕಲ್‌ನಲ್ಲಿ ಕೋಮು ಗಲಭೆಗೆ ಕಾರಣ ಕರ್ತರಾದ ಜಗದೀಶ್ ಕಾರಂತ್ ಅವರ ಭಾಷಣದಿಂದಾಗಿ 9 ಜೀವಗಳು ಬಲಿಯಾಗಿದೆ. ಅದು ಪುತ್ತೂರಿನಲ್ಲಿ ಮರುಕಳಿಸದಂತೆ ಪೊಲೀಸರು ತಡೆಯಬೇಕು ಎಂದರು.

ಪೊಲೀಸರು ಬಳೆ ತೊಟ್ಟಿಲ್ಲ;ಅಬ್ದುಲ್ ಲತೀಫ್

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಲತೀಫ್ ಮಾತನಾಡಿ ಪುತ್ತೂರನ್ನು ಸುರತ್ಕಲ್ ಮಾಡಲು ಇಲ್ಲಿನ ಎಸ್‌ಡಿಪಿಐ ಕಾರ್ಯಕರ್ತರು ಎಂದಿಗೂ ಕಾರಂತರಿಗೆ ಅವಕಾಶ ನೀಡುವುದಿಲ್ಲ. ಕಾನೂನು ಮೀರಿ ಕೋಮು ಪ್ರಚೋದಕ ಕಾರಂತರನ್ನು ಬಂಧಿಸುವ ಶಕ್ತಿಯಿದೆ. ಇಲ್ಲಿನ ಪೊಲೀಸರಿಗೆ ಬಳೆ ತೊಟ್ಟು ಕೊಂಡಿಲ್ಲ. ಕಾರಂತರು ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ದೇಶದ ಕಾನೂನು ಮೀರಿ ವರ್ತಿಸುವ ಕೋಮುವಾದಿಗಳು ಮನುಷ್ಯ ಮನಸ್ಸನ್ನು ಒಡೆಯಲು ಎಸ್‌ಡಿಪಿಐ ಕಾರ್ಯಕರ್ತರು ಅವಕಾಶ ನೀಡುವುದಿಲ್ಲ. ಇಲ್ಲಿನ ಪ್ರಜ್ಞಾವಂತ ಹಿಂದೂ, ದಲಿತ, ಕ್ರಿಶ್ಚನರು ಕೋಮುವಾದಿಗಳನ್ನು ಈಗಲೇ ತಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ದೇಶ ಭಾರೀ ಬೆಲೆ ತೆರಬೇಕಾದೀತು ಎಂದರು.

ಕಾರಂತ ಕಾಮಿಡಿ ಪೀಸ್- ಸಿದ್ದೀಕ್ ಕೆ.ಎ

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಕೆ.ಎ ಮಾತನಾಡಿ ಕಾರಂತ ಎನ್ನುವುದು ಗಂಭೀರ ವ್ಯಕ್ತಿತ್ವವಲ್ಲ. ಅದೊಂದು ಕಾಮಿಡಿ ಪೀಸ್. ಆತನ ಹುಚ್ಚುತನಕ್ಕೆ ನಗುವುದಕ್ಕಾಗಿ ಆತನನ್ನು ಆಹ್ವಾನಿಸುತ್ತಿದ್ದಾರೆ. 1998ರಲ್ಲಿ ನಡೆದ ಸುರತ್ಕಲ್ ಪ್ರಕರಣಕ್ಕೆ ಸಂಬಂಧಿಸಿ ಅಂದೇ ಆತನನ್ನು ಬಂಧಿಸಿ ಕೇಸು ದಾಖಲಿಸಿದ್ದಲ್ಲಿ ಆತ ಈ ಮಟ್ಟಕ್ಕೆ ಕೋಮುವಾದಿಯಾಗಿ ಬೆಳೆಯುತ್ತಿರಲಿಲ್ಲ. ಇದಕ್ಕೆಲ್ಲಾ ಪೊಲೀಸರೇ ಕಾರಣವೆಂದ ಅವರು ಇದೀಗ ಪುತ್ತೂರನ್ನು ಸುರತ್ಕಲ್ ಮಾಡುತ್ತೇನೆ ಎನ್ನುವ ಆತನನ್ನು ಯಾಕೆ ಬಂಧಿಸುತ್ತಿಲ್ಲ. ಹೀಗಾದಲ್ಲಿ ಪರಿಣಾಮವೇನಾಗಬಹುದು ಎಂದು ಪ್ರಶ್ನಿಸಿದರು. ಹಿಂದುತ್ವದ ಹೆಸರಿನಲ್ಲಿ ಸವಾರಿ ನಡೆಸಿ, ನಾವು ಮಾಡಿದ್ದೇ ಸರಿ ನಮ್ಮನ್ನು ಯಾರೂ ಕೇಳಬಾರದು ಎಂಬ ಧೋರಣೆ ಪ್ರಜಾಪ್ರಭುತ್ವಕ್ಕೆ ಮತ್ತು ದೇಶಕ್ಕೆ ಮಾರಕವಾಗಿದೆ ಎಂದರು.

ಅರುಣ್ ಕುಮಾರ್ ಪುತ್ತಿಲ ಎಂಬಾತ ಹಿಂದೂಗಳು ಮುಸ್ಲಿಮರ ಅಂಗಡಿಗೆ ಹೋಗಬಾರದು. ಅವರೊಂದಿಗೆ ವ್ಯಾಪಾರ ವ್ಯವಹಾರ ಮಾಡಬಾರದು ಎಂದು ಎಂದು ಬ್ಯಾನ್ ಹಾಕುತ್ತಿದ್ದಾರೆ. ಇದನ್ನು ಎಸ್‌ಡಿಪಿಐ ಸಂಪೂರ್ಣವಾಗಿ ವಿರೋಧಿಸುತ್ತದೆ. ಇಲ್ಲಿನ ಹಿಂದೂಗಳೊಂದಿಗೆ ಮುಸ್ಲಿಮರು ವ್ಯಾಪಾರ ನಡೆಸಿ, ಅವರ ಆಟೋದಲ್ಲಿ ನೀವು ಹೋಗಿ ನಮ್ಮಂತೆ ಅವರಿಗೂ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗಲಿ, ನಾವು ಭಾರತದ ನೈಜ ಸಂಸ್ಕೃತಿಯ ಪ್ರತಿಪಾದಕರು ಪುತ್ತಿಲ ಅವರಂತಹವರಲ್ಲ ಎಂದು ಹೇಳಿದರು.

ಸವಣೂರು ಗ್ರಾ.ಪಂ ಸದಸ್ಯ ಎಂ.ಎ ರಫೀಕ್ ಮಾತನಾಡಿ ಪೊಲಿಸ್ ಅಧಿಕಾರಿ ಮತ್ತು ಇಲಾಖೆಯ ವಿರುದ್ದ ಬೆದರಿಕೆ ರೂಪದ ಭಾಷಣವನ್ನು ಜಗದೀಶ್ ಕಾರಂತ ಮಾಡಿದ್ದು ಅದರ ವಿರುದ್ದ ಪೊಲೀಸರಿಗೆ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಜೊತೆ ಕಾರ್ಯದರ್ಶಿ ಹಂಝ ಅಫ್ನಾನ್, ಕೊಶಾಧಿಕಾರಿ ಪಿಬಿಕೆ ಮುಹಮ್ಮದ್, ಅಶ್ರಫ್ ಬಾವು, ಮತ್ತಿತರು ಉಪಸ್ಥಿತರಿದ್ದರು.

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಜಾಬಿರ್ ಅರಿಯಡ್ಕ ಸ್ವಾಗತಿಸಿದರು. ಎಸ್‌ಡಿಎಯು ತಾಲೂಕು ಅಧ್ಯಕ್ಷ ಬಾತಿಷಾ ಬಡಕ್ಕೋಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News