ಸುಳ್ಳು ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ ಪೊಲೀಸ್ ಕಮಿಷನರ್

Update: 2017-09-20 06:38 GMT

ಮಂಗಳೂರು, ಸೆ. 20: ಮಂಗಳೂರಿನಿಂದ ದುಬೈಗೆ ತೆರಳಬೇಕಾಗಿದ್ದ ಪ್ರಯಾಣಿಕನೋರ್ವ ಪವರ್ ಬ್ಯಾಂಕ್ ಹೊಂದಿದ್ದ ಕಾರಣ ಅಧಿಕಾರಿಗಳಿಂದ ತಾಸಿಗೂ ಹೆಚ್ಚು ಕಾಲ ವಿಚಾರಣೆಗೊಳಪಟ್ಟ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮಂಗಳವಾರ ರಾತ್ರಿ ಮಂಗಳೂರಿನಿಂದ ಇಂಡಿಗೋ ವಿಮಾನದಲ್ಲಿ ದುಬೈಗೆ ಪ್ರಯಾಣಿಕ ತೆರಳಬೇಕಾಗಿತ್ತು. ಆದರೆ, ಅವರು ತಮ್ಮ ಲಗೇಜ್‌ನಲ್ಲಿ ಇಟ್ಟುಕೊಂಡಿದ್ದ ಪವರ್‌ಬ್ಯಾಂಕ್‌ನಿಂದಾಗಿ ತಾಸಿಗೂ ಹೆಚ್ಚು ಕಾಲ ವಿಮಾನ ನಿಲ್ದಾಣ ಅಧಿಕಾರಿಗಳಿಂದ ವಿಚಾರಣೆಗೊಳಪಡಬೇಕಾಯಿತು.

ಬಾಂಬ್ ಅಲ್ಲ, ಪವರ್ ಬ್ಯಾಂಕ್: ಅಂಬರಸು

ಈ ಬಗ್ಗೆ ‘ವಾರ್ತಾಭಾರತಿ’ಯು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ವಹಣಾಧಿಕಾರಿ ಅಂಬರಸು ಅವರನ್ನು ಸಂಪರ್ಕಿಸಿದಾಗ "ವಿಮಾನ ಪ್ರಯಾಣಿಕನ ಬಳಿ ಬ್ರಾಂಡೆಡ್ ಅಲ್ಲದ ಹಗುರವಾದ ಪವರ್ ಬ್ಯಾಂಕ್ ಇದ್ದುದೇ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ" ಎಂದು ಹೇಳಿದ್ದಾರೆ.

"ಸಾಮಾನ್ಯವಾಗಿ ಮೊಬೈಲ್ ಪವರ್ ಬ್ಯಾಂಕ್ ಭಾರವಾಗಿರುತ್ತದೆ. ಆದರೆ ಪ್ರಯಾಣಿಕನ ಬಳಿ ಇದ್ದ ಪವರ್ ಬ್ಯಾಂಕ್‌ ಹಗುರವಾಗಿತ್ತು. ಇದರಿಂದಾಗಿ ಅಧಿಕಾರಿಗಳಿಗೆ ಅನುಮಾನ ಉಂಟಾಗಿ ವಿಚಾರಣೆ ನಡೆಸಿದ್ದಾರೆ. ಬಾಂಬ್ ತಪಾಸಣಾ ದಳದವರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಕೊನೆಗೆ ಆತನ ಬಳಿ ಇದ್ದುದು ಬಾಂಬ್ ಅಲ್ಲ. ಪವರ್ ಬ್ಯಾಂಕ್ ಎಂದು ಗೊತ್ತಾಯಿತು. ಬಳಿಕ ಆತನನ್ನು ಇನ್ನೊಂದು ಇಂಡಿಗೊ ವಿಮಾನದಲ್ಲಿ ಕಳುಹಿಸಿಕೊಡಲಾಯಿತು" ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸ್ಫೋಟಕ ವಸ್ತುವಲ್ಲ, ಪವರ್ ಬ್ಯಾಂಕ್: ಕಮಿಷನರ್‌

"ಮಂಗಳವಾರ ರಾತ್ರಿ ವಿಮಾನ ಪ್ರಯಾಣಿಕನ ಬಳಿ ಪತ್ತೆಯಾಗಿರುವುದು ಸ್ಫೋಟಕ ವಸ್ತುವಲ್ಲ. ಮೊಬೈಲ್‌ಗೆ ಚಾರ್ಜ್ ಮಾಡುವ ಪವರ್ ಬ್ಯಾಂಕ್" ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಪ್ರಯಾಣಿಕ ಹೊಂದಿದ್ದ ಪವರ್ ಬ್ಯಾಂಕ್‌ನಿಂದಾಗಿ ಅನುಮಾನಗೊಂಡು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪವರ್ ಬ್ಯಾಂಕ್ ಎಂದು ಗೊತ್ತಾದ ಬಳಿಕ ಪ್ರಯಾಣಿಕನನ್ನು ಬಿಟ್ಟುಬಿಡಲಾಗಿದೆ" ಎಂದು ಅವರು ಹೇಳಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಮೊಬೈಲ್ ಬಾಂಬ್' ಹಿಡಿದ ಟಿವಿ ಚಾನಲ್ ಗಳು !

ಮಂಗಳೂರಿನಿಂದ ಪ್ರಯಾಣಿಸಲು ಬಂದಿದ್ದ ವ್ಯಕ್ತಿಯೊಬ್ಬನ ಬಳಿ ಇದ್ದ  ಮೊಬೈಲ್ ಗೆ ಬಳಸುವ ಪವರ್ ಬ್ಯಾಂಕ್  ಬಗ್ಗೆ ಗೊಂದಲ ಮೂಡಿತ್ತು. ಆದರೆ ವಿಷಯ ಏನೆಂದು ಸ್ಪಷ್ಟವಾಗುವ ಮೊದಲೇ ತೀರ್ಮಾನಕ್ಕೆ ಬಂದಿದ್ದ ಕೆಲವು ಮಾಧ್ಯಮಗಳು "ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ" ಎಂದು ಸುಳ್ಳು ಸುದ್ದಿಯನ್ನು ಹರಡಿ ಬಿಟ್ಟವು.

ರಿಪಬ್ಲಿಕ್ ಟಿವಿ  ನೀಡಿದ್ದ ಬ್ರೇಕಿಂಗ್ ಸುದ್ದಿ ಹೀಗಿತ್ತು.. "ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತೆ ಬಗ್ಗೆ ಆತಂಕ" ಎಂಬ ಶೀರ್ಷಿಕೆಯಲ್ಲಿ  
"ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆಲ್ ಫೋನ್ ಬಾಂಬ್ ಒಂದು ಪತ್ತೆಯಾಗಿದ್ದು ಇದು ದೊಡ್ಡ ಭದ್ರತಾ ವೈಫಲ್ಯ ಎಂದು ಹೇಳಲಾಗಿದೆ. ಇದನ್ನು ಹೊಂದಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ. ಈ ಬಗ್ಗೆ ಇಂಡಿಗೋ ಸಂಸ್ಥೆ ಹೇಳಿಕೆ ನೀಡಿದ್ದು, ಮೊಬೈಲ್ ಬಾಂಬ್ ಸ್ಕ್ರೀನರ್ ಸಿಬ್ಬಂದಿಯ ಗಮನಕ್ಕೆ ಬಂದಿದೆ ಎಂದಿದೆ". 

ಟೈಮ್ಸ್ ನೌ ಕೂಡ ಈ ಸುಳ್ಳು ಸುದ್ದಿ ಸ್ಪರ್ಧೆಯಲ್ಲಿ ಹಿಂದೆ ಬೀಳದೆ 26 ವರ್ಷದ ಮಂಗಳೂರಿನ ವ್ಯಕ್ತಿಯನ್ನು ಮೊಬೈಲ್ ಬಾಂಬ್ ಹೊಂದಿದ್ದಕ್ಕೆ ಬಂಧಿಸಲಾಗಿದೆ. ಆತ ಸೇಲ್ಸ್ ಪ್ರತಿನಿಧಿ ಸೋಗಿನಲ್ಲಿದ್ದ ಭಯೋತ್ಪಾದಕನೇ ? ಇತ್ಯಾದಿ ಶೀರ್ಷಿಕೆಗಳ ಸುದ್ದಿ ಪ್ರಸಾರ ಮಾಡಿಬಿಟ್ಟಿತು. ಸಾಲದ್ದಕ್ಕೆ #terrordryrun ಎಂಬ ಹ್ಯಾಶ್ ಟ್ಯಾಗ್ ಕೂಡ ಬಳಸಿತ್ತು.  ಈ ಸುಳ್ಳು ಸುದ್ದಿಗಳು ಮಿಂಚಿನ ವೇಗದಲ್ಲಿ ವಾಟ್ಸ್ಆ್ಯಪ್ ನಲ್ಲಿ ಹರಡಿದವು.

ಆದರೆ ಮಂಗಳೂರು ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್  ಅವರು " ಅದು  ಪವರ್ ಬ್ಯಾಂಕ್. ಸಮಗ್ರ ವಿಚಾರಣೆ ಬಳಿಕ ವಿಷಯ ಸ್ಪಷ್ಟವಾಗಿ ಪ್ರಯಾಣಿಕನನ್ನು ಪ್ರಯಾಣ ಮುಂದುವರಿಸಲು ಬಿಡಲಾಯಿತು" ಎಂದು ಹೇಳಿಕೆ ನೀಡಿದ್ದಾರೆ ಎಂದು ಎಎನ್ಐ ವರದಿ ಮಾಡಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News