ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬಂದ ಮೆಸ್ಕಾಂ ಜೆ.ಇ.ಗೆ ಬೆದರಿಕೆ
ಕೊಣಾಜೆ,ಸೆ.21: ವಿದ್ಯುತ್ ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಳಿಸಲು ಕರ್ತವ್ಯ ನಿಮಿತ್ತ ತೆರಳಿದ್ದ ಮುಡಿಪು ಮೆಸ್ಕಾಂ ಕಿರಿಯ ಅಭಿಯಂತರರಿಗೆ ಗ್ರಾಮ ಪಂಚಾಯತ್ ಸದಸ್ಯರೋರ್ವರು ಬೆದರಿಕೆಯೊಡ್ಡಿದ ಘಟನೆ ಗುರುವಾರ ನಡೆದಿದ್ದು ಈ ಬಗ್ಗೆ ಮೆಸ್ಕಾಂ ಸಿಬ್ಬಂದಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ನಂದರರಾಜ್ ಶೆಟ್ಟಿ ಎಂಬವರರೇ ಬೆದರಿಕೆಯೊಡ್ಡಿದ ವ್ಯಕ್ತಿಯಾಗಿದ್ದಾರೆ. ಇವರಿಗೆ ನಡುಪದವು ಇಂಜಿನಿಯರಿಂಗ್ ಕಾಲೇಜ್ ಬಳಿ ಲಾಡ್ಜ್ ಇದ್ದು ಇದರ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಗುರುವಾರ ಮೆಸ್ಕಾಂನ ಮಿಥುನ್ ರಾಜ್ ಸಹದ್ಯೋಗಿ ಜೊತೆ ತೆರಳಿ ಸಂಪರ್ಕ ಕಡಿತಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭ ಮಿಥುನ್‍ರಾಜ್ ಅವರಿಗೆ ಕರೆ ಮಾಡಿದ ಆರೋಪಿ ವಿದ್ಯುತ್ ಕಡಿತಗೊಳಿಸಿದರೆ ಕೈಕಾಲು ಮುರಿಯುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ನಂತರ ಬೈಕ್‍ನಲ್ಲಿ ತೆರಳಿದ ಮಿಥುನ್‍ರಾಜ್ ಅರ್ಕಾಣ ಬಳಿ ತಲುಪಿದಾಗ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿ ಬೈಕ್‍ಗೆ ಡಿಕ್ಕಿಹೊಡೆದು ಅಡ್ಡಹಾಕಿದ್ದಲ್ಲದೆ, ಬೆದರಿಕೆ ಹಾಕಿ ತೆರಳಿದ್ದು ಮಾತ್ರವಲ್ಲದೆ ಘಟನೆಯಲ್ಲಿ ಬೈಕ್‍ಗೆ ಹಾನಿಯಾಗಿದೆ ಎಂದು ದೂರಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.