ನಿಯಮ ಮೀರಿ ಮದ್ಯದಂಗಡಿ: ಕ್ರಮಕ್ಕೆ ಒತ್ತಾಯ

Update: 2017-09-22 15:41 GMT

ಮಂಗಳೂರು, ಸೆ. 22: ಮುಲ್ಕಿ ಲಿಂಗಪ್ಪಯ್ಯನ ಕಾಡು ಸುತ್ತಮುತ್ತಲಿನ ಪರಿಸರದಲ್ಲಿ ವೈನ್‌ಶಾಪ್‌ಗಳು ತೆರೆದುಕೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಶಾಲೆ, ಮಸೀದಿ ಇರುವಲ್ಲೇ ಮದ್ಯದಂಗಡಿ ತೆರೆಯಲಾಗಿದೆ. ಮದ್ಯ ಸೇವಿಸಿ ಮನೆಗಳ ಗೇಟ್, ಕಂಪೌಂಡ್ ಗೋಡೆಗಳ ಬಳಿ ಗಲೀಜು ಮಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸುವಂತೆ ಸಾರ್ವಜನಿಕರೊಬ್ಬರು ದೂರಿಕೊಂಡರು.

ಶುಕ್ರವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ದೂರು ಕೇಳಿ ಬಂದಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಮಾತನಾಡಿ, ಮದ್ಯದಂಗಡಿಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಪರಿಶೀಲಿಸಲಾಗುವುದು. ಅಬಕಾರಿ ಅಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದು ಹೇಳಿದರು.

ಕೇಮಾರು, ಹೊಸಬೆಟ್ಟು ಪರಿಸರದಲ್ಲಿ ಕಳ್ಳ ಭಟ್ಟಿ ಸಾರಾಯಿ ದಂಧೆ, ಅಕ್ರಮ ಕೋಳಿ ಅಂಕ ನಡೆಯುತ್ತಿದೆ ಎಂದು ಬಂದ ದೂರಿನ ಪ್ರತಿಕ್ರಿಯಿಸಿದ ಕಮಿಷನರ್, ಕೂಡಲೇ ತಪಾಸಣೆ ನಡೆಸುವಂತೆ ಆ ವ್ಯಾಪ್ತಿಯ ಪೊಲೀಸರಿಗೆ ಸೂಚಿಸುವುದಾಗಿ ಹೇಳಿದರು.

ನಾಗುರಿಯಲ್ಲಿ ನೂತನ ಪೊಲೀಸ್ ಠಾಣೆ (ಕಂಕನಾಡಿ ನಗರ ಮತ್ತು ಸಂಚಾರ ದಕ್ಷಿಣ) ಸ್ಥಾಪನೆಯಾದ ಸ್ಥಳದಲ್ಲಿ ವಾಹನ ಪಾರ್ಕಿಂಗ್‌ನಿಂದಾಗಿ ತೊಂದರೆಯಾಗಿದೆ ಎಂದು ಸ್ಥಳೀಯರೊಬ್ಬರು ದೂರಿದರು. ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿದ ಯುವಕ ಆಕೆಯನ್ನು ಗರ್ಭಿಣಿಯಾಗಿಸಿದ್ದಲ್ಲದೆ ಈಗ ಮದುವೆಗೆ ನಿರಾಕರಿಸಿ ಬೆದರಿಕೆ ಹಾಕುತ್ತಿರುವ ಪ್ರಕರಣ ಬಗ್ಗೆ ಯುವತಿ ತಾಯಿ ಕಮಿಷನರ್‌ಗೆ ದೂರು ನೀಡಿದರು.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಸಂಬಂಧ ಪಟ್ಟ ಕಂಕನಾಡಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ಡಿಸಿಪಿ ಹನುಮಂತರಾಯ, ಸಂಚಾರ ವಿಭಾಗದ ಎಸಿಪಿ ತಿಲಕ್‌ಚಂದ್ರ, ಎಎಸ್‌ಐ ಯೂಸುಫ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಅವರು ಉಪಸ್ಥಿತರಿದ್ದರು.

ಸಾರ್ವಜನಿಕರಿಂದ ಬಂದ ದೂರುಗಳು: ಅತ್ತಾವರದ ಒಂದು ಕಡೆ ರಸ್ತೆ ಪೂರ್ತಿ ರಿಕ್ಷಾ ಪಾರ್ಕಿಂಗ್ ಮಾಡಲಾಗುತ್ತಿದ್ದು, ಇತರ ವಾಹನಗಳು, ಸಾರ್ವಜನಿಕರಿಗೆ ಸಂಚರಿಸಲು ಅಸಾಧ್ಯವಾಗಿದೆ.

*ಮೋರ್ಗನ್ಸ್‌ಗೇಟ್ ರೈಲ್ವೇ ಗೇಟ್ ಬಳಿ ಗಾಂಜಾ ಮಾರಾಟ ವ್ಯವಹಾರ ನಡೆಯುತ್ತಿದೆ.

* ವಾಮಂಜೂರು ಮಾರ್ಗವಾಗಿ ಸಂಚರಿಸುವ ಕೆಲವು ಬಸ್ಸುಗಳಲ್ಲಿ ಟಿಕೆಟ್ ನೀಡುತ್ತಿಲ್ಲ.

* ನಗರದಲ್ಲಿ ನಂಬರ್ ಪ್ಲೇಟ್ ಇಲ್ಲದೆ ಅನಧಿಕೃತವಾಗಿ ಕೆಲವು ವಾಹನಗಳು ಓಡಾಡುತ್ತಿವೆ.

* ತೊಕ್ಕೋಟು- ಕೊಣಾಜೆ ರಸ್ತೆಯ ಪಂಡಿತ್‌ಹೌಸ್ ತಂಗುದಾಣದ ಬಳಿ ಬೆಳಗ್ಗೆ ಮತ್ತು ಸಂಜೆ ವಾಹನಗಳ ದಟ್ಟಣೆಯಿಂದ ರಸ್ತೆ ದಾಟಲು ಕಷ್ಟವಾಗುತ್ತಿದೆ.

*ಕೊಟ್ಟಾರ- ಕೂಳೂರು ರಸ್ತೆಯಲ್ಲಿ ಬಸ್‌ಗಳು ನಿಗದಿತ ತಂಗುದಾಣದ ಬದಲು ರಸ್ತೆಯಲ್ಲಿಯೇ ನಿಲ್ಲುತ್ತವೆ.

* ಕೋಡಿಕಲ್‌ಗೆ ಹೋಗುವ 61 ನಂಬ್ರದ ಒಂದು ಬಸ್ ರವಿವಾರ ಸಂಚರಿಸುತ್ತಿಲ್ಲ.

*ಕಾವೂರಿನಲ್ಲಿ ಶೌಚಾಲಯ ವ್ಯವಸ್ಥೆಯನ್ನು ಒಳಗೊಂಡಿರುವ ಸುಸಜ್ಜಿತ ಬಸ್ ನಿಲ್ದಾಣ ಬೇಕು.

* ಉಳಾಯಿಬೆಟ್ಟು ರಸ್ತೆಯಲ್ಲಿ ಕೆಲವು ಜನರು ಖಾಸಗಿಯಾಗಿ ಅನಧಿಕೃತವಾಗಿ ಹಂಪ್ ಹಾಕಿಸಿದ್ದಾರೆ.

* ಕದ್ರಿ ಇ.ಎಸ್.ಐ. ಆಸ್ಪತ್ರೆ ಮಾರ್ಗವಾಗಿ ಸಂಚರಿಸುತ್ತಿದ್ದ ಏಕೈಕ ಸಿಟಿ ಬಸ್ಸು ಮಾರ್ಗ ಬದಲಾಯಿಸಿ ಸಂಚರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News