ಉನ್ನತ ಗುರಿಯೊಂದಿಗೆ ಪ್ರಾಮಾಣಿಕತೆ, ನೈತಿಕತೆಯಿರುವ ಯುವ ಇಂಜಿನಿಯರ್ ಗಳ ಅಗತ್ಯವಿದೆ : ಡಾ. ಸಾದಿಕ್ ಸೇಟ್

Update: 2017-09-24 05:37 GMT

ಮಂಗಳೂರು, ಸೆ. 23: ಉನ್ನತ ಗುರಿಯೊಂದಿಗೆ ಪ್ರಾಮಾಣಿಕ ಹಾಗೂ ನೈತಿಕತೆಯೊಂದಿಗೆ ಕಾರ್ಯನಿರ್ವಹಿಸುವ ಯುವ ಇಂಜಿನಿಯರ್ ಗಳ ಸೇವೆ ಅಗತ್ಯವಿದೆ ಎಂದು ಸೌದಿ ಅರೇಬಿಯಾದ ಕಿಂಗ್ ಫಹದ್‌ ಯುನಿವರ್ಸಿಟಿ ಆಫ್ ಪೆಟ್ರೋಲಿಯಂ ಮಿನರಲ್ಸ್‌ನ ಸೆಂಟರ್ ಫಾರ್ ಎಲೆಕ್ಟ್ರಾನಿಕ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಸಿಸ್ಟಮ್ಸ್ ರಿಸರ್ಚ್ ಇನ್‌ಸ್ಟಿಟ್ಯೂಶನ್‌ನ ನಿರ್ದೇಶಕ ಡಾ. ಸಾದಿಕ್ ಸೇಟ್ ತಿಳಿಸಿದ್ದಾರೆ.

ಮಂಗಳೂರಿನ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಬಿಐಟಿ) 5ನೆ ಘಟಿಕೋತ್ಸವ ಸಮಾರಂಭದಲ್ಲಿ ಅವರು ಇಂದು ಘಟಿಕೋತ್ಸವ ಭಾಷಣದಲ್ಲಿ ತಿಳಿಸಿದ್ದಾರೆ.

ಯಾವುದೇ ಕ್ಷೇತ್ರದಲ್ಲಿ ಯಶಸ್ಸುಗಳಿಸಬೇಕಾದರೆ ಸತತ ಪ್ರಯತ್ನ, ಸರಿಯಾದ ಯೋಜನೆಯನ್ನು ರೂಪಿಸಿ ಕಾರ್ಯಪ್ರವೃತ್ತರಾಗುವುದು ಮುಖ್ಯ. ವಿದ್ಯಾರ್ಥಿಯ ಬದುಕನ್ನು ರೂಪಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರದಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಸಂದರ್ಭದಲ್ಲಿ ಯಾವ ರೀತಿಯ ಸೇವೆಯನ್ನು ನಾವು ಸಮಾಜಕ್ಕೆ ನೀಡುತ್ತೇವೆ ಎನ್ನುವುದು ಮುಖ್ಯ ಎಂದು ಡಾ. ಸಾದಿಕ್ ಸೇಟ್ ಬಿಐಟಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕ ಡಾ.ಕೆ.ಉಮಾಮಹೇಶ್ವರ ರಾವ್ ಮಾತನಾಡುತ್ತಾ, ಯುವ ಇಂಜಿನಿಯರ್ ಗಳ ಮಾನವೀಯ ನೆಲೆಯೊಂದಿಗೆ ದೇಶಕ್ಕೆ ಸೇವೆ ಸಲ್ಲಿಸುವ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಯುವ ಇಂಜಿನಿಯರ್‌ಗಳು ಶೈಕ್ಷಣಿಕವಾಗಿ ಜ್ಞಾನ ಸಂಗ್ರಹದೊಂದಿಗೆ ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಎತ್ತರಕ್ಕೆ ಬೆಳೆಯಬೇಕಾಗಿದೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸುಗಳಿಸಬೇಕಾದರೆ ದೇಶದ ಪ್ರಗತಿಯ ಬಗ್ಗೆ ಯೋಚಿಸಿದಾಗಲೂ ಪ್ರತಿಯೊಬ್ಬ ವ್ಯಕ್ತಿಯೂ ಮುಖ್ಯನಾಗುತ್ತಾನೆ. ಯಾರ ಸಾಮರ್ಥ್ಯವನ್ನೂ ಕೀಳೆಂದು ಬಾವಿಸಬಾರದು. ಹಲವು ಬಾರಿ ನಮ್ಮ ನಿರೀಕ್ಷೆಗೂ ಮೀರಿ ನಾವು ಸಾಮಾನ್ಯರಲ್ಲಿ ಸಾಮಾನ್ಯರೆಂದು ಭಾವಿಸಿರುವ ವ್ಯಕ್ತಿಗಳು ತಮ್ಮ ಸ್ವ ಸಾಮರ್ಥ್ಯದಿಂದ ಬೆಳಕಿಗೆ ಬರುತ್ತಾರೆ. ಸಾಮೂಹಿಕ ಪ್ರಯತ್ನದಿಂದ ಒಂದು ಗುರಿಯನ್ನು ತಲುಪುವುದು ಸಾಧ್ಯ. ಎಲ್ಲರೂ ಎಲ್ಲಾ ಕ್ಷೇತ್ರದಲ್ಲಿ ಪರಿಣತರಾಗಿರಲು ಸಾಧ್ಯವಿಲ್ಲ ಮತ್ತು ಎಲ್ಲಾ ಕೆಲಸವನ್ನು ಒಬ್ಬನಿಂದಲೇ ಮಾಡಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಯತ್ನದ ಮೂಲಕ ಒಂದು ಗುರಿಯನ್ನು ತಲುಪಬೇಕಾದರೆ ನಮ್ಮ ಮುಂದಿನ ಗುರಿ ಏನು ಎನ್ನುವ ಬಗ್ಗೆ ಸ್ಪಷ್ಟತೆ ಇರಬೇಕು. ವ್ಯಕ್ತಿಗತವಾಗಿ ನಮ್ಮ ಗುರಿಯೂ ಸ್ಪಷ್ಟವಾಗಿದ್ದಾಗ ಭವಿಷ್ಯ ಉಜ್ವಲ ವಾಗಬಹುದು. ಬದಲಾಗಿರುವ ಕಾಲಘಟ್ಟದಲ್ಲಿ ನಗರದ ಉದ್ಯಮ ಕ್ಷೇತ್ರದಲ್ಲಿ ನಾವು ಮಾಡುವ ತಪ್ಪುಗಳಿಗೆ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾದೀತು. ಇಂಜಿನಿಯರ್‌ಗಳ ತಪ್ಪುಗಳು ಏನಿದೆ ಎಂದು ಹುಡುಕಿ ಅದಕ್ಕೆ ದಂಡ ಹಾಕುವ ಕಾಲಘಟ್ಟದಲ್ಲಿ ನಾವಿರುವುದರಿಂದ ಈ ಬಗ್ಗೆ ಯುವ ಇಂಜಿನಿಯರ್ ಗಳು ಎಚ್ಚರದಿಂದ ಇರಬೇಕಾಗಿದೆ ಎಂದು ಉಮಾಮಹೇಶ್ವರ ರಾವ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಶ್ನೈಡರ್ ಇಲೆಕ್ಟ್ರಿಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಭಾರತ್ ಎಚ್.ಆರ್. ಸರ್ವಿಸೆಸ್ ಗ್ಲೋಬಲ್ ಹಬ್‌ನ ಉಪಾಧ್ಯಕ್ಷ ಶ್ರೀನಿವಾಸ ಶೂರಪಾಣಿ, ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಕೌಶಲ್ಯದೊಂದಿಗೆ ಉದ್ಯಮ ಕ್ಷೇತ್ರದಲ್ಲಿ ಹೇಗೆ ಮುಂದುವರಿಯಬಹುದು ಎಂದು ಮಾಹಿತಿ ನೀಡಿದರು.

ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಯುವ ಇಂಜಿನಿಯರ್ ಗಳು ತಮ್ಮ ಮುಂದಿನ ಬದುಕಿನಲ್ಲಿ ಯಶಸ್ಸುಗಳಿಸಲು ಉತ್ತಮ ಗುಣ ನಡತೆ, ವೃತ್ತಿ ಕೌಶಲ್ಯ ಮತ್ತು ತಮ್ಮ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ. ಇತರರಿಗೆ ಸಹಾಯವಾಗುವ ಮೂಲಕ ತಾವು ತಮ್ಮ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುವಂತಾಗಬೇಕು ಎಂದು ಶುಭ ಹಾರೈಸಿದರು.

ಘಟಿಕೋತ್ಸವದಲ್ಲಿ 180 ಇಂಜಿನಿಯರಿಂಗ್ ಪದವೀಧರರಿಗೆ (ಬಿ.ಇ) ಪದವಿ ಪ್ರದಾನ ಮಾಡಲಾಯಿತು. ಮುಹಮ್ಮದ್ ಫಾಸಿಲ್, ಮುಹಮ್ಮದ್ ಶೆನಾಝ್, ಆಯಿಷಾ ಫರ್ಹಾನಾ, ರಿಝ್ಮಾ ಬಾನು, ಇಂಚರ ಮೊದಲಾದವರನ್ನು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳೆಂದು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಡಾ. ಅಝೀಝ್ ಮುಸ್ತಫಾ ಪ್ರಮಾಣ ವಚನ ಬೋಧಿಸಿದರು, ಹಾಜಿ ಮಾಸ್ಟರ್ ಮೆಹಮೂದ್, ಬಿಐಟಿಯ ಹಿರಿಯ ಸಲಹೆಗಾರ ಡಾ.ಎಸ್.ಕೆ. ರಾಯ್ಕರ್, ಬಿಎಎಲ್‌ನ ಟ್ರಸ್ಟಿ ಹಾಜಿ ಮುಹಮ್ಮದ್, ಮಝರ್ ಎಸ್.ಬ್ಯಾರಿ, ವಿವಿಧ ವಿಭಾಗಗಳ ಡೀನ್‌ಗಳಾದ ಪ್ರೊ. ಪುರುಷೋತ್ತಮ,  ಪ್ರೊ.ಅಬ್ದುಲ್ಲಾ, ಪ್ರೊ. ವಿವೇಕಾನಂದ, ಬೀಡ್ಸ್ ಪ್ರಾಂಶುಪಾಲ ಪ್ರೊ. ಭಾವಿಶ್ ಮೆಹ್ತಾ ಮೊದಲಾದವರು ಉಪಸ್ಥಿತರಿದ್ದರು.

ಬಿಐಟಿಯ ಪ್ರಾಂಶುಪಾಲ ಡಾ.ಆ್ಯಂಟನಿ ಎ.ಜೆ. ಸ್ವಾಗತಿಸಿದರು. ಪ್ರೊ.ಮುಸ್ತಫಾ ಬಸ್ತಿಕೋಡಿ ವಂದಿಸಿದರು. ವಿದ್ಯಾರ್ಥಿಗಳಾದ ರುಕ್ಸಾನಾ ಹಾಗೂ ಝುಲ್ಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News