ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಪುನ:ಶ್ಚೇತನ: ಪ್ರಮೋದ್ ಮಧ್ವರಾಜ್

Update: 2017-09-23 15:29 GMT

ಉಡುಪಿ, ಸೆ.23: ಸ್ಥಗಿತಗೊಂಡು ಹಲವು ವರ್ಷ ಕಳೆದಿರುವ ಕರಾವಳಿ ಭಾಗದ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾದ ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನ:ಶ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನ:ಶ್ಚೇತನಗೊಳಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಪ್ರಸ್ತುತ ಇರುವ ಕಾರ್ಖಾನೆಯ ಕಟ್ಟಡ ಹಾಗೂ ಯಂತ್ರೋಪಕರಣಗಳನ್ನು ಉಳಿಸಿಕೊಂಡು ಪುನರಾರಂಭಿಸುವ ಸಾಧ್ಯತೆ ಕುರಿತು ಹಾಗೂ ಹಳೆಯ ಕಟ್ಟಡದ ಬದಲು ಹೊಸ ಕಟ್ಟಡ ನಿರ್ಮಾಣ, ಆಧುನಿಕ ಯಂತ್ರೋಪಕರಣಗಳ ಅಳವಡಿಕೆ ಮಾಡುವ ಕುರಿತಂತೆ ತಜ್ಞರ ವರದಿ ಸಿದ್ದಪಡಿಸಿಕೊಂಡು, ಇವುಗಳಿಗೆ ತಗಲುವ ಹಣಕಾಸಿನ ವೆಚ್ಚದ ಕುರಿತಂತೆ ಚರ್ಚಿಸಲು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ಯುವುದಾಗಿ ಸಚಿವರು ತಿಳಿಸಿದರು.

ಕಾರ್ಖಾನೆ ಪುನ:ಶ್ಚೇತನ ಕುರಿತಂತೆ ಶುಗರ್ ಫೆಡರೇಷನ್ ಹಾಗೂ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುವ ತಜ್ಞರ ನೇತೃತ್ವದಲ್ಲಿ ವಿಸ್ತೃತ ವರದಿ ತಯಾರಿಸಿ ಆ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಕ್ಕರೆ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸುವಂತೆಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರಿಗೆ ಸೂಚಿಸಿದ ಸಚಿವರು, ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯವನ್ನು ಪ್ರತಿ ದಿನಕ್ಕೆ 1,500 ಮೆಟ್ರಿಕ್ ಟನ್‌ಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಕಾರ್ಖಾನೆಯಲ್ಲಿ ರುವ ಹಳೆಯ ಉಪಯೋಗಕ್ಕೆ ಬಾರದ ಉಪಕರಣಗಳನ್ನು ಹರಾಜು ಮೂಲಕ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು.

ಹಲವಾರು ವರ್ಷ ತನ್ನ ನೇತೃತ್ವದಲ್ಲಿ ಕಾರ್ಖಾನೆಯನ್ನು ನಡೆಸಿ ಅನುಭವ ಹೊಂದಿರುವ ರಾಜ್ಯಸಭಾಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ವಾರಾಹಿ ಯೋಜನೆ ಅನುಷ್ಠಾನಗೊಳ್ಳದೇ, ಅದರ ನೀರಿನ ಬಳಕೆಗೆ ದೊರೆಯದ ಸಮಯದಲ್ಲಿ ಈ ಕಾರ್ಖಾನೆ ನಡೆದಿದೆ. ಈಗ ವರಾಹಿ ನೀರಿನ ಪ್ರಯೋಜನ ದೊರೆಯುತ್ತಿರುವುದರಿಂದ ಕಬ್ಬು ಬೆಳೆಯಲು ಸಾಧ್ಯವಿದೆ. ಪ್ರಸ್ತುತ ವಾರಾಹಿ ಯೋಜನೆಯಿಂದ 3,800 ಎಕ್ರೆಗೆ ನೀರಾವರಿ ಸೌಲ್ಯ ದೊರೆತಿದೆ ಎಂದರು.

ಕಾರ್ಖಾನೆ ಪುನ:ಶ್ಚೇತನಕ್ಕೆ ಅಗತ್ಯವಿರುವ ಹಣಕ್ಕಾಗಿ ಕಾರ್ಖಾನೆಯ 25 ಎಕರೆ ಪ್ರದೇಶವನ್ನು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕಾಗಿ ಸರಕಾರಕ್ಕೆ ಮಾರಾಟ ಮಾಡಿ ಆದಾಯ ಕ್ರೊಡೀಕರಣ ಮಾಡಬಹುದು. ಸಕ್ಕರೆ ಕಾರ್ಖಾನೆ ವರ್ಷದ 10 ತಿಂಗಳು ಕಾರ್ಯ ನಿರ್ವಹಿಸುವಂತೆ ಯೋಜನೆ ರೂಪಿಸಿ, ನೀರಾವರಿ ಸೌಲಭ್ಯ ಇರುವ ಕಾರಣ ರೈತರು ವರ್ಷ ಪೂರ್ತಿ ಕಬ್ಬು ಬೆಳೆಯಲು ಸಾಧ್ಯ ಎಂದು ಹೇಳಿದರು.

ಭಾರತೀಯ ಕಿಸಾನ್ ಘಟಕದ ಅಧ್ಯಕ್ಷ ಬಿ.ವಿ.ಪೂಜಾರಿ ಮಾತನಾಡಿ, ಸರಕಾರ ಕಬ್ಬಿಗೆ ಕ್ವಿಂಟಾಲ್‌ಗೆ ಕನಿಷ್ಠ 3,000 ರೂ. ಬೆಂಬಲ ಬೆಲೆ ಘೋಷಣೆ ಮಾಡಿ, ಕಬ್ಬು ಲಾಭದಾಯಕ ಎಂಬ ಭಾವನೆಯನ್ನು ರೈತರಲ್ಲಿ ಮೂಡಿಸಬೇಕು. ಜಿಲ್ಲೆಯಲ್ಲಿ ಹಡಿಲು ಬಿದ್ದಿರುವ ಗದ್ದೆಗಳಲ್ಲೂ ಕಬ್ಬು ಬೆಳೆಯಲು ರೈತರು ಸಿದ್ದರಿದ್ದಾರೆ ಎಂದರು.

ಪ್ರಸ್ತುತ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷ ಜಯಶೀಲ ಶೆಟ್ಟಿ ಮಾತನಾಡಿ, ವಾರಾಹಿ ಯೋಜನೆಯ ಹಿನ್ನಡೆಯಿಂದಾಗಿ ಕಾರ್ಖಾನೆ ಸ್ಥಗಿತ ಗೊಂಡಿದ್ದು, ಇದೀಗ ವಾರಾಹಿ ಯೋಜನೆಯಿಂದ ನೀರಾವರಿ ಸೌಲ್ಯ ದೊರೆಯುತ್ತಿದ್ದು ಸಾಕಷ್ಟು ಕಬ್ಬು ಬೆಳೆಯಲು ಸಾದ್ಯವಿದೆ. ಸರಕಾರ ಅರ್ಥಿಕ ನೆರವು ನೀಡಿದರೆ ಕಾರ್ಖಾನೆ ಪ್ರಾರಂಭಿಸಲು ಸಾಧ್ಯವಿದೆ. ಕಾರ್ಖಾನೆಯ ಪುನ:ಶ್ಚೇತನಕ್ಕೆ 24 ಕೋಟಿ ರೂ.ಗಳ ಅಂದಾಜು ವರದಿ ಹಾಗೂ ವಿಸ್ತರಣೆಗಾಗಿ 60 ಕೋಟಿ ರೂ. ಮೊತ್ತದ ಅಂದಾಜು ವರದಿಯನ್ನು ತಜ್ಞರಿಂದ ಸಿದ್ದಪಡಿಸಲಾಗಿದೆ. ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಕುರಿತಂತೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತರು ವರದಿ ನೀಡಿದ್ದು, ಕೃಷಿ ಇಲಾಖೆ ಯಿಂದಲೂ ಸಹ ಪೂರಕ ಆಭಿಪ್ರಾಯ ವ್ಯಕ್ತವಾಗಿದೆ ಎಂದರು.

ಈ ಹಿಂದೆ ಸಕ್ಕರೆ ಕಾರ್ಖಾನೆಯ ಜಾಗದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿವಿ, ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ಬಳಸಲು ಮಾತ್ರ ಚಿಂತಿಸಿದ್ದು, ರೈತರ ಅಭಿವೃದ್ದಿಗಾಗಿ ನೀಡಿರುವ ಈ ಪ್ರದೇಶವನ್ನು ಕೈಗಾರಿಕಾ ಇಲಾಖೆಗೆ ನೀಡುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಸಚಿವ ಪ್ರಮೊೀದ ಮಧ್ವರಾಜ್ ಸ್ಪಷ್ಟಪಡಿಸಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಸಹಕಾರ ಇಲಾಖೆಯ ಉಪ ನಿಬಂಧಕ ಪ್ರವೀಣ್ ನಾಯಕ್, ವಾರಾಹಿ ಮುಖ್ಯ ಇಂಜಿನಿಯರ್ ಪದ್ಮನಾಭ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಕಬ್ಬು ಬೆಳೆದರೆ ನಷ್ಟವಿಲ್ಲ
ಭತ್ತದ ಬೆಳೆಗೆ ಬಳಸುವ ನೀರಿನ ಅರ್ಧದಷ್ಟು ನೀರಿನಲ್ಲಿ ಕಬ್ಬು ಬೆಳೆಯ ಬಹುದಾಗಿದೆ. ಸಕ್ಕರೆ ಕಾರ್ಖಾನೆ ನಡೆಯಲು ಅಗತ್ಯವಿರುವಷ್ಠು ಕಬ್ಬನ್ನು ಜಿಲ್ಲೆಯ ರೈತರು ಬೆಳೆದೇ ಬೆಳೆಯುತ್ತಾರೆ. ಕಾರ್ಖಾನೆ ಇದ್ದಲ್ಲಿ ಕಬ್ಬು ಬೆಳೆಗಾರರು ನಷ್ಠ ಅನುಭವಿಸಲು ಸಾಧ್ಯವೇ ಇಲ್ಲ.
-ಸತ್ಯನಾರಾಯಣ ಉಡುಪ, ಭಾಕಿಸಂನ ಪ್ರಧಾಕಾರ್ಯದರ್ಶಿ

ಸಕಾಲದಲ್ಲಿ ಕಬ್ಬಿನ ಹಣ ನೀಡಿ

2,800 ರೈತರು ಈಗಾಗಲೇ ಕಬ್ಬು ಬೆಳದು ಕಾರ್ಖಾನೆಗೆ ಪೂರೈಸುವುದಾಗಿ ಒಪ್ಪಿಗೆ ಪತ್ರ ನೀಡಿದ್ದಾರೆ. ಕಾರ್ಖಾನೆಯೊಂದಿಗೆ ರೈತರು ಹೊಂದಿರುವ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕಾರ್ಖಾನೆಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಿ, ಕಬ್ಬು ಬೆಳೆಯುವ ರೈತರಿಗೆ ಸಕಾಲದಲ್ಲಿ ಹಣ ಪೂರೈಸುವ ವ್ಯವಸ್ಥೆ ಆಗಬೇಕು.
-ಪ್ರತಾಪಚಂದ್ರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ.

ತುಂಬಾ ಸಂತೋಷವಾಗಿದೆ
ಇಂದಿನ ಸಭೆಯಲ್ಲಿ ಸಚಿವರು ಹಾಗೂ ಐದು ವರ್ಷಗಳ ಕಾಲ ಕಾರ್ಖಾನೆಯ ಅಧ್ಯಕ್ಷರಾಗಿದ್ದ ಆಸ್ಕರ್ ಫೆರ್ನಾಂಡೀಸ್ ತೆಗೆದುಕೊಂಡ ನಿರ್ಧಾರದಿಂದ ತುಂಬಾ ಖುಷಿಯಾಗಿದೆ. ನಾವೀಗ ತುಂಬಾ ಹುಮ್ಮಸ್ಸಿನಲ್ಲಿದ್ದೇವೆ. ಕಾರ್ಖಾನೆಯನ್ನು ಮತ್ತೆ ತೆರೆಯುವ ಉತ್ಸಾಹ ಆಡಳಿತ ಮಂಡಳಿಯಲ್ಲಿ ಹಾಗೂ ರೈತರಲ್ಲಿ ಮತ್ತೆ ಮೂಡಿದೆ.
 -ಎಚ್.ಜಯಶೀಲ ಶೆಟ್ಟಿ, ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News