​ಮೀಟರ್ ಬಡ್ಡಿ ದಂಧೆಗೆ ಪೊಲೀಸರಿಂದ ಕಡಿವಾಣ

Update: 2017-09-23 16:23 GMT

► ಖಾಲಿ ಚೆಕ್‌ಗೆ ಸಹಿ ಹಾಕಬೇಡಿ ► ಭಯಬಿಟ್ಟು ದೂರು ಕೊಡಿ

ಉಡುಪಿ, ಸೆ. 23: ಮೀಟರ್ ಬಡ್ಡಿ ದಂಧೆ ಕಡಿವಾಣಕ್ಕೆ ಪೊಲೀಸ್ ಇಲಾಖೆ ಬದ್ಧವಾಗಿದೆ. ಖಾಲಿ ಚೆಕ್‌ಗೆ ಸಹಿ ಹಾಕಿ ಕೊಟ್ಟು ಸಾಲ ಪಡೆಯಲು ಹೋಗ ಬಾರದು. ನೊಂದಾಯಿತ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳಿಂದಲೇ ಸಾಲ ಪಡೆಯಿರಿ. ಮೀಟರ್ ಬಡ್ಡಿಗೆ ಕಿರುಕುಳ ನೀಡುವವರ ಬಗ್ಗೆ ಯಾವುದೇ ಭಯಪಡದೇ ನಮಗೆ ದೂರು ಕೊಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ.ಪಾಟೀಲ್ ತಿಳಿಸಿದ್ದಾರೆ.

ಸಾರ್ವಜನಿಕರೊಂದಿಗೆ ಎಸ್‌ಪಿ ಡಾ.ಸಂಜೀವ ಪಾಟೀಲ್ ನಡೆಸಿದ ಐದನೇ ವಾರದ ಇಲಾಖಾ ಫೋನ್-ಇನ್ ಕಾರ್ಯಕ್ರಮದಲ್ಲಿ ಶನಿವಾರ ಒಟ್ಟು 25 ಕರೆಗಳು ಬಂದಿದ್ದು, ಇದರಲ್ಲಿ ಸಾಲ ಕೊಟ್ಟು ಮೀಟರ್ ಬಡ್ಡಿ ವಸೂಲಿ ಮಾಡುವ ಕುರಿತಂತೆ ಹಲವು ದೂರುಗಳು ಬಂದವು. ಮೀಟರ್ ಬಡ್ಡಿ ದಂಧೆಯ ಕುರಿತಂತೆ ಫೋನ್-ಇನ್‌ನಲ್ಲೂ ಮಾಹಿತಿ ಕೊಡಬಹುದು. ಆದರೆ ಜನರು ಮೌನವಾಗಿರಬಾರದು. ಅವರು ಭಯಪಡದೇ ದೂರು ನೀಡಲು ಮುಂದೆ ಬರಬೇಕು. ನಿಮ್ಮ ಹಿಂದೆ ನಾವಿದ್ದೇನೆ. ಮೀಟರ್ ಬಡ್ಡಿ ದಂಧೆಕೋರರನ್ನು ಜೈಲಿಗಟ್ಟುತ್ತೇವೆ ಎಂದು ಎಸ್‌ಪಿ ಭರವಸೆ ನೀಡಿದರು.

ಜಿಲ್ಲೆಯ ಸಾರ್ವಜನಿಕರು, ಜನಸಾಮಾನ್ಯರು ಸಹಕರಿಸಿದರೆ ಮಾತ್ರ ಇಂಥ ಯಾವುದೇ ದಂಧೆಗಳನ್ನು ನಿಯಂತ್ರಿಸಲು ಸಾಧ್ಯ. ಮಾಹಿತಿ ಕೊಡಲು ಮುಂದೆ ಬರಬೇಕು. ಯಾರ ಹೆಸರನ್ನೂ ಬಹಿರಂಗಪಡಿಸುವುದಿಲ್ಲ ಎಂದು ಡಾ. ಪಾಟೀಲ್ ಹೇಳಿದರು.
 
ಉಡುಪಿ ಸಹಿತ ಹಲವು ಕಡೆಗಳಲ್ಲಿ ಟ್ರಾಫಿಕ್ ಕಿರಿಕಿರಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಮಸ್ಯೆಗಳು, ಮಲ್ಪೆ ದಕ್ಕೆಯಲ್ಲಿ ಸಿಗರೇಟು ಸೇವನೆ, ಪಡುಬಿದ್ರಿ ಠಾಣೆ ವ್ಯಾಪ್ತಿಯಲ್ಲಿ ದೂರಿನ ಕುರಿತಂತೆ ಆಗದ ಪ್ರಗತಿ, ಕೊಲ್ಲೂರು ಠಾಣೆಯ ಸಿಬಂದಿಗಳ ಆಕ್ಷೇಪಾರ್ಹ ವರ್ತನೆ, ಬಸ್ಸುಗಳಲ್ಲಿ ಮುಂದುವರಿದ ಕರ್ಕಶ ಹಾರನ್‌ಗಳ ಕಾಟ, ಮಟ್ಕಾ, ಬೆಳಗಿನ ಹೊತ್ತು ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಕೂಲಿಕಾರ್ಮಿಕರ ಜಮಾವಣೆ, ಬೈಂದೂರಿನಲ್ಲಿ ಸುಳ್ಳು ಕೇಸು ಹಾಕಿರುವುದು, ಮಿಶನ್ ಆಸ್ಪತ್ರೆ ಬಳಿ ಜುಗಾರಿ, ಕೋಟೇಶ್ವರ ಗ್ರಾಪಂ ಪಕ್ಕದಲ್ಲಿ ಮದ್ಯ ಮಾರಾಟ, ಹೆಬ್ರಿ -ಬ್ರಹ್ಮಾವರ ಬಸ್ಸಿನಲ್ಲಿ ಜನರು ನೇತಾಡಿಕೊಂಡು ಹೋಗುತ್ತಿರುವ ಬಗ್ಗೆ ದೂರುಗಳು ಬಂದವು.

 ಭಿಕ್ಷುಕರ ವಿರುದ್ಧ ಕಾರ್ಯಾಚರಣೆ:  ಉಡುಪಿ ಶ್ರೀಕೃಷ್ಣ ಮಠ ಪರಿಸರದಲ್ಲಿ ಎಲ್ಲಿಂದಲೋ ಬಂದು ಠಿಕಾಣಿ ಹೂಡಿರುವ ಭಿಕ್ಷುಕರ ಕಾಟ ಪ್ರಾರಂಭ ಗೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂಬ ದೂರನ್ನು ಒಬ್ಬರು ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ, ಕೊಲ್ಲೂರಿನಲ್ಲಿ ನಡೆಸಿದಂತೆ ಉಡುಪಿಯಲ್ಲೂ ಭಿಕ್ಷುಕರನ್ನು ತೆರವುಗೊಳಿಸಲು ವಿಶೇಷ ಕಾರ್ಯಾಚರಣೆಯನ್ನು ಕೂಡಲೇ ಆರಂಭಿಸಲಾಗುವುದು ಎಂದರು.

ಅಂಬಲಪಾಡಿ, ಕಟಪಾಡಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಸರ್ವೀಸ್ ರಸ್ತೆಗಳಲ್ಲಿ ಖಾಸಗಿ ವಾಹನ ಪಾರ್ಕಿಂಗ್ ಮಾಡುತ್ತಿರುವ ಬಗ್ಗೆ, ಕಿದಿಯೂರು ಹೊಟೇಲ್ ಎದುರು ಹಾದುಹೋಗುವ ರಸ್ತೆಯಲ್ಲಿ ಕೆಲವರು ವಾಹನ ಪಾರ್ಕ್ ಮಾಡುತ್ತಿದ್ದು, ಇದರಿಂದ ಪಾದಚಾರಿಗಳಿಗೆ, ವಾಹನಗಳಿಗೆ ತೊಂದರೆ ಯಾಗುತ್ತಿದೆ ಎಂಬ ದೂರು ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಭರವಸೆ ನೀಡಿದರು. 

ಇದರೊಂದಿಗೆ ಇತ್ತೀಚೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣವೊಂದನ್ನು ದಾಖಲಿಸಿಕೊಂಡಿರುವುದಕ್ಕೆ ಸಾರ್ವಜನಿಕರೊಬ್ಬರು ಇಲಾಖೆಯನ್ನು ಅಭಿನಂದಿ ಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News