‘ಸಾಹಿತ್ಯದ ಘನ ಉದ್ದೇಶವನ್ನು ಮಾಧ್ಯಮಗಳು ಈಡೇರಿಸುತ್ತಿಲ್ಲ’

Update: 2017-09-23 16:36 GMT

ಉಡುಪಿ, ಸೆ.23: ಸಾಹಿತ್ಯದ ಹಾಗೆ ಮಾಧ್ಯಮಕ್ಕೂ ಅದರದೇ ಆದ ವೈಶಿಷ್ಯಗಳಿವೆ. ಆದರೆ ಇಂದು ಸಾಹಿತ್ಯದ ಘನ ಉದ್ದೇಶವನ್ನು ಮಾಧ್ಯಮ ಗಳು ಈಡೇರಿಸುತ್ತಿಲ್ಲ ಖ್ಯಾತ ಲೇಖಕ, ಹಿರಿಯ ಪತ್ರಕರ್ತ, ಕತೆಗಾರ ಎಸ್. ದಿವಾಕರ ಹೇಳಿದ್ದಾರೆ.

ಸಾಹಿತ್ಯ ಅಕಾಡೆಮಿಯ ಬೆಂಗಳೂರು ಪ್ರಾದೇಶಿಕ ಕೇಂದ್ರ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ವಿವಿ ಹಾಗೂ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಇಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಸಾಹಿತ್ಯ ಮತ್ತು ಮಾಧ್ಯಮಗಳು’ ಒಂದು ದಿನದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಾಹಿತ್ಯ ಮನುಷ್ಯನ ಬುದ್ಧಿ-ಭಾವಕ್ಕೆ ಸಂಬಂಧಿಸಿದ್ದು. ಸಾಹಿತ್ಯದ ಕೇಂದ್ರ ಬಿಂದು ಮನುಷ್ಯನೇ ಆಗಿದ್ದಾನೆ. ಆತನ ಮೂಲಕ ಪ್ರಪಂಚವನ್ನು ಅರ್ಥ ಮಾಡಿ ಕೊಳ್ಳುತ್ತೇವೆ. ಇಂದು ಕೂಡಾ ಬದುಕಿನ ನಿಗೂಢತೆಯನ್ನು ಒಡೆಯಲು ನಮಗಿರುವ ಏಕೈಕ ಮಾರ್ಗ ಸಾಹಿತ್ಯ ಮಾತ್ರ ಎಂದರು.

ದೇಶದಲ್ಲೂ ಇಂದು ವ್ಯಾಪಕವಾಗಿರುವ ಬಡತನವನ್ನು ಏನೆಂದು ಇಂದಿನ ಟಿವಿಗಳ ಮೂಲಕ ನೋಡಿ ತಿಳಿಯಲು ನಿಮಗೆ ಸಾಧ್ಯವಾಗುವುದಿಲ್ಲ. ದೇಶದ ಶೇ.60ರಿಂದ 70ರಷ್ಟು ಜನರ ಬದುಕು ಬವಣೆ ಮಾಧ್ಯಮಗಳಲ್ಲಿ ಬಿಂಬಿತವಾಗುವುದಿಲ್ಲ. ಜೀವನವನ್ನು ನಾವು ಕುವೆಂಪು, ಕಾರಂತ, ಬೇಂದ್ರೆ, ಅಡಿಗರ ಕೃತಿಗಳ ಮೂಲಕ ನಾವು ಅರ್ಥ ಮಾಡಿಕೊಳ್ಳಬಹುದು ಎಂದರು.

ಮಣಿಪಾಲ ವಿವಿ ಕುಲಪತಿ ಡಾ.ಎಚ್.ವಿನೋದ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ. ಮಹಾಲಿಂಗೇಶ್ವರ ಅತಿಥಿಗಳನ್ನು ಸ್ವಾಗತಿಸಿದರು. ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿ ಸದಸ್ಯ ಡಾ.ಜಯಪ್ರಕಾಶ್ ಮಾವಿನಕುಳಿ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ವಂದಿಸಿ, ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸುಚಿತ್ ಕೊೀಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News