ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಯುವಕನ ಅಸಹಜ ಮೃತ್ಯು

Update: 2017-09-23 18:02 GMT

ಮಂಗಳೂರು, ಸೆ. 23: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಸಹಜ ಮೃತ್ಯು ಸಂಭವಿಸಿದೆ. ಪುತ್ತೂರಿನ ಪರಪುಂಜ ನಿವಾಸಿ ಮುಹಮ್ಮದ್ ಶರೀಫ್ (36) ಮೃತರು ಎಂದು ಗುರುತಿಸಲಾಗಿದೆ.

ಕೆಲವು ದಿನಗಳ ಹಿಂದೆ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆಂದು ಹೇಳಲಾಗಿದ್ದು, ಇಂದು ಮಧ್ಯಾಹ್ನ ಆಸ್ಪತ್ರೆಯ ಬಾತ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎನ್ನಲಾಗಿದೆ.

ಮೃತರ ಸಹೋದರ ಆರೋಪ: ಈ ಬಗ್ಗೆ ಪ್ರತಿಕ್ರಿಯಿಸಿದ ಮೃತರ ಸಹೋದರ ಮುಹಮ್ಮದ್ ಎಂಬವರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಹೇಳಿದ್ದಾರೆ.

ಶನಿವಾರ ಮಧ್ಯಾಹ್ನ 2:30ಕ್ಕೆ ನನ್ನ ಸಹೋದರ ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆಂದು ಯಾರೋ ದೂರವಾಣಿ ಕರೆ ಮಾಡಿ ಹೇಳಿದ್ದಾರೆ. ಅದ ರಂತೆ ನಾವು ಸಂಜೆ ಹೊತ್ತಿಗೆ ಬಂದು ನೋಡುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ. ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ. ಆಸ್ಪತ್ರೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬದುಕಿಸುವವರು ಕೊಲೆ ಮಾಡುವುದಿಲ್ಲ: ಯೂನುಸ್‌ - ಮುಹಮ್ಮದ್ ಶರೀಫ್ ರನ್ನು ಆಸ್ಪತ್ರೆಯವರೇ ಕೊಲೆ ಮಾಡಿದ್ದಾರೆಂಬ ಮೃತನ ಸಹೋದರನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಆಸ್ಪತ್ರೆಯ ವ್ಯವಸ್ಥಾಪಕ ಯೂನುಸ್, ವೈದ್ಯರು ರೋಗಿಯನ್ನು ಬದುಕಿಸುತ್ತಾರೆಯೇ ಹೊರತು ಕೊಲೆ ಮಾಡುವುದಿಲ್ಲ. ಶರೀಫ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಪಡೆದ ಬಳಿಕ ಬಾತ್‌ರೂಂನಲ್ಲಿ ನೋಡಿದಾಗ ಜೀವಂತವಾಗಿದ್ದರು. ಕೂಡಲೇ ಇಳಿಸಿ ಬದುಕಿಸುವ ಪ್ರಯತ್ನ ಮಾಡಿದ್ದೇವೆ. ಆದರೂ ಮೃತಪಟ್ಟರು. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News