ಕನ್ನಡದ 50 ಕವನಗಳು ನೇಪಾಳಿ ಭಾಷೆಗೆ ಭಾಷಾಂತರ: ಮನುಬಳಿಗಾರ್‌

Update: 2017-09-24 15:17 GMT

ಮಂಗಳೂರು, ಸೆ. 24: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡದ 50 ಕವನಗಳನ್ನು ನೇಪಾಳಿ ಭಾಷೆಗೆ ಭಾಷಾಂತರ ಮಾಡುವ ಯೋಜನೆಯನ್ನು ಮಾ.31ಕ್ಕೆ ಪೂರ್ಣಗೊಳಿಸಲಾಗುವುದು ಎಂದು ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.

ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಪಾಳದ ಸಾಂಸ್ಕೃತಿಕ ಸಂಘದ ಮನವಿಯಂತೆ ಈ ಭಾಷಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಪ್ರಥಮ ಹಂತದಲ್ಲಿ ಕನ್ನಡದ ಸಾಹಿತಿಗಳ ಇಂಗ್ಲಿಷ್‌ಗೆ ಅನುವಾದಗೊಂಡಿರುವ ಕವನಗಳನ್ನು ಮತ್ತು ನೇಪಾಳದ ದಿಗ್ಗಜರ ಇಂಗ್ಲಿಷ್‌ಗೆ ಅನುವಾದಗೊಂಡಿರುವ ಕವನಗಳ ಅನುವಾದ ನಡೆಯಲಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಈ ಬಾರಿ ಹೊಸತಾಗಿ ಏಳೆಂಟು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪ್ರತಿ ತಿಂಗಳು ಮಹಿಳಾ ಸಾಧಕಿಯರ ಜತೆ ಸಂವಾದ, ಸಹಕಾರ ಮಹಾಮಂಡಳದ ಜತೆಗೂಡಿ ಆರು ಜಿಲ್ಲೆಯಲ್ಲಿ ಕೃಷಿ ಮತ್ತು ಸಹಕಾರಿ ಸಮ್ಮೇಳನ ನಡೆಸಲಾಗಿದೆ. ಅನ್ನದ ಭಾಷೆ ಕನ್ನಡ ಯೋಜನೆಯಂತೆ ಪರಿಷತ್ ಪ್ರತ್ಯೇಕ ಪೋರ್ಟಲ್ ರಚಿಸಿ, ಅದರ ಮೂಲಕ ಕನ್ನಡ ತರಬೇತಿ ನೀಡಿ, ಕಂಪೆನಿಗಳಲ್ಲಿ ಸಣ್ಣ ಮಟ್ಟದ ಉದ್ಯೋಗ ದೊರಕಿಸಿಕೊಡು ಯತ್ನಿಸಲಿದೆ ಎಂದು ಮನುಬಳಿಗಾರ್ ಹೇಳಿದರು.

ಗ್ರಾಮ ಮಟ್ಟದಲ್ಲಿ ಕನ್ನಡ ಭವನಗ್ರಾಮ ಮಟ್ಟದಲ್ಲಿ ದಾನಿಗಳು ಮುಂದೆ ಬಂದು ಜಾಗವನ್ನು ಪರಿಷತ್ ಹೆಸರಿಗೆ ಬರೆದುಕೊಟ್ಟರೆ ಅಲ್ಲಿ ಕನ್ನಡ ಭವನ ನಿರ್ಮಿಸಲು ಪರಿಷತ್ 15 ಲಕ್ಷ ರೂ. ಅನುದಾನ ನೀಡಲಿದೆ. ದಾನಿಗಳು ಸೂಚಿಸುವ ಆ ಊರಿನ ಅಥವಾ ಊರಿನ ಸಾಹಿತಿಗಳ ಹೆಸರನ್ನು ಆ ಕನ್ನಡ ಭವನಕ್ಕೆ ಇಡಲಾಗುವುದು. ಇದಕ್ಕೆ 14 ಪ್ರಸ್ತಾಪಗಳು ಬಂದಿವೆ. ಈ ಪೈಕಿ 7 ಪ್ರಸ್ತಾಗಳನ್ನು ಸರಕಾರಕ್ಕೆ ಕಳುಹಿಸಲಾಗಿದ್ದು, ಉಳಿದವು ಮುಂದಿನ ವಾರದಲ್ಲಿ ಕಳುಹಿಸಲಾಗುವುದ ಎಂದವರು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಶತಮಾನೋತ್ಸವ ಭವನ ಕಾಮಗಾರಿ ಮುಗಿದಿದ್ದು, ಅಕ್ಟೋಬರ್‌ನಲ್ಲಿ ಸಿಎಂ ಉದ್ಘಾಟಿಸಲಿದ್ದಾರೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಭಾರತವಾಣಿ ಕಾರ್ಯಕ್ರಮದ ಮೂಲಕ ಕನ್ನಡ ಸಾಹಿತ್ಯ ಪರಿಷತ್‌ನ ಆಯ್ಕ 150 ಕೃತಿಗಳ ಡಿಜಿಟಲೈಸೇಶನ್ ನಡೆಸಲು ಒಡಂಬಡಿಕೆ ನಡೆದಿದೆ. ಕನ್ನಡದ ಎಂಟು ಬೃಹತ್ ನಿಘಂಟುಗಳನ್ನು ಕೂಡಾ ಡಿಜಿಟಲೈಸೇಶನ್ ಮಾಡಲಾಗುತ್ತಿದೆ ಎಂದವರು ತಿಳಿಸಿದರು.

ಸೋಮವಾರ ಅಧಿವೇಶನಕನ್ನಡ ಸಾಹಿತ್ಯ ಪರಿಷತ್‌ನ ಸರ್ವ ಸದಸ್ಯರ ವಾರ್ಷಿಕ ಅಧಿವೇಶನ ಸೆ.25ರಂದು ಮಧ್ಯಾಹ್ನ 12.15ರಿಂದ ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಬೆಳಗ್ಗೆ 10:30ರಿಂದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಡಾ.ರಾಜಶೇಖರ್, ಪಿ.ಮಲ್ಲಿಕಾರ್ಜುನಪ್ಪ, ವ.ಚ.ಚೆನ್ನೇಗೌಡ, ನಾರಾಯಣ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News