ಅಂತರಾಳದಿಂದ ಮೂಡಿಬಂದ ಕವಿತೆ ಶಾಶ್ವತ: ಪ್ರದೀಪ್ ಕುಮಾರ್ ಕಲ್ಕೂರ

Update: 2017-09-24 17:01 GMT

ಪುತ್ತೂರು, ಸೆ. 24: ವಿಕೃತ ಚಿಂತನೆಗಳಿಗೆ ಒಳಗಾಗದೆ ಸಂಭ್ರಮದೊಂದಿಗೆ ಒಳ್ಳೆಯ ವಾತಾವರಣದ ಕವಿತೆ ಮೂಡಬೇಕಾಗಿದ್ದು, ಅಂತರಾಳವಾಗಿ ಮೂಡಿ ಬಂದ ಕವನಗಳು ಹೆಚ್ಚು ಸಂಭ್ರಮದಿಂದ ಕೂಡಿ ಶಾಶ್ವತವಾಗಿ ಉಳಿಯುತ್ತದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಅವರು ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ವತಿಯಿಂದ ಜಿಲ್ಲಾ 18ನೇ ಸಾಹಿತ್ಯ ಸಮ್ಮೇಳನದ ದತ್ತಿನಿಧಿ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿ, ಕಥಾಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನಾನುಭವ ಶಾಶ್ವತವಗಿ ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಬದುಕಿನ ದಾರಿ ದೀಪವಾಗುತ್ತದೆ. ಸಾಹಿತ್ಯ ಪರಿಷತ್‌ನ ಪುತ್ತೂರು ಘಟಕ ನಿಜ ಅರ್ಥದಲ್ಲಿ ಸಾಹಿತ್ಯವನ್ನು ಪುತ್ತೂರಿಗೆ ಬಿಂಬಿಸುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸುದಾನ ವಸತಿಯುತ ಶಾಲೆಯ ಶಿಕ್ಷಕಿ ಕವಿತಾ ಅಡೂರು ಮಾತನಾಡಿ ಕವಿತೆ ಜೀವಂತವಾಗಿಲು ಅದರ ಬೇರುಗಳು ಜನತೆಯ ಅನುಭವದಲ್ಲಿ ಇರಬೇಕು. ಇದಕ್ಕೆ ಪೂರಕವಾಗಿ ಮಕ್ಕಳಲ್ಲಿ ಸಾಹಿತ್ಯದ ರುಚಿ ಹತ್ತಿಸಲು ಓದಿನ ಕಮಟವೂ ಅಗತ್ಯವಾಗಿ ನಡೆಯಬೇಕಾಗಿದೆ ಎಂದು ಹೇಳಿದರು.

ಕೆಲವೊಂದು ಕವಿತೆಗಳಲ್ಲಿ ಪ್ರಾಸಕ್ಕೋಸ್ಕರ ಹೊಸ ಪದಗಳನ್ನು ಸೇರಿಸುವ ಕೆಲಸ ನಡೆಯುತ್ತದೆ. ಆದರೆ ಅದು ಒಟ್ಟು ಅರ್ಥ ಆಗದ ರೀತಿಯಲ್ಲಿ ಇರುತ್ತದೆ. ಮನಸ್ಸಿನ ಬಾವೋದ್ವೇಗಕ್ಕೆ ಒಳಗಾಗಿ ಅಥವಾ ಕವಿ ಹತಾಶೆಗೆ ಒಳಗಾಗಿದ್ದ ಸಮಯದಲ್ಲಿ ನಮಗೆ ಅರ್ಥವಾಗದ ಚಿತ್ರದ ಹಾಗೆ ಆಗಿ ಬಿಡುತ್ತದೆ. ಅಲ್ಲಿ ಭಾವನೆಗಳನ್ನು ತಿದ್ದುವ ಕೆಲಸ ಆಗಬೇಕು. ಇಂತಹ ಸಂದರ್ಭದಲ್ಲಿ ಕವಿತೆ ಜೀವಂತವಾಗಿರಲು ಅನುಭವ ಬೇಕಾಗುತ್ತದೆ. ಮಕ್ಕಳು ಪೋಷಕರ ಅಭಿರುಚಿಯಂತೆ ಬೆಳೆಯುತ್ತಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ಘಟಕದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಗೌರವ ಕಾರ್ಯದರ್ಶಿ ಡಾ. ಶ್ರೀಧರ್ ಎಚ್.ಜಿ ಸ್ವಾಗತಿಸಿ, ಗೌರವ ಕೋಶಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ವಂದಿಸಿದರು. ಗೌರವ ಕಾರ್ಯದರ್ಶಿ ಸರೋಜಿನಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಬಳಿಕ ವಿದ್ಯಾರ್ಥಿಗಳು ಮತ್ತು ಯುವ ಕವಿ ಸಾಹಿತಿಗಳ ಕೂಡುವಿಕೆಯಿಂದ ಕವಿಗೋಷ್ಠಿ ಮತ್ತು ಕಥಾಗೋಷ್ಠಿ ನಡೆಯಿತು. ಬಳಿಕ ರಾಧೇಶ್ ತೋಳ್ಪಾಡಿ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಂಜೆ ವಿಶೇಷ ಉಪನ್ಯಾಸ, ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಂ.ಕೆ. ಇಂದಿರಾ ಶತಮಾನದ ನೆನಪುಗಳ ಕುರಿತು ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಡಾ ಗೀತಾ ಕುಮಾರಿ ಉಪನ್ಯಾಸ ನೀಡಿದರು. ಹಿರಿಯ ಪತ್ರಕರ್ತ, ಅಂಕಣಕಾರ ಪ್ರೊ. ವಿ.ಬಿ.ಅರ್ತಿಕಜೆ ಅವರ ‘ಚಿಂತನಗಾಥಾ’ ಕೃತಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್ ಕೃತಿ ಲೋಕಾರ್ಪಣೆಗೊಳಿಸಿದರು. ವೇದಿಕೆಯಲ್ಲಿ ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶಕ ಪ್ರಕಾಶ್ ಕೊಡೆಂಕಿರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News