ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ, ಪರಿಶೀಲನೆ

Update: 2017-09-24 17:03 GMT

ಪುತ್ತೂರು, ಸೆ.24: ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಿವಾರ ಸಂಜೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭಾಯಿ ಅವರು ಆಸ್ಪತ್ರೆಯಲ್ಲಿನ ಶುಚಿತ್ವ ಇನ್ನಿತರ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಲ್ಲಿನ ಶುಚಿತ್ವದ ಕೊರತೆ ಬಗ್ಗೆ ಖೇದ ವ್ಯಕ್ತಪಡಿಸಿದ ಅಧ್ಯಕ್ಷರು ತಾನು ಆಯೋಗದ ಅಧ್ಯಕ್ಷೆಯಾದ ಬಳಿಕ ಪ್ರಥಮ ಬಾರಿಗೆ ಪುತ್ತೂರಿಗೆ ಭೇಟಿ ನೀಡಿದ್ದೇನೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ಸ್ವಚ್ಚವಾಗಿರಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ. ಆಸ್ಪತ್ರೆ ಗೋಡೆಗಳಲ್ಲಿ ಪಾಚಿ ಬೆಳೆದಿದೆ. ಶೌಚಾಲಯದ ನೀರು ವರಾಂಡದಲ್ಲಿ ಹರಿದಾಡುತ್ತಿದೆ. ಒಟ್ಟು ವ್ಯವಸ್ಥೆ ತುಂಬಾ ಕೆಟ್ಟದಾಗಿದೆ. ಆಸ್ಪತ್ರೆ ಕಟ್ಟಡವನ್ನು ನವೀಕರಣಗೊಳಿಸಿ ಹೊಸ ರೂಪ ನೀಡುವ ಬಗ್ಗೆ ಚಿಂತಿಸಲಾಗುವುದು.

ರಾಜ್ಯದ ಬಹುತೇಕ ಆಸ್ಪತ್ರೆಗಳಿಗೆ ತಾನು ಭೇಟಿ ನೀಡಿದ್ದು, ಈ ಪೈಕಿ ಪೈಕಿ ಪುತ್ತೂರು ಆಸ್ಪತ್ರೆ ವ್ಯವಸ್ಥೆ ತುಂಬಾ ಕೆಟ್ಟ ಸ್ಥಿತಿಯಲ್ಲಿದೆ. ಈ ಬಗ್ಗೆ ಶಾಸಕಿ ಹಾಗೂ ಆರೋಗ್ಯ ಸಚಿವರ ಜತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ ಎಂದರು. ವೈದ್ಯರ ಕೊರತೆ ಇರುವುದೂ ನನ್ನ ಗಮನಕ್ಕೆ ಬಂದಿದೆ.

ಫಿಸಿಶಿಯನ್ ಇಲ್ಲದ ಕಾರಣ ರೋಗಿಗಳಿಗೆ ಸಮರ್ಪಕ ಚಿಕಿತ್ಸೆಯೂ ದೊರೆಯುತ್ತಿಲ್ಲ. ನರ್ಸ್‌ಗಳ ಕೊರತೆಯೂ ಕಂಡುಬರುತ್ತಿದೆ. ಇದರಿಂದಾಗಿ ಆಸ್ಪತ್ರೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಂಡು ಬರುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಹಿಳೆಯರ ಕಣ್ಮರೆ, ನಾಪತ್ತೆ ಪ್ರಕರಣ ಹೆಚ್ಚುತ್ತಿದೆ ಎಂದು ನಾಗಲಕ್ಷ್ಮೆ ಭಾಯಿ ಗಮನಕ್ಕೆ ತರಲಾಯಿತು. ಈ ಬಗ್ಗೆ ಮಾತನಾಡಿದ ಅವರು, ಸೋಮವಾರ ಆಯೋಗದ ಜಿಲ್ಲಾ ಸಮಿತಿ ಸಭೆ ಇದೆ. ಇದರಲ್ಲಿ ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಲಾಗುವುದು. ಎಸ್ಪಿ ಸೂಕ್ತ ಉತ್ತರ ನೀಡಬೇಕು. ಮಾತ್ರವಲ್ಲ ತಹಶೀಲ್ದಾರ್‌ಗಳು ಸಭೆಯಲ್ಲಿ ಹಾಜರಿರಲಿದ್ದಾರೆ. ಅವರಿಂದ ಸಮಗ್ರ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.

ಜಿಲ್ಲೆಯಲ್ಲಿ ನಡೆದ ಮಹಿಳಾ ಹತ್ಯೆ ಪ್ರಕರಣದ ತನಿಖೆ ಹಳ್ಳ ಹಿಡಿಯುತ್ತಿರುವುದರ ಬಗ್ಗೆ ಪ್ರಶ್ನಿಸಲಾಯಿತು. ಕಕ್ಕೂರು ಕೊಲೆ ಪ್ರಕರಣದ ಡಿಎನ್‌ಎ ವರದಿ ಇನ್ನೂ ಬಂದಿಲ್ಲ ಎಂದು ತಿಳಿಸಲಾಯಿತು. ದನಿಗೂಡಿಸಿದ ಶಾಸಕಿ ಶಕುಂತಳಾ ಶೆಟ್ಟಿ, ಪುಷ್ಪಲತಾ ಕೊಲೆ ಪ್ರಕರಣ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಕೊಲೆ ನಡೆದು ಮೂರು ವರ್ಷ ಕಳೆಯಿತು. ಕೊಲೆ ನಡೆದ ಸಂದರ್ಭ ಮನೆ ಹೊರಗಿನಿಂದ ಬಾಗಿಲು ಹಾಕಲಾಗಿತ್ತು. ಒಳಗಡೆ ಪುಷ್ಪಲತಾಳ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಇಂತಹ ಯಾವುದೇ ಪ್ರಶ್ನೆಗಳಿಗೂ ಇದುವರೆಗೆ ಉತ್ತರ ಸಿಕ್ಕಿಲ್ಲ. ಕಕ್ಕೂರು ಕೊಲೆ ಪ್ರಕರಣದ ಬಗ್ಗೆಯೂ ಗೊಂದಲ ಪರಿಹಾರವಾಗಿಲ್ಲ ಎಂದರು. ಪ್ರತಿಕ್ರಿಯಿಸಿದ ನಾಗಲಕ್ಷ್ಮೆಭಾಯಿ, ಈ ಎಲ್ಲ ವಿಚಾರಗಳಿಗೆ ಸಮಿತಿ ಸಭೆಯಲ್ಲಿ ಉತ್ತರ ಕಂಡುಕೊಳ್ಳಲಾಗುವುದು ಎಂದರು.

ಅಧ್ಯಕ್ಷರೊಂದಿಗೆ ಶಾಸಕಿ ಶಕುಂತಳಾ ಶೆಟ್ಟಿ, ಆರೋಗ್ಯಾಕಾರಿ ಸುಶೀಲಾ ಪಿ.ಎಸ್., ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ, ಸಿಡಿಪಿಒ ಶಾಂತಿ ಹೆಗ್ಡೆ, ನಾಗರಿಕ ಅಭಿವೃದ್ಧಿ ಸಮಿತಿಯ ಇಬ್ರಾಹಿಂ ಗೋಳಿತ್ತೊಟ್ಟು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News