83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಚಂಪಾ

Update: 2017-09-25 14:21 GMT

 ಮಂಗಳೂರು.ಸೆ,25:ನವೆಂಬರ್ 24ರಿಂದ -26ರವರೆಗೆ ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಸಾಹಿತಿ,ಚಿಂತಕ ಚಂದ್ರ ಶೇಖರ ಪಾಟೀಲ ಅವರನ್ನು ಆಯ್ಕೆಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.

ನಗರದ ತಲಪಾಡಿಯಲ್ಲಿರುವ ಶಾರದಾ ವಿದ್ಯಾ ಸಂಸ್ಥೆಗಳ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾದ ಕನ್ನಡ ಸಾಹಿತ್ಯ ಪರಿಷತ್ತಿನ 101ನೆ ವಾರ್ಷಿಕ ಅಧಿವೇಶನ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ ಎಂದು ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ಕಾವೇರಿ ನಿರ್ವಹಣಾ ಮಂಡಳಿಯನ್ನು ವಿರೋಧಿಸಿ ನಿರ್ಣಯ:-ರಾಜ್ಯದ ರೈತರ ಹಿತಾಸಕ್ತಿ ಹಾಗೂ ನಾಡಿನ ಜನರ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿಯನ್ನು ವಿರೋಧಿಸಿ ಕನ್ನಡ ಸಾಹಿತ್ಯ ಪರಿಷತ್ತಿನ 101 ಅಧಿವೇಶನದಲ್ಲಿ ನಿರ್ಣಯ ಕೈ ಗೊಳ್ಳಲಾಯಿತು.ರಾಮನಗರ ಜಿಲ್ಲೆಯ ಎಂ.ಡಿ.ಶಿವ ಕುಮಾರ್ ಸಭೆಯಲ್ಲಿ ಈ ನಿರ್ಣಯ ಮಂಡಿಸಿದಾಗ ಸಭೆ ಸರ್ವಾನುಮತದಿಂದ ಅನುಮತಿ ಸೂಚಿಸಿದೆ ಎಂದು ಮನು ಬಳಿಗಾರ್ ತಿಳಿಸಿದ್ದಾರೆ.

ರಾಜ್ಯ ಸರಕಾರದಿಂದ ಕನ್ನಡ ಸಾಹಿತ್ಯ ಪರಿಷತ್‌ಗೆ 12 ಕೋಟಿ ರೂ. ಅನುದಾನ ಮಂಜೂರಾಗಿದೆ ಈ ಪೈಕಿ 6 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.ಪ್ರತಿ ಜಿಲ್ಲೆಗೂ ಕಚೇರಿ ನಿರ್ವಹಣೆಗೆ ಇದುವರೆಗೆ ಒಂದು ಲಕ್ಷ ರೂ ಅನುದಾನವನ್ನು ನಿಡಲಾಗುತ್ತಿತ್ತು.ಈ ಬಾರಿ ಈ ಅನುದಾನದಲ್ಲಿ 36 ಸಾವಿರ ರೂ ಹೆಚ್ಚಿಸಲಾಗಿದೆ.ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಿಗೆ 25 ಸಾವಿರದಿಂದ 1ಲಕ್ಷದವರೆಗೂ ಅನುದಾನ ನಿಡಲು ಪರಿಷತ್ತು ಸಿದ್ದವಿದೆ.ಜಿಲ್ಲಾ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೊಂದು ಭವನ ನಿರ್ಮಾಣ ಮಾಡುವ ಗುರಿ ಇದೆ.ಗ್ರಾಮ ಮಟ್ಟದಲ್ಲೂ ಜಮೀನು ನೀಡಿದರೆ ಕನ್ನಡ ಭವನ ನಿರ್ಮಾಣ ಮಾಡಲು ಸಿದ್ಧವಿರುವುದಾಗಿ ಸರಕಾರದ ಗ್ರಾಮಿಣಾಭಿವೃದ್ಧಿ ಸಚಿವರು ಭರವಸೆ ನೀಡಿದ್ದರೆ ಎಂದು ಮನು ಬಳಿಗಾರ್ ತಿಳಿಸಿದ್ದಾರೆ.

 ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂಬ ಬೇಡಿಕೆಯನ್ನು ದೇಶದ ಸರ್ವೊಚ್ಛ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದ್ದರೂ ಹಿರಿಯ ಕಾನೂನು ತಜ್ಞರ ಮೂಲಕ ಮತ್ತೆ ನ್ಯಾಯಾಲಯದ ಹಾಗೂ ಸರಕಾರದ ಮೂಲಕ ಸಮಾನ ಶಿಕ್ಷಣಕ್ಕಾಗಿ ಪ್ರಯತ್ನ ನಡೆಸಲಾಗುವುದು ಎಂದು ಮನು ಬಳಿಗಾರ್ ತಿಳಿಸಿದ್ದಾರೆ.ರಾಜ್ಯದ ಹಿತಾಸಕ್ತಿಗೆ ಧಕ್ಕೆ ಯಾಗುವ ಯಾವುದೇ ವಿಚಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವೌನವಹಿಸುವುದಿಲ್ಲ ಎಂದು ಮನು ಬಳಿಗಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್.ಕಸಾಪ ಪದಾಧಿಕಾರಿಗಳಾದ ಡಾ.ವೈ.ಡಿ.ರಾಜಣ್ಣ,ಪಿ.ಮಲ್ಲಿ ಕಾರ್ಜುನಪ್ಪ ಹಾಗೂ ವಿವಿಧ ಜಿಲ್ಲೆಗಳ ಕಸಾಪ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News