ಮಂಗಳೂರಿನ ಅಪಾರ್ಟ್ ಮೆಂಟ್ ಗಳಲ್ಲಿ ವೇಶ್ಯಾವಾಟಿಕೆ: ಕಟ್ಟುನಿಟ್ಟಿನ ಕ್ರಮಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಸೂಚನೆ

Update: 2017-09-25 13:47 GMT

ಮಂಗಳೂರು, ಸೆ.25: ನಗರದ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಪೊಲೀಸ್ ಇಲಾಖೆಯು ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಸೂಚಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಮುಂಜಾಗರೂಕತೆ ವಹಿಸುವ ಬಗ್ಗೆ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಅಧ್ಯಕ್ಷೆ ಪ್ರೊ. ಹಿಲ್ಡಾ ರಾಯಪ್ಪನ್‌ರ ಅನಿಸಿಕೆಗೆ ಪ್ರತಿಕ್ರಿಯಿಸಿದ ನಾಗಲಕ್ಷ್ಮೀ ಬಾಯಿ ಮಹಿಳೆಯರಿಗೆ ಸಂಬಂಧಿಸಿದಂತೆ ರಾಜ್ಯದ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಮಸ್ಯೆ ಇದೆ ಇದೆ. ಬುದ್ಧಿವಂತರ ಮತ್ತು ಪ್ರಜ್ಞಾವಂತರ ಜಿಲ್ಲೆಯ ಅದರಲ್ಲೂ ಮಂಗಳೂರಿನ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪೊಲೀಸ್ ಇಲಾಖೆ ಯಾವ ಕಾರಣಕ್ಕೂ ಇದನ್ನು ನಿರ್ಲಕ್ಷಿಸಬಾರದು. ತಕ್ಷಣ ಇಂತಹ ಅಪಾರ್ಟ್‌ಮೆಂಟ್‌ಗಳನ್ನು ಗುರುತಿಸಿ ವೇಶ್ಯಾವಾಟಿಕೆಗೆ ಕಡಿವಾಣ ಹಾಕಿ ವರದಿ ಸಲ್ಲಿಸುವಂತೆ ತಿಳಿಸಿದರು.

ಪ್ರೊ.ಹಿಲ್ಡಾ ರಾಯಪ್ಪನ್ ಮಾತನಾಡಿ ಈ ಅಪಾರ್ಟ್‌ಗಳಲ್ಲಿ ಹದಿಹರೆಯದ ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ. ಸುಶಿಕ್ಷಿತರೇ ಇಲ್ಲಿ ದಾರಿ ತಪ್ಪುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಪರಿಸ್ಥಿತಿ ಕೈ ಮೀರೀತು ಎಂದು ಎಚ್ಚರಿಸಿದರು.

ಮಹಿಳೆಯರು, ಮಕ್ಕಳು, ಅಮಾಯಕರ ಮೇಲೆ ಸಾರ್ವಜನಿಕವಾಗಿ ಮಾತ್ರವಲ್ಲ ಕೌಟುಂಬಿಕವಾಗಿಯೂ ದೌರ್ಜನ್ಯವಾಗುತ್ತಿದೆ. ಸಾಂತ್ವನ ಕೇಂದ್ರದ ಪ್ರಯೋಜನ ಪಡೆಯುವ ಮತ್ತು ಪೊಲೀಸ್ ಠಾಣೆಗೆ ದೂರು ನೀಡುವ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಹಾಸ್ಟೆಲ್, ಕಾರ್ಖಾನೆ, ಜೈಲು, ಸರಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ನಡೆಯುವ ನಾನಾ ರೀತಿಯ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ಸಮಿತಿಗಳು ಕಾಟಾಚಾರಕ್ಕೆ ಇರುವುದಲ್ಲ ಎಂಬ ಪ್ರಜ್ಞೆ ಜನರಲ್ಲಿ ಮೂಡಿಸುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ನಾಗಲಕ್ಷ್ಮೀ ಬಾಯಿ ನುಡಿದರು.

ಆಸ್ಪತ್ರೆ ಮುಚ್ಚಿಸಿ: ಪುತ್ತೂರು ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಕಿಡಿಕಾರಿದ ನಾಗಲಕ್ಷ್ಮೀ ಬಾಯಿ ಅದು ಆಸ್ಪತ್ರೆಯೋ, ಭೂಮಿಯ ಮೇಲಿನ ನರಕವೋ ಎಂಬುದು ಗೊತ್ತಾಗುತ್ತಿಲ್ಲ. ಅಲ್ಲಿ ನುರಿತ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಶೌಚಾಲಯವಂತೂ ಶೋಚನೀಯವಾಗಿದೆ. ಇಂತಹ ಆಸ್ಪತ್ರೆ ಇದ್ದು ಏನು ಪ್ರಯೋಜನ? ಮೂಲಭೂತ ಸೌಕರ್ಯ ಕಲ್ಪಿಸಿಕೊಡಲಾಗದಿದ್ದರೆ ತಕ್ಷಣ ಅದನ್ನು ಮುಚ್ಚಿಸಿ ಎಂದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಬೆಳ್ತಂಗಡಿ, ಬಂಟ್ವಾಳ, ಸುಳ್ಯದ ವೈದ್ಯಕೀಯ ತಜ್ಞರನ್ನು ವಾರದಲ್ಲೊಂದು ದಿನ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

 ಕಾವ್ಯಾ ಪ್ರಕರಣ ಏನಾಯಿತು?: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಕಾವ್ಯಾ ಪೂಜಾರಿ ನಿಗೂಢ ಸಾವಿನ ಪ್ರಕರಣದ ಬಗ್ಗೆಯೂ ವಿಚಾರಿಸಿದ ನಾಗಲಕ್ಷ್ಮೀ ಬಾಯಿ ತಕ್ಷಣ ವರದಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದರು.

ಮರು ತನಿಖೆ: ಮೀನುಗಾರಿಕಾ ಕಾಲೇಜಿನ ಪ್ರೊಫೆಸರ್‌ವೊಬ್ಬರು ದೌರ್ಜನ್ಯ ನೀಡಿದ ಬಗ್ಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ ಎಂಬ ಮಹಿಳೆಯೊಬ್ಬರ ಅಳಲಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಪ್ರಕರಣವನ್ನು ಮರು ತನಿಖೆಗೊಳಪಡಿಸಲಾಗುವುದು ಮತ್ತು ತನಿಖಾಧಿಕಾರಿಯನ್ನು ಬದಲಾಯಿಸುವುದಾಗಿ ಹೇಳಿದರು.

ಸಭೆಯಲ್ಲಿ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಹನುಮಂತರಾಯ, ಜಿಪಂ ಸಿಇಒ ಡಾ. ಎಂ.ಆರ್.ರವಿ, ಜಿಲ್ಲಾ ನ್ಯಾಯಾಧೀಶ ಮಲ್ಲನಗೌಡ, ಅಪರ ಜಿಲ್ಲಾಧಿಕಾರಿ ಕುಮಾರ್, ಮಹಿಳಾ ಆಯೋಗದ ಸದಸ್ಯೆ ಧನಲಕ್ಷ್ಮೀ, ಆಯೋಗದ ಅಧ್ಯಕ್ಷೆಯ ಆಪ್ತ ಕಾರ್ಯದರ್ಶಿ ಸುಶೀಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News