ಕಾಂಗ್ರೆಸ್‌ನಿಂದ ಸದೃಢ ಸರಕಾರ: ವಿಷ್ಣುನಾಥನ್

Update: 2017-09-25 15:49 GMT

ಮಂಗಳೂರು, ಸೆ. 25: ರಾಜ್ಯದಲ್ಲಿ ಕಳೆದ ಬಿಜೆಪಿ ಆಡಳಿತಕ್ಕಿಂತ ಕಾಂಗ್ರೆಸ್ ಆಡಳಿತ ಸದೃಢವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗರಿಗೆ ಕಾಂಗ್ರೆಸ್ ಜನಪ್ರಿಯತೆಯ ಬಗ್ಗೆ ಭಯ ಉಂಟಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಹೇಳಿದ್ದಾರೆ.

ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಹಾಗೂ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಜಂಟಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನುಡಿಯದೆ ಮಾಡುವವ ಉತ್ತಮ. ನುಡಿದು ಮಾಡುವವ ಮಧ್ಯಮ. ನುಡಿದು ಮಾಡದವ ಅಧಮ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿಯದೆ ಮಾಡುವ ವರ್ಗಕ್ಕೆ ಸೇರಿದ್ದಾರೆ. ಜನರ ಖಾತೆಗೆ ಹಣ ಜಮಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಆ ಪ್ರಕಾರ ನಡೆದುಕೊಂಡಿಲ್ಲ ಎಂದರು.

ಅಭಿವೃದ್ದಿಯ ಬಗ್ಗೆ ಮುಕ್ತ ಚರ್ಚೆಗೆ ಕಾಂಗ್ರೆಸ್ ಸಿದ್ಧವಿದೆ. ಬಿಜೆಪಿಯವರಿಗೆ ಅಭಿವೃದ್ಧಿಯ ಬಗ್ಗೆ ಮಾತನಾಡಲು ವಿಷಯವಿಲ್ಲ. ಬಸವಣ್ಣರ ಅನುಭವರು ಮಂಟಪದ ಮೂಲಕ ಎಲ್ಲರಿಗೂ ಸಮಾನ ಸ್ಥಾನ ನೀಡಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಭಿವೃದ್ಧಿಗಾಗಿ ಎಲ್ಲರನ್ನೂ ಜೊತೆ ಸೇರಿಸಿಕೊಂಡು ಹೊಗುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಸೂಚನೆಯಂತೆ ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಿ ಸಂಘಟಿಸುವ ಗುರಿ ಹೊಂದಿದ್ದೇವೆ. ಇಲ್ಲಿನ ಶಾಸಕರ ಬಗ್ಗೆ ಜನರು ಪ್ರೀತಿ, ವಿಶ್ವಾಸ ಹೊಂದಿರುವುದನ್ನು ನಾನು ಗಮನಿಸಿದ್ದೇನೆ. ರಾಜ್ಯ ಸರಕಾರದ ವಿವಿಧ ಜನಪರ ಯೋಜನೆಗಳು ಜನತೆಯ ವಿಶ್ವಾಸಕ್ಕೆ ಪಾತ್ರವಾಗಿದೆ. ಇಂದಿರಾ ಕ್ಯಾಂಟೀನ್ ಜನಪ್ರಿಯ ಯೋಜನೆಯಾಗಿದೆ ಎಂದು ವಿಷ್ಣುನಾಥನ್ ಹೇಳಿದರು.

ನುಡಿದಂತೆ ನಡೆದ ಸರಕಾರ: ರೈ

ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ನುಡಿದಂತೆ ನಡೆದಿದೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಭರವಸೆಗಳಲ್ಲಿ ಶೇ. 95ರಷ್ಟನ್ನು ಈಡೇರಿಸಿದೆ. ಕಾಂಗ್ರೆಸ್‌ನಿಂದ ದ.ಕ. ಜಿಲ್ಲೆಗೆ ಸಿಕ್ಕಿರುವ ಪ್ರಯೋಜನಗಳು ಇತರ ಪಕ್ಷಗಳಿಂದ ಸಿಕ್ಕಿಲ್ಲ. ಬಿಜೆಪಿಯವರದ್ದು ಬರೇ ಘೋಷಣೆ ಮಾತ್ರ ಎಂದರು.

 ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜೆ.ಆರ್.ಲೋಬೊ, ಅಭಯಚಂದ್ರ ಜೈನ್, ವಿಧಾನಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ, ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಸಲೀಂ ಅಹ್ಮದ್, ಉಪ ಮೇಯರ್ ರಜನೀಶ್, ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಪಿ.ವಿ.ಮೋಹನ್, ಮಿಥುನ್ ರೈ, ವಿಜಯಕುಮಾರ್ ಶೆಟ್ಟಿ, ಸುರೇಶ್ ಬಳ್ಳಾಲ್, ಅಶ್ರಫ್, ವಿಶ್ವಾಸ್‌ದಾಸ್, ಬಿ.ಎಚ್.ಖಾದರ್, ಮುಹಮ್ಮದ್ ಹುಸೇನ್, ಮಮತಾ ಗಟ್ಟಿ, ಶಾಲೆಟ್ ಪಿಂಟೊ, ನಮಿತಾ, ಶಶಿಕಲಾ, ಕು.ಅಪ್ಪಿ, ಪ್ರತಿಭಾ ಕುಳಾಯಿ, ಎಂ.ಶಶಿಧರ್ ಹೆಗ್ಡೆ, ಅಬೂಬಕರ್ ಬಜಾಲ್, ನವೀನ್ ಡಿಸೋಜಾ, ದಿವಂಗತ ಮುಹಮ್ಮದ್ ಬದ್ರುದ್ದೀನ್ ಅವರ ಕುಟುಂಬಸ್ಥರು ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಿ.ಮುಹಮ್ಮದ್ ಬದ್ರುದ್ದೀನ್ ಅವರ ಸಂಸ್ಮರಣೆ ನಡೆಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News