ಭಟ್ಕಳ ಅರ್ಬನ್ ಬ್ಯಾಂಕ್‍ನಿಂದ ಶೇ.14 ಲಾಭಾಂಶ ಘೋಷಣೆ

Update: 2017-09-26 12:32 GMT

ಭಟ್ಕಳ,ಸೆ.26: ರಾಜ್ಯದ ಪ್ರತಿಷ್ಠಿತ ಅರ್ಬನ್ ಕೋ-ಅಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ., ಇದರ 53ನೇ  ಸಾಲಿನ ವಾರ್ಷಿಕ ಸರ್ವಸಾಧಾರಣಾ ಸಭೆಯು ಭಟ್ಕಳದ ನ್ಯೂ ಇಂಗ್ಲೀಷ್ ಶಾಲೆಯ ಕಮಲಾವತಿ ರಾಮನಾಥ ಸಭಾ ಭವನದಲ್ಲಿ ನಡೆಯಿತು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಾಜಿದ್ ಚೌಗುಲೆ ಸದಸ್ಯರಿಗೆ ಮಾಹಿತಿ ನೀಡಿ, ಬ್ಯಾಂಕಿನ ಪ್ರಗತಿಯ ವರದಿಯನ್ನು ಸದಸ್ಯರ ಮುಂದಿಡುತ್ತಾ ಮಾರ್ಚ 2017 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ನಮ್ಮ ಬ್ಯಾಂಕು ರೂ.7 ಕೋಟಿ 96 ಲಕ್ಷ ನಿರ್ವಹಣಾ ಲಾಭ ಗಳಿಸುವುದರೊಂದಿಗೆ ಕರಾವಳಿ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಅರ್ಬನ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

2016-17ನೇ ಸಾಲಿನಲ್ಲಿ ಬ್ಯಾಂಕಿನ ಷೇರು ಬಂಡವಾಳವು ರೂ.12 ಕೋಟಿ ಇದ್ದು, ಸದಸ್ಯರ ಸಂಖ್ಯೆಯು 23506 ರಷ್ಟಾಗಿದೆ. ಬ್ಯಾಂಕಿನ ಠೇವಣಿ ಸಂಗ್ರಹವು ರೂ. 406 ಕೋಟಿ ತಲುಪಿದ್ದು, ಸಾಲ ಮುಂಗಡವು ರೂ.195 ಕೋಟಿಯಷ್ಟಾಗಿದೆ. 

ಬ್ಯಾಂಕಿನ ನಿವ್ವಳ ಎನ್.ಪಿ.ಎ. ಪ್ರಮಾಣವು 2010-11 ನೇ ಸಾಲಿನಿಂದ ನಿರಂತರವಾಗಿ ಶೂನ್ಯ ಪ್ರಮಾಣದಲ್ಲೇ ಮುಂದುವರಿದಿದೆ. ಬ್ಯಾಂಕಿನ ಒಟ್ಟೂ ಅನುತ್ಪಾದಕ ಆಸ್ತಿಯ ಪ್ರಮಾಣವು ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ.  ಆದಾಯಕರ ಪಾವತಿಯ ನಂತರ ವರ್ಷಾಂತ್ಯಕ್ಕೆ ಬ್ಯಾಂಕು ರೂ. 5 ಕೋಟಿ 9 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ.  ಬ್ಯಾಂಕಿನ ಒಟ್ಟೂ ಗುಂತಾವಣಿಯು ರೂ.231 ಕೋಟಿ ಆಗಿದ್ದು, ವಷಾಂತ್ಯಕ್ಕೆ ಬ್ಯಾಂಕಿನ ಕಾಯ್ದಿಟ್ಟ ನಿಧಿಯು ರೂ.45 ಕೋಟಿ ಯಷ್ಟಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳವು ರೂ.463 ಕೋಟಿ 77 ಲಕ್ಷವಾಗಿದ್ದು, ಬ್ಯಾಂಕಿನ ಒಟ್ಟೂ ವ್ಯವಹಾರವು ವರ್ಷಾಂತ್ಯಕ್ಕೆ ರೂ.601 ಕೋಟಿ ಯಷ್ಟಾಗಿದೆ.  2016-17 ನೇ ಸಾಲಿನಲ್ಲಿ ಬ್ಯಾಂಕು ಸದಸ್ಯರಿಗೆ ಶೇಕಡಾ 14 ಡಿವಿಡೆಂಡ್‍ನ್ನು ಘೋಷಿಸಿದೆ ಎಂದು ಹೇಳಿದರು.

ಸಭೆಗೆ ಆಗಮಿಸಿದ್ದ ಸದಸ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಪ್ರಧಾನ ಕಾರ್ಯನಿರ್ವಾಹಕ ಎಸ್. ಎ. ರಜಾಕ್ ಬ್ಯಾಂಕಿನ ಷೇರುದಾರರ ಹಾಗೂ ಗ್ರಾಹಕರ ಸಹಕಾರ, ಆಡಳಿತ ಮಂಡಳಿಯವರ ಸಮಯೋಚಿತ ಸಲಹೆ ಹಾಗೂ ಪ್ರೋತ್ಸಾಹ, ಸಿಬ್ಬಂದಿಗಳ ಅವಿರತ ಶ್ರಮದಿಂದ ಬ್ಯಾಂಕು ಪ್ರಗತಿ ಹೊಂದಲು ಸಾಧ್ಯವಾಗಿದೆ. ಬ್ಯಾಂಕು ಗ್ರಾಹಕರ ಹಿತದೃಷ್ಟಿಗನುಸಾರವಾಗಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ನವೀನ ಅವಿಷ್ಕಾರದೊಂದಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುವಲ್ಲಿ ಮುನ್ನೆಡೆದಿದೆ. 

ಸನ್ 1990 ರಲ್ಲೇ  ಗಣಕೀಕೃತ ಬ್ಯಾಂಕಿಂಗ್ ವ್ಯವಹಾರ ವನ್ನು ಆರಂಭಿಸಿದ ಪ್ರಥಮ ಬ್ಯಾಂಕ್ ನಮ್ಮ ಬ್ಯಾಂಕಾಗಿದೆ. ಸನ್ 2004 ರಲ್ಲಿ ಎಟಿಎಮ್ ಅಳವಡಿಸಿ, ಕರಾವಳಿ ಜಿಲ್ಲೆಯಲ್ಲೇ ಪ್ರಪ್ರಥಮವಾಗಿ ಎಟಿಎಮ್ ಅಳವಡಿಸಿದ ಅರ್ಬನ್ ಬ್ಯಾಂಕ್ ನಮ್ಮ ಬ್ಯಾಂಕ್, ಸನ್ 2013 ರಲ್ಲಿ ಸಿಬಿಎಸ್ ಅಳವಡಿಸಿದ ಪ್ರಥಮ ಬ್ಯಾಂಕ್,   ಉತ್ತಮ ಕೋ-ಆಪರೇಟಿವ್ ಬ್ಯಾಂಕಿಂಗ್ ಸರ್ವೀಸ್ ಆಧಾರದ ಮೇಲೆ ISO ಸರ್ಟಿಫಿಕೇಟ್ ಪಡೆದ ಪ್ರಥಮ ಬ್ಯಾಂಕ್, ಕರಾವಳಿ ಪ್ರದೇಶದಲ್ಲಿ ಪ್ರಥಮವಾಗಿ ರುಪೇ ಎಟಿಎಮ್ ಕಾರ್ಡ ಬಿಡುಗಡೆ ಮಾಡಿದ ಬ್ಯಾಂಕ್ ನಮ್ಮದಾಗಿದೆ.  ಇದಲ್ಲದೇ ದಿನದ 24 ಘಂಟೆಯೂ ದೊರಕುವಂತೆ ವಾಟರ್ ಎಟಿಮ್ ಸೌಲಭ್ಯವನ್ನು ಭಟಕಳ ಜನತೆಗೆ ನೀಡಿದೆ.  ಬ್ಯಾಂಕಿನ ಮುಖ್ಯ ಕಟ್ಟಡವು ಅಲ್ಕೋ ಪೆನಲಿಂಗ್ ವಿನ್ಯಾಸದೊಂದಿಗೆ ರೂಪಾಂತರಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬ್ಯಾಂಕಿನ ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಸುಭಾಷ ಎಂ. ಶೆಟ್ಟಿ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಗಳನ್ನು ಓದಿದರು. ಬ್ಯಾಂಕಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಗತ್ಯದ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದುಕೊಂಡರು. ಹಲವು ಸದಸ್ಯರು ಬ್ಯಾಂಕಿನ ಹಿತದೃಷ್ಟಿಯಿಂದ ಅನೇಕ ಸಲಹೆ, ಸೂಚನೆಗಳನ್ನು ನೀಡಿದರು. 

ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಶೇಖ್ ಶಬ್ಬರ್ ಖಾದಿರ್ ಬಾಷಾ, ನಿರ್ದೇಶಕರುಗಳಾದ ಶ್ರೀಧರ ನಾಯ್ಕ, ಅಬ್ದುಲ್ ಖಾಲಿಕ್ ಸೌದಾಗರ್, ಜುಬೇರ್ ಕೋಲಾ, ಜಗದೀಶ ಎಂ. ಪೈ, ಇಮ್ತಿಯಾಜ್ ಅಹಮ್ಮದ್ ಜುಬಾಪು, ಜಾಫರ್ ಸಾಧಿಕ್ ಶಾಬಂದ್ರಿ, ವಿಕ್ಟರ್ ಗೋಮ್ಸ, ಪರಿ ಮಹ್ಮದ್ ಹುಸೇನ್, ಪರ್ವೀನ್ ಬಾಬಿ ಮುಲ್ಲಾ,  ಮೆಹಬೂಬಿ ಪಟೇಲ್ ಉಪಸ್ಥಿತರಿದ್ದರು.  ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ವಸಂತ ಶಾಸ್ತ್ರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News