ರಾಜ್ಯ ಮಟ್ಟದ ದಸರಾ ಈಜು ಸ್ಪರ್ಧೆ : ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗೆ 2 ಚಿನ್ನ

Update: 2017-09-26 14:20 GMT

ಪುತ್ತೂರು,ಸೆ.26: ಇಲ್ಲಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಸುಹಾಸ್.ಪಿ.ಎಂ ಅವರು ರಾಜ್ಯ ಮಟ್ಟದ ದಸರಾ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆದಿದ್ದಾರೆ.

ಮೈಸೂರಿನ ಚಾಮುಂಡೀ ವಿಹಾರ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ಇವರು 100ಮೀ ಬಟರ್‍ಫ್ಲೈ, 4*100ಮೀ ಮೆಡ್ಲೇರಿಲೇಯಲ್ಲಿ ಚಿನ್ನ, 4*100 ಫ್ರೀಸ್ಟೈಲ್ ರಿಲೇಯಲ್ಲಿ ಬೆಳ್ಳಿ ಮತ್ತು 200ಮೀ ವೈಯಕ್ತಿಕ ಮೆಡ್ಲೇಯಲ್ಲಿ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.
ಈ ಮೊದಲು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅವರು 4 ಚಿನ್ನ ಮತ್ತು 1 ಕಂಚಿನ ಪದಕ ಪಡೆದಿದ್ದರು. ಹಾಸನದಲ್ಲಿ ನಡೆದ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ 2 ಚಿನ್ನ ಮತ್ತು 4 ಬೆಳ್ಳಿ ಪದಕದ ಸಾಧನೆ ಮಾಡಿದ್ದರು.

ಬೆಂಗಳೂರಿನ ಬಿಎನ್‍ಎಂಐಟಿಯ ಆಶ್ರಯದಲ್ಲಿ ಬಸವನಗುಡಿ ಈಜುಕೊಳದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಅಂತರ್ಕಾಲೇಜು ಈಜು ಸ್ಪರ್ಧೆಯಲ್ಲಿ 9 ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಸುಹಾಸ್ ಒಟ್ಟು ಹತ್ತು ವಿಭಾಗಗಳಲ್ಲಿ ಸ್ಪರ್ಧಿಸಿದ್ದರು ಇದರಲ್ಲಿ 200ಮೀ, 100ಮೀ, 50ಮೀ ಬಟರ್‍ಫ್ಲೈ, 1500ಮೀ, 400ಮೀ, 200ಮೀ, 100ಮೀ ಫ್ರೀಸ್ಟೈಲ್, 400ಮೀ, 200ಮೀ ವೈಯಕ್ತಿಕ ಮೆಡ್ಲೇ ವಿಭಾಗದಲ್ಲಿ ರಜತ ಪದಕ ಮತ್ತು 100ಮೀ ಬ್ರೆಸ್ಟ್‍ಸ್ಟ್ರೋಕ್‍ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಸಾಧನೆಯಿಂದ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಈ ಕ್ರೀಡಾಕೂಟದ ಪುರುಷರ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.

ಮುಂದಿನ ತಿಂಗಳು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಈಜು ಸ್ಪರ್ಧೆಯಲ್ಲಿ  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡವನ್ನು ಇವರು ಪ್ರತಿನಿಧಿಸಲಿದ್ದಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ  ಬಾಲಚಂದ್ರ ಗೌಡ ಭಾರ್ತಿಕುಮೇರು ಅವರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News