ಐತ್ತೂರು : ಸಂಚಾರಿ ಪಡಿತರ ವಿತರಣೆಯ ಅಕ್ಕಿಯಲ್ಲಿ ಹುಳ, ಗ್ರಾಹಕರಿಂದ ಆಕ್ಷೇಪ

Update: 2017-09-26 14:28 GMT

ಕಡಬ,ಸೆ.26:  ಸಂಚಾರಿ ನ್ಯಾಯಬೆಲೆ ವಾಹನದಲ್ಲಿ ಪಲಾನುಭವಿಗಳಿಗೆ ವಿತರಣೆ ಮಾಡುವ  ಅಕ್ಕಿಯಲ್ಲಿ ಹುಳ ಕಂಡು ಬಂದ  ಹಿನ್ನೆಲೆಯಲ್ಲಿ ಪಡಿತರದಾರರು ಪಡಿತರ ಸ್ವೀಕರಿಸಲು ನಿರಾಕರಿಸಿದ ಘಟನೆ  ಐತ್ತೂರು ಗ್ರಾಮದ ನೇಲ್ಯಡ್ಕದಲ್ಲಿ ಸೆ.26 ನಡೆದಿದೆ. 

ನೇಲ್ಯಡ್ಕದಲ್ಲಿ ಪ್ರತಿ ತಿಂಗಳ 26 ನೇ ತಾರೀಕಿನಂದು ಸಂಚಾರಿ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಅಂತೆಯೇ ಸೆ. 26 ರಂದು ಬೆಳಿಗ್ಗೆ  ಪಡಿತರ ವಿತರಿಸಲು ಅಗಮಿಸಿದ ಪಡಿತರ ವಾಹನದಲ್ಲಿ ಅಕ್ಕಿ ಚೀಲಗಳನ್ನು ತೆರೆದು ಪಡಿತರ ಚೀಟಿದಾರರಿಗೆ ಅಕ್ಕಿ ವಿತರಿಸುತ್ತಿದ್ದಂತೆ ಅಕ್ಕಿಯಲ್ಲಿ  ಹುಳಗಳು(ಗುಗ್ಗುರು) ರಾಶಿರಾಶಿ ಕಂಡು ಬಂದಿದ್ದು ಏಕಾಏಕಿ ಕೋಪಗೊಂಡ ಪಡಿತರ ಫಲಾನುಭವಿಗಳು ಪಡಿತರ ಅಕ್ಕಿ ಸ್ವೀಕರಿಸಲು ನಿರಾಕರಿಸಿ ಐತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ.  ಅಧ್ಯಕ್ಷ ಸತೀಶ್ ಕೆ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಅಕ್ಕಿಯಲ್ಲಿ ಹುಳಗಳ ರಾಶಿಯನ್ನು ಕಂಡು ಪಡಿತರ ವಿತರಕರನ್ನು ತರಾಟೆಗೆ ತೆಗೆದುಕೊಂಡರು.   ಇಂತಹ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೂಡಲೇ ಅಧಿಕಾರಿಗಳು ಪಡಿತರ ವಿತರಣೆಯನ್ನು ಸ್ಥಗಿತಗೊಳಿಸಿ ಸೆ.27ರಂದು ಉತ್ತಮ ಗುಣಮಟ್ಟದ ಪಡಿತರ ಅಕ್ಕಿಯನ್ನು ತಂದು ವಿತರಿಸುವುದಾಗಿ ಅಧ್ಯಕ್ಷರಿಗೆ ನೀಡಿದ ಭರವಸೆಯಂತೆ ಸಾರ್ವಜನಿಕರು ಸ್ಥಳದಿಂದ ಪಡಿತರ ಪಡೆಯದೇ ತೆರಳಿದರು. ಸ್ಥಳದಲ್ಲಿ ಗ್ರಾ.ಪಂ.ಸದಸ್ಯ ಶ್ರೀಧರ ಗೌಡ ಸುಳ್ಯ, ಪ್ರಮುಖರಾದ ನಾರಾಯಣ ಶೆಟ್ಟಿ ಅತ್ಯಡ್ಕ, ಪಂಚಾಯತ್ ಸಿಬ್ಬಂದಿ ತಾರನಾಥ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News