ಯುನಿವೆಫ್ ನಿಂದ ಕುರ್ ಆನ್ ಪರಿಚಯ ಅಭಿಯಾನ: ಸೆ.28ರಂದು ಉದ್ಘಾಟನೆ

Update: 2017-09-27 03:56 GMT

ಮಂಗಳೂರು, ಸೆ.27: ಇಸ್ಲಾಮಿನ ಮೂಲಗ್ರಂಥ ಪವಿತ್ರ ಕುರ್ ಆನ್ ಗ್ರಂಥದಲ್ಲೇನಿದೆ? ಅದರಲ್ಲಿರುವ ವಿಚಾರಗಳು ಇಂದಿಗೂ ಪ್ರಸ್ತುತವೇ? ಅದರಲ್ಲಿ ಏನಾದರೂ ಆಕ್ಷೇಪಾರ್ಹ ವಿಚಾರಗಳಿವೆಯೇ? ಮುಂತಾದ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನೀಡಲು ಯುನಿವೆಫ್ ಕರ್ನಾಟಕ ಒಂದು ತಿಂಗಳ ಕುರ್ ಆನ್ ಪರಿಚಯ ಅಭಿಯಾನವನ್ನು ಹಮ್ಮಿಕೊಂಡಿದೆ. 

'ಓದಿರಿ ಸ್ರಷ್ಟಿಕರ್ತನ ಸಂದೇಶವನ್ನು' ಎಂಬ ಕೇಂದ್ರೀಯ ವಿಷಯದಲ್ಲಿ 2017ರ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 27ರ ತನಕ ನಡೆಯಲಿರುವ ಈ ಅಭಿಯಾನದಲ್ಲಿ ಕುರ್ ಆನ್ ನ ಮಾನವೀಯ ಸಂದೇಶಗಳನ್ನು ಪ್ರಸರಿಸಿ, ಮಾನವ ಮೋಕ್ಷಕ್ಕಾಗಿ ಅದು ತೋರುವ ದಾರಿಯನ್ನು ಪರಿಚಯಿಸಿ, ಕುರ್ ಆನ್ ನ ಬಗ್ಗೆ ಇರುವ ಅಪಕಲ್ಪನೆಗಳನ್ನು ದೂರೀಕರಿಸಿ ಅದನ್ನು ಸಾರ್ವತ್ರಿಕಗೊಳಿಸಲು ಯುನಿವೆಫ್ ಯತ್ನಿಸಲಿದೆ. ಸೆಪ್ಟೆಂಬರ್ 28ರಂದು ಈ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಉಳ್ಳಾಲ ಮುಕ್ಕಚ್ಚೇರಿಯ ನಿಮ್ರಾ ಮಸೀದಿಯಲ್ಲಿ ನೆರವೇರಲಿದೆ.

ರಾತ್ರಿ 8:15ಕ್ಕೆ ಜರಗಲಿರುವ ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ಹಾಗೂ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿ 'ಕುರ್ ಆನ್:  ಹೊಸ ಜಗತ್ತನ್ನು ನಿರ್ಮಿಸಿದ ಗ್ರಂಥ' ಎಂಬ ವಿಷಯದಲ್ಲಿ ಉದ್ಘಾಟನಾ ಭಾಷಣ ಮಾಡುವರು. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಅಭಿಯಾನದ ಸಂಚಾಲಕ ಯು.ಕೆ. ಖಾಲಿದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News